ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿರಾಜಪೇಟೆಯ ಈಶ್ವರ ಇಗ್ಗುತ್ತಪ್ಪ ಎ ತಂಡ. 
ಕೊಡಗು

ಕೊಮ್ಮೆತೋಡಿನಲ್ಲಿ ಕೆಸರುಗದ್ದೆ ಕ್ರೀಡಾ ಸಂಗಮ-೨೦೨೬

ಪ್ರಮುಖ ಮುಖ್ಯಾಂಶಗಳು

  • ಕೊಮ್ಮೆತೋಡಿನಲ್ಲಿ ಕೆಸರುಗದ್ದೆ ಕ್ರೀಡಾ ಸಂಗಮ-೨೦೨೬
  • ಹಗ್ಗ ಜಗ್ಗಾಟದಲ್ಲಿ ಈಶ್ವರ ಇಗ್ಗುತ್ತಪ್ಪ ಎ ವಿನ್ನರ್ಸ್
  • ಫುಟ್ಬಾಲ್ನಲ್ಲಿ ಸಿಟಿ ಬ್ರದರ್ಸ್ ಚಾಂಪಿಯನ್

ಪೊನ್ನಂಪೇಟೆ: ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ವತಿಯಿಂದ ಭಾನುವಾರ ಕೊಮ್ಮೆತೋಡಿನಲ್ಲಿ ನಡೆದ ಮೊದಲನೇ ವರ್ಷದ ಜಿಲ್ಲಾ ಮಟ್ಟದ ಮುಕ್ತ ಕೆಸರುಗದ್ದೆ ಕ್ರೀಡಾ ಸಂಗಮ-೨೦೨೬ರಲ್ಲಿ ತೀವ್ರ ಕುತೂಹಲ ಮೂಡಿಸಿದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ವಿರಾಜಪೇಟೆಯ ಈಶ್ವರ ಇಗ್ಗುತ್ತಪ್ಪ ಎ ತಂಡ ಪ್ರಥಮ ಸ್ಥಾನ ಪಡೆದು ವಿನ್ನರ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ಫುಟ್ಬಾಲ್ ಪಂದ್ಯಾವಳಿಯಲ್ಲಿ ಕಡಂಗದ ಸಿಟಿ ಬ್ರದರ್ಸ್ ತಂಡ ವಿನ್ನರ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ಹಗ್ಗ ಜಗ್ಗಾಟ ಸ್ಪರ್ಧೆಯ ಎರಡನೇ ಸೆಮಿಫೈನಲ್ನಲ್ಲಿ ಈಶ್ವರ ಇಗ್ಗುತ್ತಪ್ಪ ಎ ಮತ್ತು ಬೇಗೂರಿನ ಮಹಾವಿಷ್ಣು ಎ ತಂಡಗಳ ನಡುವೆ ನಡೆದ ಸ್ಪರ್ಧೆ ೫೯ ನಿಮಿಷ ೪೭ ಸೆಕೆಂಡ್‌ಗಳ ದೀರ್ಘಕಾಲ ಸೆಣಸಾಡಿ ಪ್ರೇಕ್ಷಕರನ್ನು ರಂಜಿಸಿತು. ಜೊತೆಗೆ ಕೊಡಗು ಜಿಲ್ಲೆಯಲ್ಲೇ ಅತೀ ದೀರ್ಘಾವಧಿ ನಡೆದ ಹಗ್ಗ ಜಗ್ಗಾಟ ಎಂಬ ದಾಖಲೆ ನಿರ್ಮಿಸಿತು.
