ಮೈ ಭಾರತ್ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಮಾತನಾಡಿದರು. ಅಖಿಲ್, ಪ್ರೊ.ರವಿ ಶಂಕರ್ ಇತರರಿದ್ದರು.
- ನಾಯಕತ್ವ-ಕೌಶಲ್ಯ ಬೆಳೆಸಲು ಮೈ ಭಾರತ್ ಜಾಗೃತಿ
- ಮೈ ಭಾರತ್ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್
ಮಡಿಕೇರಿ: ಯುವಜನರಲ್ಲಿ ನಾಯಕತ್ವ ಗುಣ, ಸಾಮಾಜಿಕ ಹೊಣೆಗಾರಿಕೆ ಹಾಗೂ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೈ ಭಾರತ್ ಕಾರ್ಯಕ್ರಮದ ಬಗ್ಗೆ ಯುವ ಜನತೆಗೆ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಮೈ ಭಾರತ್ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಯುವಜನರಿಗಾಗಿ ಉದ್ಯೋಗಾವಕಾಶ ಹೆಚ್ಚಿಸುವ ಕೌಶಲ್ಯ ತರಬೇತಿ, ನಾಯಕತ್ವ ಶಿಬಿರಗಳು ಹಾಗೂ ಉದ್ಯಮಶೀಲತಾ ಕಾರ್ಯಾಗಾರ ಸಂಘಟಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಜಿಲ್ಲಾಧಿಕಾರಿಗಳು, ಮೈ ಭಾರತ್ ಡಿಜಿಟಲ್ ವೇದಿಕೆಯ ಮೂಲಕ ಜಿಲ್ಲೆಯ ಯುವಕ-ಯುವತಿಯರು ಸರ್ಕಾರದ ವಿವಿಧ ಇಲಾಖೆಗಳ ಯುವ ಕಲ್ಯಾಣ ಯೋಜನೆಗಳು, ಕೌಶಲ್ಯಾಭಿವೃದ್ಧಿ ಹಾಗೂ ಸ್ವಯಂಸೇವಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಇಲಾಖಾಧಿಕಾರಿಗಳು ಯುವಕರಿಗೆ ಸಮರ್ಪಕ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಕಾಲೇಜುಗಳು, ಯುವಕ ಮಂಡಲಗಳು, ಕಾಲೇಜು ವಿದ್ಯಾರ್ಥಿಗಳು ಗರಿಷ್ಠ ಸಂಖ್ಯೆಯಲ್ಲಿ ಮೈ ಭಾರತ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು ವ್ಯಾಪಕ ಜಾಗೃತಿ ಮೂಡಿಸುವಂತಾಗಬೇಕು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆಗಳು ಒಂದಾಗಿ ಮೈ ಭಾರತ್ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸೂಚಿಸಿದರು.
ಜಿಲ್ಲಾ ಯೂತ್ ಘಟಕ ಅಧಿಕಾರಿ ಅಖಿಲ್ ಮಾತನಾಡಿ, ಹಿಂದೆ ನೆಹರು ಯುವ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದ ಮೈ ಭಾರತ್(ಮೇರಾ ಯುವ ಭಾರತ್) ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿದೆ. ಇದು ಸ್ವಯಂ ಸೇವಕತೆ, ಅನುಭವದ ಕಲಿಕೆ, ನಾಯಕತ್ವ ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವ ಭಾಗವಹಿಸುವಿಕೆ ಉತ್ತೇಜಿಸಲು ತಂತ್ರಜ್ಞಾನ-ಸಕ್ರಿಯಗೊಳಿಸಿದ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.
ಅಸ್ತಿತ್ವದಲ್ಲಿರುವ ಯುವ ಕ್ಲಬ್‌ಗಳನ್ನು ಬಲಪಡಿಸಲು, ಹೊಸ ಯುವ ಕ್ಲಬ್‌ಗಳ ರಚನೆಯನ್ನು ಸುಗಮಗೊಳಿಸಲು, ಮೈ ಭಾರತ್ ಪೋರ್ಟಲ್‌ನಲ್ಲಿ ಯುವಕರ ನೋಂದಣಿಯನ್ನು ಉತ್ತೇಜಿಸಲು ಯೂತ್ ಕ್ಲಬ್ ಅಭಿವೃದ್ಧಿ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮೈ ಭಾರತ್ ಪೋರ್ಟಲ್‌ನಲ್ಲಿ ನೊಂದಾಯಿಸಿಕೊಳ್ಳಲು ಗಮನ ಸೆಳೆಯುವಂತೆ ತಿಳಿಸಿದರು.
ಕೊಡಗು ವಿವಿ ಪರೀಕ್ಷಾಂಗದ ವಿಶೇಷಾಧಿಕಾರಿ ಪ್ರೊ.ರವಿ ಶಂಕರ್ ಮಾತನಾಡಿ, ಕೊಡಗು ವಿಶ್ವವಿದ್ಯಾನಿಲಕ್ಕೆ ೨೪ ಕಾಲೇಜುಗಳು ಒಳಪಟ್ಟಿದ್ದು, ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಒಳಗೊಂಡು ಕಾರ್ಯಕ್ರಮವನ್ನು ರೂಪಿಸುವಂತೆ ತಿಳಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತರಾದ ಬೇಬಿ ಮ್ಯಾಥ್ಯು ಮಾತನಾಡಿ, ಮೈ ಭಾರತ್ ಕಾರ್ಯಕ್ರಮ ಮನೆಮನೆಗೆ ತಲುಪಿಸಬೇಕು. ಗ್ರಾಮೀಣ ಪ್ರದೇಶದಲ್ಲೂ ಈ ಬಗ್ಗೆ ಜಾಗೃತಿ ಮೂಡಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸ್ಕೌಟ್ಸ್ ಮತ್ತು ಗೈಟ್ಸ್ ವಿದ್ಯಾರ್ಥಿಗಳಿಗೆ ಮೈ ಭಾರತ್ ನಿಂದ ಕಾರ್ಯಕ್ರಮ ರೂಪಿಸುವಂತೆ ತಿಳಿಸಿದರು.
ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಸವರಾಜು, ಡಿಡಿಪಿಯು ಗಣಪತಿ, ಪ್ರಾಂಶುಪಾಲರಾದ ವಿಜಯ್ ಇತರರು ಇದ್ದರು.