ವಿಶ್ವ ಏಡ್ಸ್ ದಿನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬಿ.ಕೆ.ರವೀಂದ್ರ ರೈ, ಪ್ರೊ.ಮೇ.ರಾಘವ, ಅಂಬೆಕಲ್ಲು ನವೀನ್, ರತ್ನಾಕರ ರೈ ಇತರರಿದ್ದರು. 
ಕೊಡಗು

ಎಚ್‌ಐವಿ ಹರಡುವಿಕೆ ನಿಯಂತ್ರಣಕ್ಕೆ ಮುಂದಾಗಿ

ಪ್ರಮುಖ ಮುಖ್ಯಾಂಶಗಳು

  • ಎಚ್‌ಐವಿ ಹರಡುವಿಕೆ ನಿಯಂತ್ರಣಕ್ಕೆ ಮುಂದಾಗಿ
  • ವಿಶ್ವ ಏಡ್ಸ್ ದಿನ ಕಾರ್ಯಕ್ರಮದಲ್ಲಿ ಪ್ರೊ.ಮೇ.ರಾಘವ ಸಲಹೆ
ಮಡಿಕೇರಿ: ಎಚ್‌ಐವಿ ಹರಡುವಿಕೆ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ನಗರದ ಎಫ್‌ಎಂಕೆಎಂಸಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಮೇ.ರಾಘವ ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್?ನ್ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ವಿವಿಧ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವ ಏಡ್ಸ್ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಎಚ್‌ಐವಿ ಏಡ್ಸ್‌ನಿಂದ ದೂರವಿರಲು ಸ್ವಯಂ ನಿಯಂತ್ರಣ ಹಾಗೂ ತಾಳ್ಮೆ ಅತೀ ಮುಖ್ಯ. ಸ್ವಯಂ ಶಿಸ್ತು ಇದ್ದಲ್ಲಿ ಯಾವುದೇ ರೋಗಗಳು ಬರುವುದಿಲ್ಲ. ಹಲವು ತಪ್ಪುಗಳಿಂದ ಹಲವು ರೋಗಗಳಿಗೆ ಆಹ್ವಾನ ಮಾಡಿಕೊಳ್ಳುತ್ತೇವೆ ಎಂದು ಹೇಳಿದ ಅವರು, ಯುವ ಜನರು ಹಾದಿ ತಪ್ಪಿದರೆ ಇಡೀ ಸಮಾಜ ಹದಗೆಡುತ್ತದೆ. ಆದ್ದರಿಂದ ಮನಃ ಪರಿವರ್ತನೆ ಮಾಡಿಕೊಂಡು ಸುಸ್ಥಿರ ಜೀವನ ನಡೆಸುವಂತಾಗಬೇಕು ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಸ್ವೇಚ್ಚಾಚಾರ ನಡೆಯದೆ ಮತ್ತೊಬ್ಬರಿಗೆ ಮಾದರಿಯಾಗಿ ನಡೆದುಕೊಂಡಾಗ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಎಚ್‌ಐವಿ ಏಡ್ಸ್ ನಂತಹ ಮಾರಕ ರೋಗಗಳು ಬರಲು ಸಮಾಜದಲ್ಲಿ ಹಲವು ಕಾರಣಗಳು ಇರುತ್ತವೆ. ಆ ನಿಟ್ಟಿನಲ್ಲಿ ಯಾವುದೇ ರೀತಿಯ ಚಟಕ್ಕೆ ತುತ್ತಾಗದೆ ಸಮಾಜದಲ್ಲಿ ಪರಿವರ್ತನೆ ತರಲು ಮುಂದಾಗಬೇಕು ಎಂದು ಹೇಳಿದರು.
ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಬಿ.ಕೆ.ರವೀಂದ್ರ ರೈ ಮಾತನಾಡಿ, ಎಚ್‌ಐವಿ ಏಡ್ಸ್ ಸೋಂಕಿತರು ಸಮಾಜದಲ್ಲಿ ಆಗುತ್ತಿರುವ ಆಗುಹೋಗುಗಳ ಬಗ್ಗೆ ನಾವೆಲ್ಲ ತಿಳಿಯುವ ಒಂದು ಅವಕಾಶ ವಿಶ್ವ ಏಡ್ಸ್ ದಿನ. ಕಳೆದ ಹತ್ತಾರು ವರ್ಷಗಳಿಂದ ಪ್ರತೀ ವರ್ಷ ಡಿ.೧ ರಂದು ವಿಶ್ವದಾದ್ಯಂತ ವಿಶ್ವ ಏಡ್ಸ್ ದಿನ ಆಯೋಜಿಸುತ್ತಾ ಬರಲಾಗುತ್ತಿದೆ. ಸೋಂಕಿತರಿಗೆ ಸಂಬಂಧಿಸಿದ ಮಾಹಿತಿ ತಿಳಿದವರು ಇತರರಿಗೆ ತಿಳಿಸುವ ಸದಾವಕಾಶದ ದಿನ ಇದು ಎಂದರು.