ಏಕಾಗ್ರತೆ ಮತ್ತು ಬಲ ಪ್ರದರ್ಶಿಸುವ ರೋಮಾಂಚಕಾರಿ ಜನಪದ ಕ್ರೀಡೆಯಾದ ಹಗ್ಗ ಜಗ್ಗಾಟ ಈ ಕೆಸರುಗದ್ದೆ ಕ್ರೀಡಾಸಂಗಮದಲ್ಲಿ ವಿಶೇಷವಾಗಿ ಗಮನ ಸೆಳೆಯಿತು. ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ ಈ ಸ್ಪರ್ಧೆ ಆರಂಭದಿಂದಲೂ ಕುತೂಹಲ ಮೂಡಿಸುತ್ತಲೇ ಬಂತು. ಒಂದೆಡೆ ತಂಡದ ಹಗ್ಗ ಮುಂದೆ ಸರಿದಾಗ ಇನ್ನೊಂದು ತಂಡದವರು ಹೋ ಹೋ ಎನ್ನುತ್ತ ಹಗ್ಗ ಎಳೆಯುತ್ತಿದ್ದ ದೃಶ್ಯ, ಇನ್ನೊಂದೆಡೆ ಎದುರಾಳಿ ತಂಡ ಹಗ್ಗವನ್ನು ತಮ್ಮೆಡೆಗೆ ಎಳೆದಾಗ ಸೋಲೊಪ್ಪದ ಮತ್ತೊಂದು ತಂಡದ ಸದಸ್ಯರ ಬಲಪ್ರದರ್ಶನ ಮೈನವಿರೇಳಿಸುವಂತಿತ್ತು. ೨೪ ಎಂ.ಎಂ ದಪ್ಪ ಹಾಗೂ ೫೦ ಅಡಿ ಉದ್ದವಿರುವ ಹಗ್ಗವನ್ನು ನೀರಿನಲ್ಲಿ ೫೯.೪೭ ನಿಮಿಷ ಹಿಡಿದಿಟ್ಟು ಸಮ ಬಲದ ಹೋರಾಟ ನಡೆಸಿದ ಈ ಉಭಯ ತಂಡಗಳ ಸಾಹಸ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕೊನೆಗೂ ಛಲ ಬಿಡದ ಮಹಾವಿಷ್ಣು ಎ ತಂಡ ಈಶ್ವರ ಇಗ್ಗುತ್ತಪ್ಪ ಎ ತಂಡವನ್ನು ಮೊದಲ ಸೆಟ್ಟಿನಲ್ಲಿ ಮಣಿಸಿದರೂ ಎರಡನೇ ಮತ್ತು ಮೂರನೇ ಸೆಟ್ಟಿನಲ್ಲಿ ಸೋಲೊಪ್ಪಿಕೊಳ್ಳಬೇಕಾಯಿತು. ಇದರಿಂದ ಈಶ್ವರ ಇಗ್ಗುತ್ತಪ್ಪ ಎ ತಂಡ ಫೈನಲ್ ಪ್ರವೇಶಿಸಿತ್ತು.
ಕೆಸರುಗದ್ದೆ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕುಂಜಿಲದ ರಾಕಿಂಗ್ ಬಾಯ್ಸ ತಂಡ ರನ್ನರ್ ಪ್ರಶಸ್ತಿ ಪಡೆದುಕೊಂಡರೆ, ಕಡಂಗದ ಅರಫಾ ತಂಡ ತೃತೀಯ ಸ್ಥಾನ ಪಡೆಯಿತು. ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ವಿರಾಜಪೇಟೆಯ ಈಶ್ವರ ಇಗ್ಗುತ್ತಪ್ಪ ಬಿ ತಂಡ ರನ್ನರ್ಸ್ ಪ್ರಶಸ್ತಿ ಪಡೆದರೆ, ಬೇಗೂರಿನ ಮಹಾವಿಷ್ಣು ಎ ತಂಡ ತೃತೀಯ ಸ್ಥಾನ ಗಳಿಸಿತು. ಫುಟ್ಬಾಲ್ ಪಂದ್ಯಾವಳಿಯಲ್ಲಿ ಬೇತ್ರಿಯ ಪಂದಳಕಂದ ತಂಡದ ಅರುಣ್ ಪಂದ್ಯಾವಳಿ ಪುರುಷೋತ್ತಮ ವಿಶೇಷ ಪ್ರಶಸ್ತಿ ಗಳಿಸಿದರು.
