ವಿರಾಜಪೇಟೆ ಮುಖ್ಯಾಧಿಕಾರಿ ಪಿ.ಕೆ.ನಾಚಪ್ಪ 
ಕೊಡಗು

ತಡೆಗೋಡೆ ಕುಸಿದ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಭೇಟಿ

ಪ್ರಮುಖ ಮುಖ್ಯಾಂಶಗಳು

  • ಕಾಮಗಾರಿ ನಡೆಸದಂತೆ ಸೂಚನೆ
  • ಪಿ.ಕೆ.ನಾಚಪ್ಪ ಮಾಹಿತಿ
ವಿರಾಜಪೇಟೆ: ಸಮೀಪದ ಗೌರಿಕೆರೆಯಲ್ಲಿ ಅಕ್ರಮ ಕಾಮಗಾರಿಯಿಂದ ತಡೆಗೋಡೆ ಕುಸಿದು ಮನೆಗೆ ಹಾನಿಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ನಡೆಸದಂತೆ ಸೂಚಿಸಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಯಿತು ಎಂದು ಪುರಸಭೆ ಮುಖ್ಯಾಧಿಕಾರಿ ಪಿ.ಕೆ.ನಾಚಪ್ಪ ಮಾಹಿತಿ ನೀಡಿದರು.
ತಡೆಗೋಡೆ ಕುಸಿತಗೊಂಡ ಸ್ಥಳಕ್ಕೆ ಅಧಿಕಾರಿಗಳ ತಂಡದೊಂದಿಗೆ ಹಾಗೂ ಸ್ಥಳದ ಮಾಲೀಕರೊಂದಿಗೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಘಟನೆ ನಡೆದ ಕೂಡಲೇ ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆ. ಅಕ್ರಮವಾಗಿ ಕಲ್ಲು ಬಂಡೆಗಳನ್ನು ಹೊಡೆಯುತ್ತಿದ್ದ ಕಾರಣ ಕೂಡಲೇ ಕೆಲಸ ನಿಲ್ಲಿಸುವಂತೆ ಖಡಕ್ ಸೂಚನೆ ನೀಡಲಾಗಿತ್ತು. ಬಳಿಕ ಕೆಲಸವನ್ನು ಸ್ಥಗಿತಗೊಳಿಸಲಾಯಿತು.
ಈ ನಡುವೆ ಮಳೆಯಾದ್ದರಿಂದ ಆ ಜಾಗದಲ್ಲಿ ನೀರು ತುಂಬಿಕೊಂಡು ಸ್ಥಳೀಯರಿಗೆ ಆತಂಕ ಉಂಟಾಗಿದ್ದಲ್ಲದೆ ಶಾಲಿನಿ ಅವರ ಮನೆಯ ತಡೆಗೋಡೆ ಅಲ್ಪ ಪ್ರಮಾಣದಲ್ಲಿ ಕುಸಿತಗೊಂಡು ಅಲ್ಲಿ ಅಪಾಯ ಉಂಟಾಗುವ ಸಂಭವ ಇದ್ದುದ್ದರಿಂದ ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಲಾಗಿತ್ತು. ಆದರೆ ಜಾಗದ ಮಾಲೀಕರನ್ನು ಪತ್ತೆಹಚ್ಚುವುದು ನಮಗೆ ದೊಡ್ಡ ಸವಾಲೇ ಆಗಿತ್ತು ಎಂದು ಮುಖ್ಯಾಧಿಕಾರಿ ವಿವರಿಸಿದರು.
ಈ ಹಿಂದೆ ಆ ಜಾಗವನ್ನು ತೆಗೆದುಕೊಂಡಿದ್ದ ಮಾಲೀಕರ ದೂರವಾಣಿಗೆ ಕರೆ ಮಾಡಿ ವಿಚಾರಿಸಿದ್ದ ಸಂದರ್ಭ ಅವರು ಅದನ್ನು ಬೇರೆಯವರಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದರಲ್ಲದೆ, ಆ ಜಾಗವನ್ನು ಪಡೆದುಕೊಂಡವರ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡದೆ ಸತಾಯಿಸಿದ್ದರು. ಬಳಿಕ ಪುರಸಭೆ ಮುಖ್ಯಾಧಿಕಾರಿಗಳು ನಗರ ಪೊಲೀಸ್ ಠಾಣೆಗೆ ದೂರು ನೀಡಿ ಸ್ಥಳದ ಮಾಲೀಕರನ್ನು ಪತ್ತೆಹಚ್ಚಿ ಅವರನ್ನು ಕಾಮಗಾರಿ ನಡೆಸಿದ ಸ್ಥಳಕ್ಕೆ ಕರೆಸಲಾಯಿತು ಎಂದು ತಿಳಿಸಿದರು.
ತಡೆಗೋಡೆ ಕುಸಿತಗೊಂಡಿರುವ ವಿಚಾರವನ್ನು ಮಾಲೀಕರ ಗಮನಕ್ಕೆ ತಂದ ಬಳಿಕ ತಡೆಗೋಡೆಯನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಸರಿಪಡಿಸಿಕೊಡುವ ಬಗ್ಗೆ ಒಪ್ಪಿರುವುದಾಗಿ ಮತ್ತು ವಿರಾಜಪೇಟೆ ಠಾಣೆಯಲ್ಲಿ ಬರೆದುಕೊಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಅಕ್ರಮ ಕಾಮಗಾರಿಯ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಲಿಖಿತವಾಗಿ ಮಾಹಿತಿ ನೀಡಲಾಗಿದೆ. ಅವರೂ ಕೂಡ ಪರಿಶೀಲನೆ ಮಾಡಿದ್ದಾರೆ. ಇಷ್ಟೆಲ್ಲ ಬೆಳವಣಿಗೆ ಆಗುವುದು ತಡವಾದ್ದರಿಂದ ಸಂತ್ರಸ್ತೆ ಶಾಲಿನಿ ಅವರಿಗೆ ಪರಿಹಾರ ಒದಗಿಸುವುದು ತಡವಾಗಿದೆ ಎಂದು ತಿಳಿಸಿದರು.