ಚಲನಚಿತ್ರ ರಂಗದಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಚಿತ್ರ ನಿರ್ಮಾಪಕ, ನಿರ್ದೇಶಕ ದಂಪತಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮತ್ತು ಕೊಟ್ಟುಕತ್ತೀರ ಯಶೋದಾ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.
ನಾಪೋಕ್ಲು: ಚೇರಂಬಾಣೆಯ ಬೆಂಗ್ ನಾಡ್ ಕೊಡವ ಸಮಾಜದ ಪೊಮ್ಮಕ್ಕಳ ಕೂಟ ವತಿಯಿಂದ ಕಕ್ಕಡ ತೀನಿ ಸ್ಪರ್ಧೆ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ದಂಪತಿಯನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಬೆಂಗ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಬಾಚಿರಣಿಯಂಡ ದಿನೇಶ್ ಗಣಪತಿ ಉದ್ಘಾಟಿಸಿ ಕಾರ್ಯಕ್ರಮದ ಯಶಸ್ಸಿಗೆ ಶುಭ ಕೋರಿ. ಪೊಮ್ಮಕ್ಕಡ ಕೂಟದಿಂದ ಇನ್ನಷ್ಟು ಉತ್ತಮ ಕಾರ್ಯಕ್ರಮಗಳು ಮೂಡಿಬರುವಂತಾಗಲಿ ಎಂದರು.
ಬೆಂಗ್ ನಾಡ್ ಕೊಡವ ಸಮಾಜದ ಮಾಜಿ ಅಧ್ಯಕ್ಷ ಕುಟ್ಟೇಟಿರ ಕೆ.ಕುಂಞಪ್ಪ ಮಾತನಾಡಿ, ಬೇಂಗ್ ನಾಡ್ ಕೊಡವ ಸಮಾಜ,ಮೊಮ್ಮಕ್ಕಡ ಕೂಟ,ರಿಕ್ರಿಯೇಷನ್ ಕ್ಲಬ್ ಜತೆಗೂಡಿ ಕೊಡವ ಜನಾಂಗದ ಏಳಿಗೆಗೆ ಶ್ರಮಿಸುವಂತಾಗಬೇಕು. ಪಂಜಿನ ಮೆರವಣಿಗೆಯಂತಹ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಅಪ್ಪಾರಂಡ ರತಿ ಬಿದ್ದಪ್ಪ, ಕಕ್ಕಡತರ ಬದುಕು ಅಂದು -ಇಂದು ವಿಷಯದ ಬಗ್ಗೆ ವಿಚಾರ ಮಂಡನೆ ಮಾಡಿದರು. ಐದು ದಶಕಗಳ ಹಿಂದೆ ಕಕ್ಕಡದಲ್ಲಿ ಕೃಷಿ ಕೆಲಸ ಒಗ್ಗಟ್ಟಿನಿಂದ ನಡೆಯುತ್ತಿತ್ತು. ಇಂದೂ ಒಗ್ಗಟ್ಟಿನಿಂದ ಕೆಲಸ ಮಾಡುವ ಅವಶ್ಯಕತೆ ಇದೆ. ಆರೋಗ್ಯಕರ ಆಹಾರ ಪದ್ಧತಿಯಿಂದಾಗಿ ಅಂದಿನವರು ಆರೋಗ್ಯವಂತರಾಗಿದ್ದರು ಎಂದ ಅವರು, ಅಂದಿನ ಮತ್ತು ಇಂದಿನ ಜನಜೀವನ ವ್ಯತ್ಯಾಸಗಳನ್ನು ತಿಳಿಸಿದರು.
ಚಲನಚಿತ್ರ ರಂಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ ನಿರ್ಮಾಪಕ, ನಿರ್ದೇಶಕ ದಂಪತಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮತ್ತು ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೊಡವ ಜನಾಂಗದ ಸಂಸ್ಕೃತಿ ಪದ್ಧತಿಯನ್ನು ಸಿನಿಮಾದ ಮೂಲಕ ಜನರಿಗೆ ತಲುಪಿಸುವಂತಹ ಕೆಲಸ ಮಾಡುವುದಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬೆಂಗ್ ನಾಡ್ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಬಡ್ಡೀರ ನಳಿನಿ ಮಾತನಾಡಿ, ಕಕ್ಕಡ ತೀನಿ ಎನ್ನುವುದು ಕೇವಲ ಆಹಾರ ಪದ್ಧತಿ ಮಾತ್ರವಲ್ಲ ಕೊಡವ ಜನಾಂಗದ ಸಂಸ್ಕೃತಿಯ ಒಂದು ಭಾಗ. ನಮ್ಮ ಹಿರಿಯರು ಮುಂದಿನ ಪೀಳಿಗೆಗಾಗಿ ಉತ್ತಮ ಸಂಸ್ಕೃತಿ, ಸಂಪ್ರದಾಯ, ಪದ್ಧತಿಗಳ ಅಡಿಪಾಯ ಹಾಕಿ ಕೊಟ್ಟಿದ್ದಾರೆ ವಿಶಿಷ್ಟ ಜನಾಂಗವಾದ ಕೊಡವರು ಭಾಷೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಮತ್ತು ಪೊಮ್ಮಕ್ಕಡ ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಮಹಿಳೆಯರಿಂದ ಕಕ್ಕಡ ತಿಂಗಳಿನಲ್ಲಿ ಮಾಡುವ ತಿನಿಸುಗಳ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಸಮೂಹ ಗಾಯನ, ನೃತ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕುಂಚೆಟ್ಟಿರ ಶಿಲ್ಪಾ ಪೆಮ್ಮಯ್ಯ, ತೇಲಪಂಡ ಲಕ್ಷ್ಮೀ, ಬಾಚರಣಿಯಂಡ ಅನಿತಾ ಗಣಪತಿ, ಪಟ್ಟಮಡ ಮಿಲನ, ಪಟ್ಟಮಡ ಜಯಂತಿ ಚಂಗಪ್ಪ ಮತ್ತಿತರರಿದ್ದರು.