ಕಡಂಗ ಅರಫಾ ತಂಡದ ಆಟಗಾರ ನೌಫಲ್ ಅತಿ ಹೆಚ್ಚು ಗೋಲು ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿ ವಿಶೇಷ ಬಹುಮಾನ ಪಡೆದರು. ಕಡಂಗ ಸಿಟಿ ಬ್ರದರ್ಸ್ ತಂಡದ ಮುಬಶೀರ್ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಮಧ್ಯಾಹ್ನದ ನಂತರ ನಡೆದ ಕೆಸರುಗದ್ದೆ ಕ್ರೀಡಾ ಸಂಗಮದ ಸಮಾರೋಪ ಸಮಾರಂಭದಲ್ಲಿ ಶಾಸಕರಾದ ಎ.ಎಸ್.ಪೊನ್ನಣ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕೆಸರುಗದ್ದೆ ಓಟದ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಕೆಸರುಗದ್ದೆ ಕ್ರೀಡಾ ಸ್ಪರ್ಧೆಗಳು ಉಳಿದ ಕ್ರೀಡೆಗಳಿಂದ ಭಿನ್ನವಾಗಿರುತ್ತದೆ. ಕ್ರೀಡಾ ಮನೋಭಾವದೊಂದಿಗೆ ಕೆಸರಿನಲ್ಲಿ ಪ್ರಶಸ್ತಿಗಾಗಿ ಹೋರಾಟ ನಡೆಸುವ ಆಟಗಾರರ ಶ್ರಮ ನಿಜಕ್ಕೂ ಮೆಚ್ಚುವಂಥದ್ದು. ಕೆಸರುಗದ್ದೆ ಕ್ರೀಡಾಕೂಟಗಳು ಆಟಗಾರರಿಗೆ ಮತ್ತಷ್ಟು ಹುರುಪು ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.
ಕೆ.ಎಂ.ಎಸ್.ಎ ಅಧ್ಯಕ್ಷರಾದ ಆಲೀರ ಎಂ.ರಶೀದ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್(ಕೆಎಂಎ)ಅಧ್ಯಕ್ಷರಾದ ದುದ್ದಿಯಂಡ ಹೆಚ್.ಸೂಫಿ ಹಾಜಿ, ಕೆ.ಎಂ.ಎಸ್.ಎ. ಗೌರವಾಧ್ಯಕ್ಷ ಅಕ್ಕಳತಂಡ ಎಸ್.ಮೊಯ್ದು, ಕೊಮ್ಮೆತೊಡು(ಐಮಂಗಲ) ಜಮಾಅತ್ ಅಧ್ಯಕ್ಷ ಪೊಯಕೆರ ಎಸ್.ರಫೀಕ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್, ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಪಿ.ಎ.ಹನೀಫ್ ಮೊದಲಾದವರು ಭಾಗವಹಿಸಿದ್ದರು.
ಕ್ರೀಡಾಸಂಗಮದ ಅಂಗವಾಗಿ ಜಿಲ್ಲೆಯ ಹಿರಿಯ ಕ್ರೀಡಾಪಟುಗಳಾದ ಬೇಗೂರಿನ ಆಲೀರ ಎಂ.ರಶೀದ್(ಮುತ್ತು) ಮತ್ತು ನೆಲೆಜಿಯ ಮಣವಟ್ಟಿರ ಎಂ. ಪೊನ್ನಪ್ಪ(ಪೊನ್ನು) ಅವರನ್ನು ಕೆಎಂಎಸ್‌ಎ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಭಾನುವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಕೆ.ಎಂ.ಎಸ್.ಎ. ಪದಾಧಿಕಾರಿಗಳಾದ ಮೀತಲ್ ತಂಡ ಎಂ.ಇಸ್ಮಾಯಿಲ್, ಕತ್ತಣಿರ ಎ.ಅಂದಾಯಿ, ಆಲೀರ ಎ.ಅಬ್ದುಲ್ ಅಝೀಜ್, ಬಲ್ಯತ್ಕಾರಂಡ ಯು. ಅಶ್ರಫ್, ಪುಂಜೆರ ಹಂಸ ಮೊದಲಾದವರು ಕಾರ್ಯಕ್ರಮ ನಿರ್ವಹಿಸಿದರು. ತಾಂತ್ರಿಕ ಸಮಿತಿಯಲ್ಲಿ ದೈಹಿಕ ಶಿಕ್ಷಕರಾದ ಅರುಣ್ ಅಮ್ಮತಿ ನೇತೃತ್ವದ ತಂಡ ಕಾರ್ಯನಿರ್ವಹಿಸಿತು. ಪೆರುಂಬಾಡಿಯ ನಿಖಿಲ್ ಉಣ್ಣಿ ವೀಕ್ಷಕ ವಿವರಣೆ ನೀಡಿದರು.