- ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಸ್ಪಷ್ಟನೆ
ಸೋಮವಾರಪೇಟೆ : ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಅವರು ಶಾಸಕರಾಗಿ ಎರಡೂವರೆ ವರ್ಷಗಳಲ್ಲಿ 1724.16 ಕೋಟಿ ರೂ.ಗಳನ್ನು ಮಡಿಕೇರಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತಂದಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಸ್ಪಷ್ಟಪಡಿಸಿದ್ದಾರೆ.
ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರು 1724 ಕೋಟಿ ರೂ. ಅನುದಾನದ ಬಗ್ಗೆ ಟೀಕೆ ಮಾಡಿದ್ದರು. ಶ್ವೇತಪತ್ರ ಹೊರಡಿಸುವಂತೆ ಹೇಳಿದ್ದರು. ಹಾಲಿ ಶಾಸಕರು ತಮ್ಮ ಕ್ಷೇತ್ರಕ್ಕೆ ತಂದಿರುವ 1724.16 ಕೋಟಿ ರೂ.ಗಳ ಅನುದಾನದ ಪಟ್ಟಿಯನ್ನು ಸಂಬಂಧಪಟ್ಟ ಇಲಾಖಾಧಿಕಾರಿಗಳು ಕೊಟ್ಟಿದ್ದಾರೆ. ಅದನ್ನು ಬಿಜೆಪಿಯ ಮಾಜಿ ಶಾಸಕರಿಗೆ ಅಂಚೆ ಮೂಲಕ ಕಳುಹಿಸಿದ್ದೇವೆ. ಮಾಜಿ ಶಾಸಕರು ಮತ್ತು ಮಂಡಲ ಬಿಜೆಪಿ ಪದಾಧಿಕಾರಿಗಳು ಮಾಹಿತಿ ಹಕ್ಕಿನಲ್ಲೂ ಪಡೆದುಕೊಳ್ಳಬಹುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಲೋಕೋಪಯೋಗಿ ಇಲಾಖೆಯಿಂದ ಮಡಿಕೇರಿ, ಸೋಮವಾರಪೇಟೆ, ದೋಣಿಗಲ್ಲು ರಸ್ತೆಗೆ 900 ಕೋಟಿ ರೂ.ಗಳು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಈಗಾಗಲೇ ಡಿಪಿಅರ್‌ಗೆ 4 ಕೋಟಿ ರೂ. ಬಿಡುಗಡೆಯಾಗಿದೆ. 2026ರ ಪ್ರಾರಂಭದಲ್ಲೇ ಕಾಮಗಾರಿ ಪ್ರಾರಂಭವಾಗುತ್ತದೆ. ಇನ್ನುಳಿದ ಅನುದಾನದ ಅನೇಕ ಕಾಮಗಾರಿಗಳ ನಡೆಯುತ್ತಿವೆ. ಕೆಲವು ಕಾಮಗಾರಿಗಳು ಪೂರ್ಣಗೊಂಡಿವೆ. ಮುಂದಿನ ಮಾರ್ಚ್ ಒಳಗೆ ಕಾಮಗಾರಿಗಳು ಮುಕ್ತಾಯಗೊಳ್ಳಲಿವೆ ಎಂದು ಹೇಳಿದರು.
ಹಾಲಿ ಶಾಸಕರ ಮಡಿಕೇರಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಶಕೆ ಪ್ರಾರಂಭವಾಗಿದೆ. ಮುಂದಿನ ಎರಡೂವರೆ ವರ್ಷದ ಅವಧಿಯಲ್ಲಿ ಇನ್ನು ಹೆಚ್ಚಿನ ಅನುದಾನವನ್ನು ತಂದು ಮಾದರಿ ಕ್ಷೇತ್ರವನ್ನು ಮಾಡುವ ಗುರಿ ಶಾಸಕರಿಗಿದೆ.
ಕಾಂಗ್ರೆಸ್ ಸರ್ಕಾರ ಹಾಗೂ ಜಿಲ್ಲೆಯ ಶಾಸಕರು ಸಿ ಆ್ಯಂಡ್ ಡಿ ಭೂಮಿ ಸಮಸ್ಯೆ ಬಗೆಹರಿಸಲು ಎಲ್ಲ ರೀತಿಯ ಸಹಾಯ ಮಾಡಿದ್ದಾರೆ. ಸರ್ಕಾರದಿಂದ ವಿಶೇಷ ಸಮಿತಿ ರಚನೆಯಾಗಿದೆ. ಕಾಂಗ್ರೆಸ್ ಸರ್ಕಾರ ಯಾವತ್ತು ರೈತಸ್ನೇಹಿಯಾಗಿರುತ್ತದೆ. ಅನೇಕ ವರ್ಷಗಳಿಂದ ಬೆಳೆಹಾನಿ ಪರಿಹಾರ, ರೈತರ ಸಾಲಮನ್ನ ಮಾಡಿದೆ. ಬಡಜನರಿಗಾಗಿ ಅನೇಕ ಯೋಜನೆಗಳನ್ನು ತಂದಿದೆ ಎಂದು ಹೇಳಿದರು.
ಬ್ಲಾಕ್ ಉಪಾಧ್ಯಕ್ಷ ಬಿ.ಎಂ.ಬಸವರಾಜು, ಕಾರ್ಯದರ್ಶಿ ಸುನಿಲ್, ಡಿಸಿಸಿ ಜನಾರ್ಧನ್, ನಗರ ಅಧ್ಯಕ್ಷ ಮಂಜುನಾಥ ಇದ್ದರು.