ನಾಪೋಕ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕುಡಿಯೋಳಂಡ ಕುಟುಂಬಸ್ಥರು ಕುಂಡಿಯೊಳಂದ ಕಪ್ ಹಾಕಿ ಉತ್ಸವದ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ದಾಖಲೆಯ ಸವಿನೆನಪಿಗಾಗಿ ನಿರ್ಮಿಸಿರುವ ಕ್ರೀಡಾಂಗಣವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಎಸ್ ಪೊನ್ನಣ್ಣ ಲೋಕಾರ್ಪಣೆ ಮಾಡಿದದರು.
ನಾಪೋಕ್ಲು: ಕೊಡಗು ಜಿಲ್ಲೆ ಮಿಲಿಟರಿ ಸೇವೆಗೆ ಹೇಗೆ ಹೆಸರುವಾಸಿಯಾಗಿದೆಯೋ ಅದೇ ರೀತಿ ಕ್ರೀಡೆಗೂ ಹೆಸರುವಾಸಿಯಾಗಿದೆ. ಹಾಕಿ ಕ್ರೀಡೆಗೆ ಸರ್ಕಾರ ನೀಡುತ್ತಿರುವ ಅನುದಾನದ ಸದ್ಬಳಕೆಯಾಗಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಸಲಹೆ ನೀಡಿದರು.
ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕುಡಿಯೋಳಂಡ ಕುಟುಂಬಸ್ಥರು ಕುಂಡಿಯೊಳಂದ ಕಪ್ ಹಾಕಿ ಉತ್ಸವದ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ದಾಖಲೆಯ ಸವಿ ನೆನಪಿಗಾಗಿ ನಿರ್ಮಿಸಿರುವ ಕ್ರೀಡಾಂಗಣವನ್ನು ಶನಿವಾರ ಲೋಕಾರ್ಪಣೆ ಮಾಡಿದ ಬಳಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಾಕಿ ಕ್ರೀಡೆಗೆ ಸರ್ಕಾರ ಒಂದು ಕೋಟಿ ರೂಪಾಯಿ ಅನುದಾನ ನೀಡುವ ಮೂಲಕ ಹಾಕಿ ಕ್ರೀಡೆಯನ್ನು ಉತ್ತೇಜಿಸುತ್ತಿದೆ. ಸರ್ಕಾರದಿಂದ ಹಣ ತರುವುದು ಸುಲಭದ ಕೆಲಸವಲ್ಲ. ಕ್ರೀಡೆಗೆ ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಒದಗಿಸುತ್ತಿರುವುದು ಹಾಕಿ ಉತ್ಸವಕ್ಕೆ ಮಾತ್ರ. ಕೊಡಗಿನಲ್ಲಿ ಪ್ರತಿ ವರ್ಷ ಹಾಕಿ ಉತ್ಸವ ನಡೆಯುವ ಸಂದರ್ಭದಲ್ಲಿ ಸರ್ಕಾರದ ಚಿಹ್ನೆ ಹಾಕಿ ಕ್ರೀಡಾ ಇಲಾಖೆಯನ್ನು ಗುರುತಿಸುವ ಕೆಲಸವನ್ನು ಮಾಡಬೇಕು ಎಂದರು.
ಕೊಡಗಿನಲ್ಲಿ ಸಂಸ್ಕೃತಿ, ಸಂಪ್ರದಾಯಗಳನ್ನು ಹೇಗೆ ಜೀವಂತವಾಗಿ ಉಳಿಸಿದ್ದೇವೆಯೋ ಅದೇ ರೀತಿ ಸಮುದಾಯದ, ಕ್ರೀಡಾಪ್ರೇಮಿಗಳ ಒಳಿತಿಗಾಗಿ ಕ್ರೀಡಾಂಗಣವನ್ನು ನಿರ್ಮಿಸಿರುವುದು ಆ ನಿಟ್ಟಿನಲ್ಲಿ ಒಂದು ಬಲವಾದ ಹೆಜ್ಜೆ ಎಂದರು.
