ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನುಡಿ ಸಾಹಿತ್ಯ ಲಹರಿ ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ರೇಣುಕಾ ಪ್ರಸಾದ್, ಅರ್ಜುನ ಮೌರ್ಯ, ಸರಸ್ವತಿ , ಬಸವರಾಜು, ದಯಾನಂದ ಇದ್ದರು. 
ಕೊಡಗು

ಮೊಗಳ್ಳಿ ಗಣೇಶ್ ಚಿಂತನೆ ಹೃದಯಸ್ಪರ್ಶಿ

ಎ. ಆರ್. ರಘುರಾಮ
ವಿರಾಜಪೇಟೆ : ಮೊಗಳ್ಳಿ ಗಣೇಶ್ ಅವರ ಬರಹ ಮತ್ತು ಚಿಂತನೆ ಹೃದಯಸ್ಪರ್ಶಿಯಾಗಿವೆ ಎಂದು ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾ ಪ್ರಸಾದ್ ಅಭಿಪ್ರಾಯಪಟ್ಟರು.
ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ, ನುಡಿ ಉತ್ಸವ ಸಮಿತಿ, ದಸಾಪ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನುಡಿ ಸಾಹಿತ್ಯ ಲಹರಿ-
ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹಿತ್ಯ ಹಾಗೂ ಬರಹಗಳು ಲೋಕಾಂತವಾಗಬೇಕು. ಮಾತ್ರವಲ್ಲದೆ ಸಾಹಿತ್ಯದ ದಾಖಲೀಕರಣವನ್ನು ಮಾಡಬೇಕು. ಮನುಷ್ಯನು ತನ್ನನ್ನು ತಾನು ಪ್ರಶ್ನಿಸುತ್ತಲೆ ಬದುಕಬೇಕು. ಕಥೆ, ಕಾದಂಬರಿಗಳು ವಿಶ್ವಾವ್ಯಾಪಿಯಾಗಬೇಕು. ಕಲಿಕೆ, ಬದುಕು, ಅನುಭವವ, ಸುತ್ತಮುತ್ತಲಿನ ಪರಿಸರ ನಮಗೆ ಪ್ರೇರಣೆಯಾಗಿದೆ ಎಂದರು. ಹೊಸ ಚಿಂತನೆಗಳು ಮೂಡಿದಾಗ ಮಾತ್ರ ಬರಹಗಳಿಗೆ ಅರ್ಥ ಬರಲು ಸಾಧ್ಯವಾಗುತ್ತದೆ. ಅಂತೆಯೇ ಮೊಗಳ್ಳಿ ಅವರ ಬರಹಗಳು ಓದುಗರನ್ನು ಸೆಳೆಯುವುದರ ಜತೆಗೆ ಚಿಂತನಶೀಲರನ್ನಾಗಿಸುತ್ತದೆ ಎಂದರು. ಚಿಂತನೆಗೆ ಮತ್ತು ಸಾಹಿತ್ಯಿಕ ಬದಲಾವಣೆಗೆ ಮೊಗಳ್ಳಿ ಸಾಕ್ಷಿಯಾಗಿದ್ದಾರೆಂದರು.
ನುಡಿ ಉತ್ಸವ ಸಮಿತಿ ಅಧ್ಯಕ್ಷ ಅರ್ಜುನ ಮೌರ್ಯ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಸಹನೆ ಹಾಗೂ ತಾಳ್ಮೆ ಇದ್ದರೆ ಜಗತ್ತನ್ನೇ ಗೆಲ್ಲಬಹುದು. ಮೌಲ್ಯಗಳನ್ನು ಸಮಾಜಕ್ಕೆ ನೀಡಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಕೋರನ ಸರಸ್ವತಿ ಮಾತನಾಡಿ,
ಸಾಹಿತ್ಯದ ರಚನೆಯು ಅನುಭವದಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಗಳು ಸಾಹಿತ್ಯ ಕೃತಿಗಳನ್ನು ಓದಬೇಕು. ಓದುವ ಹವ್ಯಾಸದಿಂದ ಸಾಹಿತ್ಯದ ಬಳಕೆ ಹೆಚ್ಚಾಗುತ್ತದೆ ಎಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನವನ್ನು ವಿತರಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಸವರಾಜು, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಂಚಾಲಕ ಡಾ. ದಯಾನಂದ, ಉಪನ್ಯಾಸಕಿ ಹರಿಣಿ ಉಪಸ್ಥಿತರಿದ್ದರು.