ಎಸ್.ಜಾನಕಿ ಅವರ ಗೀತ ಗಾಯನ ಕಾರ್ಯಕ್ರಮದಲ್ಲಿ ಹಾಡು ಹೇಳಿದ ಗಾಯಕರಿಗೆ ಟಿ.ಜಿ.ಪ್ರೇಮಕುಮಾರ್ ಅವರು ಪ್ರಶಂಸನಾ ಪತ್ರ ವಿತರಿಸಿದರು. ರೇವತಿ ರಮೇಶ್, ಕಡ್ಲೇರ ತುಳಸಿ ಮೋಹನ್, ಭಾರತಿ ರಮೇಶ್, ಪ್ರೇಮ ರಾಘವಯ್ಯ ಇತರರಿದ್ದರು.
- ಕಲೆ, ಸಾಹಿತ್ಯ, ಸಂಗೀತದಿಂದ ಸಮಾಜದ ಒಗ್ಗಟ್ಟು ಸಾಧ್ಯ
ಮಡಿಕೇರಿ: ಕಲೆ, ಸಾಹಿತ್ಯ, ಸಂಗೀತದಿಂದ ಸಮಾಜದ ಒಗ್ಗಟ್ಟು ಸಾಧ್ಯ ಎಂದು ಹಿರಿಯ ಪತ್ರಕರ್ತರಾದ ಜಿ.ಚಿದ್ದಿಲಾಸ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ವಿವಿಧ ಸಂಘ- ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕೊಡಗು ಪತ್ರಿಕಾ ಭವನದದಲ್ಲಿ ಗಾನ ಕೋಗಿಲೆ ದಿವಂಗತ ಎಸ್.ಜಾನಕಿ ಅವರಿಗೆ ಏರ್ಪಡಿಸಿದ್ದ ಗಾನ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಕ್ಷಿಣ ಭಾರತದ ಕೋಗಿಲೆ ಎಂದೇ ಖ್ಯಾತಿ ಪಡೆದಿರುವ ಎಸ್.ಜಾನಕಿ ಅವರು ಆರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅಪರೂಪದ ಕಂಠಸಿರಿಯಿಂದ ಭಾರತೀಯ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ್ದ ಜಾನಕಿ ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಕಲೆ, ಸಾಹಿತ್ಯ ಮತ್ತು ಸಂಗೀತವು ಸಮಾಜವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಭಾಷೆ ಮತ್ತು ಗಡಿಗಳನ್ನು ಮೀರಿ ಜನರನ್ನು ಭಾವನಾತ್ಮಕವಾಗಿ ಬೆಸೆಯುವ ಶಕ್ತಿ ಇವುಗಳಿಗೆ ಇದೆ. ಸಂಗೀತ ಮತ್ತು ಕಲೆಗಳು ಜನರ ಮನಸ್ಸಿನಲ್ಲಿ ಏಕತೆಯ ಭಾವನೆಯನ್ನು ಮೂಡಿಸುತ್ತವೆ. ಜಾತಿ, ಧರ್ಮ ಹಾಗೂ ಪ್ರಾದೇಶಿಕ ಭೇದಗಳನ್ನು ಮರೆಸಿ ಜನರನ್ನು ಒಂದೇ ವೇದಿಕೆಗೆ ತರುತ್ತವೆ ಎಂದರು.
ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಭಾರತೀಯ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ್ದ ಜಾನಕಿ ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಗಾನಸುಧೆ ಎಸ್.ಜಾನಕಿ ಅವರ ಹಾಡುಗಳು ಈ ಸಮಾಜದಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಮೂಲಕ ಯುವಜನಾಂಗ ಇವರ ಮಧುರ ಗೀತೆಗಳನ್ನು ಹಾಡುವ ಮೂಲಕ ಸಂಗೀತ ಆಸಕ್ತಿ ಬೆಳೆಸಿಕೊಳ್ಳಬೇಕು. ಭಾರತೀಯ ಚಿತ್ರ ಸಂಗೀತದ ಇತಿಹಾಸದಲ್ಲಿ ಅಳಿಸಲಾಗದ ಹೆಸರಾಗಿರುವ ಎಸ್.ಜಾನಕಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಮೂಲಕ ಸಂಗೀತ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಬೇಕಿದೆ ಎಂದು ಹೇಳಿದರು.
ಎಸ್.ಜಾನಕಿ ಅವರಿಗೆ ಪುಷ್ಪ ನಮನ-ನುಡಿ ನಮನ-ಗಾನ ನಮನದಲ್ಲಿ ಗಾಯಕರು ಎಸ್.ಜಾನಕಿ ಅವರು ಹಾಡಿರುವ ಹಾಡುಗಳನ್ನು ಸುಮಧುರವಾಗಿ ಹಾಡಿ ಸಂಗೀತ ಪ್ರಿಯರಿಗೆ ಸಂಗೀತದ ರಸದೌತಣ ಉಣಬಡಿಸಿದರು. ಸುಮಧುರ ಗೀತ ಗಾಯನವು ಸಂಗೀತ ಪ್ರಿಯರ ಮನಸ್ಸನ್ನು ತಣಿಸಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಗಾಯಕರು ಎಸ್.ಜಾನಕಿ ಅವರು ಹಾಡಿರುವ ವಿವಿಧ ಭಾವಪೂರ್ಣ ಹಾಡುಗಳು ಮತ್ತು ಹಿತವಾದ ಸಂಗೀತದ ಅಲೆಗಳು ಎಲ್ಲಾ ಕೇಳುಗರ ಎಲ್ಲರ ಮನಸ್ಸಿಗೆ ಅಪಾರ ಆನಂದ ನೀಡಿದವು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಗಾಯಕರಿಗೆ ಪ್ರಶಂಸನಾ ಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಪುದಿನೆರವನ ರೇವತಿ ರಮೇಶ್, ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್, ಲೇಖಕರ ಬಳಗದ ಪ್ರಧಾನ ಕಾರ್ಯದರ್ಶಿ ಭಾರತಿ ರಮೇಶ್, ಸಹ ಕಾರ್ಯದರ್ಶಿ ಕೆ.ವಿ.ಉಮೇಶ್, ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಮಾಜಿ ಅಧ್ಯಕ್ಷ ಅಂಬೇಕಲ್ ನವೀನ್, ಜಿಲ್ಲಾ ಜಾನಪದ ಪರಿಷತ್‌ನ ಅಧ್ಯಕ್ಷ ಬಿ.ಜಿ.ಅನಂತಶಯನ, ನಿವೃತ್ತ ಪ್ರಾಂಶುಪಾಲ ಕೆ.ಜೆ.ದಿವಾಕರ್, ಜಿಲ್ಲಾ ದಸಂಸ ಸಂಚಾಲಕ ಎಚ್.ಎಲ್.ದಿವಾಕರ್, ಸುಬ್ರಾಯ ಸಂಪಾಜೆ, ರಂಜಿತ್ ಕವಲಪಾರ ಇತರರು ಇದ್ದರು.