ಬಲಮುರಿಯ ಮಹದೇವ ಕ್ರೀಡಾ ಮಂಡಳಿ ವತಿಯಿಂದ ಬಳಂಗಮುಡಿ ಮೈದಾನದಲ್ಲಿ ಆಯೋಜಿಸಿದ್ದ ಹಿಂದು ಕಪ್ ಜಿಲ್ಲಾ ಮಟ್ಟದ ಹಗ್ಗ ಜಗ್ಗಾಟ ಸ್ಪರ್ಧೆಯ ರೋಚಕ ಕ್ಷಣ. 
ಕೊಡಗು

ಈಶ್ವರ ಇಗ್ಗುತ್ತಪ್ಪ ತಂಡ ಪ್ರಥಮ

ನಾಪೋಕ್ಲು: ಇಲ್ಲಿಗೆ ಸಮೀಪದ ಬಲಬೇರಿ ಗ್ರಾಮದ ಮಹಾದೇವ ಕ್ರೀಡಾ ಮಂಡಳಿ ವತಿಯಿಂದ ಬಳಂಗಮುಡಿ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಹಿಂದು ಕಪ್ ಹಗ್ಗ ಜಗ್ಗಾಟದ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಈಶ್ವರ ಇಗ್ಗುತ್ತಪ್ಪ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಭಜರಂಗಿ ಯೂತ್ ಫ್ರೆಂಡ್ಸ್ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು. ವಿಜೇತ ಈಶ್ವರ ಇಗ್ಗುತ್ತಪ್ಪ ತಂಡಕ್ಕೆ ಪ್ರಥಮ ಬಹುಮಾನ 20 ಸಾವಿರ ರೂ.ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಭಜರಂಗಿ ಯೂತ್ ಫ್ರೆಂಡ್ಸ್ ತಂಡಕ್ಕೆ ದ್ವಿತೀಯ ಬಹುಮಾನ 15 ಸಾವಿರ ರೂ. ನಗದು ಮತ್ತು ಟ್ರೋಫಿ, ತೃತೀಯ ಸ್ಥಾನ ಪಡೆದ ಆದರ್ಶ ಯೂತ್ ಫ್ರೆಂಡ್ಸ್ ತಂಡಕ್ಕೆ 10 ಸಾವಿರ ರೂ. ನಗದು ಮತ್ತು ಟ್ರೋಫಿ ವಿತರಿಸಲಾಯಿತು.
ಮಹಿಳೆಯರ ವಿಭಾಗದಲ್ಲಿ ಹಾತೂರು ಫ್ರೆಂಡ್ಸ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಕಿಗ್ಗಾಲು ಗ್ರಾಮದ ಚಾಮುಂಡೇಶ್ವರಿ ಮಹಿಳಾ ತಂಡ ರನ್ನರ್ ಅಪ್ ಪ್ರಶಸ್ತಿ ಗಳಿಸಿತು. ವಿಜೇತ ಹಾತೂರು ಫ್ರೆಂಡ್ಸ್ ತಂಡಕ್ಕೆ ಪ್ರಥಮ ಬಹುಮಾನ 20 ಸಾವಿರ ರೂ. ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಚಾಮುಂಡೇಶ್ವರಿ ಮಹಿಳಾ ತಂಡಕ್ಕೆ ದ್ವಿತೀಯ 15 ಸಾವಿರ ರೂ. ನಗದು ಮತ್ತು ಟ್ರೋಫಿ ಹಾಗೂ ತೃತೀಯ ಸ್ಥಾನ ಪಡೆದ ಚೇರಂಬಾಣೆಯ ಗೌಡಮಹಿಳಾ ಒಕ್ಕೂಟ ತಂಡಕ್ಕೆ 10 ಸಾವಿರ ರೂ. ನಗದು ಮತ್ತು ಟ್ರೋಫಿ ವಿತರಿಸಲಾಯಿತು.
ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಟ್ರೋಫಿ ದಾನಿ ಪೆಬ್ಬಾಟಂಡ ಪುಷ್ಪಪೆಮ್ಮಯ್ಯ ಮಾತನಾಡಿ, ಕ್ರೀಡೆ ಸಮಾಜದ ಸಾಮರಸ್ಯಕ್ಕೆ ಸಹಕಾರಿ ಎಂದರು. 
ಹಾಸನ ಅಬಕಾರಿ ಇಲಾಖೆ ಉಪ ವಿಭಾಗದ ಆಯುಕ್ತ ನಂಗಾರು ಸುಮಿತ ನಿಂಗರಾಜು ಮಾತನಾಡಿ, ಯುವಜನರು ಶಿಕ್ಷಣ ಪಡೆದು ಉತ್ತಮ ಉದ್ಯೋಗ ಪಡೆದುಕೊಳ್ಳಬೇಕು ಎಂದರು.
ಕ್ರೀಡಾ ಮಂಡಳಿ ಕಾರ್ಯದರ್ಶಿ ಬೊಳ್ಳಚೆಟ್ಟಿರ ಜಯಂತಿ ಮಾತನಾಡಿ, ಪುರುಷರು ಮತ್ತು ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಕ್ರೀಡಾಕೂಟ ಆಯೋಜಿಸಲಾಗಿದೆ. ಗ್ರಾಮೀಣ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆಯಾಗಿದೆ ಎಂದು ಹೇಳಿದರು.
ಮಹಾದೇವ ಕ್ರೀಡಾ ಮಂಡಳಿ ಅಧ್ಯಕ್ಷ ತೊತ್ತಿಯಂಡ ಬನ್ಸಿ ಚಿಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಪಾರಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಡೆಯಂಡ ಕಟ್ಟಿ ಕುಶಾಲಪ್ಪ, ಬಹುಮಾನ ಮತ್ತು ಟ್ರೋಫಿಗಳ ದಾನಿಗಳಾದ ಹೆಬ್ಬಾಟಂಡ ಪುಷ್ಪ ಪೆಮ್ಮಯ್ಯ, ಉದ್ಯಮಿ ಚೆನ್ನೈ ಗುಡ್ಡೆರ ಸತೀಶ್ ಶಂಭು, ಕುಂದನ ದಯಾನಂದ, ಚಂಗಂಡ ಗಣೇಶ ಸೋಮಯ್ಯ, ನಿವೃತ್ತ ಹವಾಲ್ದಾರ್ ಪೊನ್ನಚನ ಮನು ಮೋಹನ್, ಕ್ರೀಡಾ ಮಂಡಳಿ ಉಪಾಧ್ಯಕ್ಷ ಗುಡ್ಡೆರ ಲಕ್ಷು, ಸಹ ಕಾರ್ಯದರ್ಶಿ ಬೊಳ್ಳಚೆಟ್ಟಿರ ಅಚ್ಚಪ್ಪ, ಪೆಬ್ಬಾಟಟಡ ತಿಮ್ಮಯ್ಯ, ಚೈಯಟಡ ಕಸ್ತೂರಿ, ಅಟಗಿರ ಕುಸುಮಾ ಇದ್ದರು. ಪಾರಾಣೆ ಶಾಲೆಯ ಶಿಕ್ಷಕ ಮಂಜು, ಹಾತೂರು ಶಾಲೆಯ ಡೆನ್ಸಿ ದೇವಯ್ಯ, ಚೈಯಟಡ ರಘು ತಿಮ್ಮಯ್ಯ ತೀರ್ಪುಗಾರರಾಗಿ ಭಾಗವಹಿಸಿದ್ದರು. ನಂತರ ಹಾತೂರು ಹಾಗೂ ಕಾವೇರಿ ಫ್ರೆಂಡ್ಸ್ ಮಹಿಳಾ ತಂಡಗಳಿಂದ ಪ್ರಥಮ ಪಂದ್ಯಾಟ ಜರುಗಿತು.