ಲಯನ್ಸ್ ಟ್ರಸ್ಟ್ ಅಧ್ಯಕ್ಷ ಅಂಬೆಕಲ್ಲು ನವೀನ್ ಮಾತನಾಡಿ, ಆರೋಗ್ಯ ಮಾನವನ ಹಕ್ಕು ಪ್ರತಿಯೊಬ್ಬರಿಗೂ ಆರೋಗ್ಯ ಸೇವೆಗಳನ್ನು ಪಡೆಯುವ ಹಕ್ಕಿದೆ. ಅದರಂತೆ ಎಚ್‌ಐವಿ ಸೋಂಕಿತರಿಗೆ ಯಾವುದೇ ಕಳಂಕ ತಾರತಮ್ಯ, ಲಿಂಗ ಭೇದ, ಎಚ್‌ಐವಿ ಸ್ಥಿತಿ ಇತ್ಯಾದಿಗಳನ್ನು ಪರಿಗಣಿಸದೆ ಎಲ್ಲಾ ಆರೋಗ್ಯ ಸೇವೆಗಳು-ಎಚ್‌ಐವಿ ತಡೆ ಚಿಕಿತ್ಸೆ ಮತ್ತು ಆರೈಕೆ ಸೇವೆಗಳನ್ನು ಒದಗಿಸುವುದು. ಅವರಿಗೂ ಕೂಡ ಎಲ್ಲಾ ಆರೋಗ್ಯದ ಸೇವೆಗಳನ್ನು ಪಡೆಯುವ ಹಕ್ಕಿದೆ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ೨೦೨೫-೨೬ ನೇ ಸಾಲಿನಲ್ಲಿ ೬೧ ಎಚ್‌ಐವಿ ಏಡ್ಸ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಎಚ್‌ಐವಿ ಏಡ್ಸ್ ಸಂಬಂಧಿಸಿದಂತೆ ಉಚಿತ ಸಹಾಯವಾಣಿ ೧೦೯೭ ಸಂಖ್ಯೆಗೆ ಕರೆ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದರು.
ಅತ್ಯುತ್ತಮ ರೆಡ್‌ರಿಬ್ಬನ್ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಎನ್‌ಎಸ್‌ಎಸ್ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಗರದ ಎಫ್‌ಎಂಸಿ ಕಾಲೇಜು, ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾವೇರಿ ಕಾಲೇಜು, ಗೋಣಿಕೊಪ್ಪ ಕಾವೇರಿ ಕಾಲೇಜು, ಸೋಮವಾರಪೇಟೆ ಸಂತ ಜೋಸೆಫರ ಪದವಿ ಕಾಲೇಜು ಈ ಕಾಲೇಜಿನ ಪ್ರತಿನಿಧಿಗಳನ್ನು ಗೌರವಿಸಲಾಯಿತು.
ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆಯ ಅಧ್ಯಕ್ಷ ರತ್ನಾಕರ ರೈ ಮಾತನಾಡಿದರು. ವಿರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಬೆನಡಿಕ್ಟ್ ಸಾಲ್ಡನ್, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಸುನಿತಾ, ಇತರರು ಇದ್ದರು.
ಜಾಥಾಗೆ ಚಾಲನೆ
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳಿ ಪ್ರಾರಂಭವಾದ ವಿಶ್ವ ಏಡ್ಸ್ ದಿನದ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಒಂದನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಜಿ.ಸುರೇಂದ್ರ ಅವರು, ಎಚ್‌ಐವಿ ಏಡ್ಸ್ ಹರಡುವ ಹಾಗೂ ನಿಯಂತ್ರಣ ಕುರಿತು ಎಲ್ಲರೂ ತಿಳಿದುಕೊಳ್ಳಬೇಕು. ಎಚ್‌ಐವಿ ಏಡ್ಸ್ ನಿಯಂತ್ರಣ ಎಲ್ಲರ ಜವಾಬ್ದಾರಿ ಎಂದು ಅರಿತುಕೊಳ್ಳೋಣ ಎಂದು ನುಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರದಿಂದ ಹಲವು ರೀತಿಯ ಕಾನೂನು ಸೇವೆಗಳಿದ್ದು, ನೆರವು ಸಿಗಲಿದೆ ಎಂದು ಹೇಳಿದರು.
ಜಾಥವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳಿ ಆರಂಭವಾಗಿ ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಮಂಗೇರಿರ ಮುತ್ತಣ್ಣ ವೃತ್ತ ಮೂಲಕ ಸಾಗಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವರೆಗೆ ಜಾಥ ನಡೆಯಿತು. ಜಾಥದಲ್ಲಿ ಹಲವು ಪದವಿ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡು ಎಚ್‌ಐವಿ ಏಡ್ಸ್ ನಿಯಂತ್ರಣ ಬಗ್ಗೆ ಜಾಗೃತಿ ಮೂಡಿಸಿದರು.