ಕುಂಡಿಯೊಳಂಡ ಹಾಕಿ ಉತ್ಸವದ ಅಧ್ಯಕ್ಷ ರಮೇಶ್ ಮುದ್ದಯ್ಯ ಮಾತನಾಡಿ, ಯಾವುದೇ ಫಲಕ್ಷಗಳ ನಿರೀಕ್ಷೆ ಮಾಡದೆ ಚೋಕಿರ, ಬೊಳ್ಳೆ ಪಂಡ, ಮಕ್ಕಿ ಬ್ರಾಹ್ಮಣ ಸೇರಿದಂತೆ ಐದು ಕುಟುಂಬಸ್ಥರು 52 ಎಕರೆ ಜಾಗವನ್ನು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದಾರೆ. ಇಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣದ ಜತೆಗೆ ಕ್ರೀಡೆಗೂ ಉತ್ತೇಜನ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲ ಕ್ರೀಡಾ ಕ್ಷೇತ್ರಗಳಲ್ಲೂ ಮುಂದೆ ಬರಬೇಕು ಎಂದು ಆಶಿಸಿ ಹಾಕಿ ಉತ್ಸವದ ಮೆಲುಕು ಹಾಕಿದರು.
ಕುಂಡಿಯೊಳಂಡ ಹಾಕಿ ಉತ್ಸವದ ಸಂಚಾಲಕ ದಿನೇಶ್ ಕ್ರೀಡಾಭಿಮಾನಿಗಳ, ಸಂಘ ಸಂಸ್ಥೆಗಳ ಸಹಕಾರದಿಂದ ಕ್ರೀಡಾಕೂಟ ಯಶಸ್ವಿಯಾಗಿ ಜರುಗಿದೆ. ಈ ಒಂದು ಕ್ರೀಡಾಕೂಟದ ಮೂಲಕ ಜಿಲ್ಲೆಗೆ ಕೊಡುಗೆ ನೀಡುವ ಬಗ್ಗೆ ಕುಟುಂಬಗಳು ಚಿಂತಿಸಿದ್ದು ನಾಲ್ಕು ನಾಡಿಗೆ ಸಂಬಂಧಿಸಿದಂತೆ ಉತ್ತಮ ಕ್ರೀಡಾಂಗಣವನ್ನು ಒದಗಿಸಿರುವುದು ಹೆಮ್ಮೆ ಎನಿಸಿದೆ ಎಂದರು.
ನಿಕಟಪೋರ್ವ ಪ್ರಾಂಶುಪಾಲೆ ಡಾ.ಕಾವೇರಿ ಅವರು ಹಲವು ವರ್ಷಗಳ ಇದೇ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಅನುಭವ, ಕಾಲೇಜಿನ ಅಭಿವೃದ್ಧಿಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಉಷಾ ಜೋಯಪ್ಪ ಮಾತನಾಡಿ, ಕಾಲೇಜಿನ ಪರವಾಗಿ ಕುಂಡಿಯೊಳಂಡ ಕುಟುಂಬಸ್ಥರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭ ಕುಂಡಿಯೊಳಂಡ ಕುಟುಂಬದ ಮಾಹಿತಿಯನ್ನು ಒಳಗೊಂಡ ಪುಸ್ತಕವನ್ನು ಶಾಸಕ ಎ.ಎಸ್.ಪೊನ್ನಣ್ಣ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪರವಾಗಿ ಕುಂಡಿಯೊಳಂಡ ಕುಟುಂಬದ ಹಿರಿಯ ಕೆ.ಎಸ್.ಸುಬ್ಬಯ್ಯ ಅವರನ್ನು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು.
ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ, ಪ್ರಾಂಶುಪಾಲೆ ಎಚ್.ಸಿ.ಪಲ್ಲವಿ, ಸಹಾಯಕ ಪ್ರಾಧ್ಯಾಪಕಿ ಸಹನಾ,ಕಾಲೇಜು ನಿರ್ದೇಶಕರಾದ ಬಿದ್ದಾತಂಡ ಮೇರಿ ಚಿಟ್ಟಿಯಪ್ಪ, ಕುಂಡಿಯೊಳಂಡ ಕುಟುಂಬಸ್ಥರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಕಾಲೇಜು ಅಭಿವೃದ್ಧಿ ಸಮಿತಿ ನಿರ್ದೇಶಕರು, ಕಾಲೇಜು ಸಿಬ್ಬಂದಿ ಹಾಜರಿದ್ದರು.