ನಾಪೋಕ್ಲು ಅಂಕುರ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಮಾಳೆಯಂಡ ಅಶೋಕ್ ಪೂವಯ್ಯ ಮಾತನಾಡಿದರು. 
ಕೊಡಗು

ಕ್ರೀಡೆಗಳಲ್ಲಿ ಯುವಜನರಿಗೆ ವಿಪುಲ ಅವಕಾಶ

ನಾಪೋಕ್ಲು: ಹಾಕಿ, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಯುವಜನರಿಗೆ ವಿಪುಲ ಅವಕಾಶಗಳಿದ್ದು ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬ್ಯಾಡ್ಮಿಂಟನ್ ಕ್ರೀಡಾಪಟು ಮಾಳೆಯಂಡ ಅಶೋಕ್ ಪೂವಯ್ಯ ಹೇಳಿದರು.
ಇಲ್ಲಿನ ಅಂಕುರ್ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕ ಕ್ರೀಡೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಕ್ರೀಡೆಗೆ ಉತ್ತಮ ಅವಕಾಶವಿದೆ. ಇತ್ತೀಚೆಗೆ ಭಾರತದ ಮಹಿಳಾ ಕ್ರಿಕೆಟ್ ತಂಡ ಚಾಂಪಿಯನ್ ಆಗಿದೆ. ಇದು ಬಾಲಕಿಯರಿಗೆ ಸ್ಫೂರ್ತಿ ಎಂದರು.
ಅಂಕುರ್ ಪಬ್ಲಿಕ್ ಶಾಲೆಯ ವ್ಯವಸ್ಥಾಪಕಿ ಕೇಟೋಳಿರ ರತ್ನ ಚರ್ಮಣ ಮಾತನಾಡಿ, ಶಾಲೆಯಲ್ಲಿ ಪಠ್ಯ ಚಟುವಟಿಕೆಗಳ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸಂಗೀತ, ನೃತ್ಯ, ಕ್ರೀಡೆ, ಅಬಾಕಸ್, ಕರಾಟೆ ಸೇರಿದಂತೆ ವಿವಿಧ ಪಠ್ಯೇತರ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಹೇಳಿದರು.
ಸಿಬಿಎಸ್‌ಸಿ ಪಠ್ಯಕ್ರಮ ಬೋಧಿಸುವ ಜಿಲ್ಲೆಯ ಏಳು ಶಾಲೆಗಳ ಸಹಯೋಗದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ಅಂಕುರ್ ಶಾಲೆ ವತಿಯಿಂದ ಥ್ರೋಬಾಲ್ ಸ್ಪರ್ಧೆ ಆಯೋಜಿಸಲಾಗಿದ್ದು, ಅದರಲ್ಲಿ ಅಂಕುರ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಶ್ಲಾಘಿಸಿದರು. 
ವಾರ್ಷಿಕ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಜರುಗಿದವು. ಪಾಲಕರಿಗೆ ಪ್ರತ್ಯೇಕವಾಗಿ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಮಾಳೆಯಂಡ ಅಶೋಕ್ ಪೂವಯ್ಯ, ಅಂಕುರ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಕೇಟೋಳಿರ ರಾಜ ಚರ್ಮಣ್ಣ, ಬೋಪಣ್ಣ, ಶಿಕ್ಷಕಿಯರಾದ ಆಶಾ ಬೋಪಣ್ಣ, ಕನ್ನಿಕಾ, ಅನನ್ಯ ಅಯ್ಯಪ್ಪ, ಲಾಲು ನಂಜಪ್ಪ, ದೀಪಿಕಾ, ವಿಪಿನ್ ಸುಬ್ಬಯ್ಯ ಇದ್ದರು.