ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ಆಯೋಜಿಸಿದ್ದ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಗ್ರಾಮಸ್ಥರು ಅಭಿವೃದ್ಧಿ ವಿಚಾರಗಳ ಕುರಿತು ಚರ್ಚಿಸಿದರು. ಸತೀಶ್, ಓಂಕಾರಪ್ಪ, ನಟೇಶ್ ಇದ್ದರು.
- ಸೂರ್ಲಬ್ಬಿ ಬೂತ್ ಕಾಂಗ್ರೆಸ್ ಸಭೆ ಸಮಿತಿ
- ಅಧ್ಯಕ್ಷ ಬಿ.ಬಿ.ಸತೀಶ್ ಅವರ ನೇತೃತ್ವ
ಸೋಮವಾರಪೇಟೆ: ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ಸೂರ್ಲಬ್ಬಿ ಬೂತ್ ಕಾಂಗ್ರೆಸ್ ಸಭೆ ಸಮಿತಿ ಅಧ್ಯಕ್ಷ ಬಿ.ಬಿ.ಸತೀಶ್ ಅವರ ನೇತೃತ್ವದಲ್ಲಿ ಭಾನುವಾರ ಆಯೋಜಿಸಲಾಗಿತ್ತು.
ಹೆಚ್ಚು ಮಳೆ ಬೀಳುವ ಸೂರ್ಲಬ್ಬಿ ಜನರ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನವನ್ನು ಶಾಸಕ ಡಾ.ಮಂತರ್‌ಗೌಡ ಮಾಡುತ್ತಿದ್ದಾರೆ. ಇಲ್ಲಿನ ಪಕ್ಷದ ಕಾರ್ಯಕರ್ತರ ಅಭಿವೃದ್ಧಿಯ ಪಟ್ಟಿಯನ್ನು ಶಾಸಕರಿಗೆ ನೀಡಿದ್ದಾರೆ. ಅದರಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದ ಅನುದಾನ ಕಲ್ಪಿಸಲಾಗುತ್ತದೆ ಎಂದು ಬಿ.ಬಿ.ಸತೀಶ್ ಹೇಳಿದರು.
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಂದ ಬಡ ಹಾಗು ಹಿಂದುಳಿದ ವರ್ಗಗಳಿಗೆ ಸಾಕಷ್ಟು ನೆರವಾಗುತ್ತಿದೆ. ಅಂತಹ ಯೋಜನೆಗಳನ್ನು ಟೀಕೆ ಮಾಡುತ್ತ ಗ್ಯಾರಂಟಿಯನ್ನು ನಿಲ್ಲಿಸುವ ಪ್ರಯತ್ನವನ್ನು ಬೇರೆ ಪಕ್ಷಗಳು ಮಾಡುತ್ತಿವೆ. ಜನಸಾಮಾನ್ಯರ ಜೀವನಮಟ್ಟವನ್ನು ಮೇಲಕ್ಕೆತ್ತುವ ನಿಟ್ಟಿನಲ್ಲಿ ಸರ್ಕಾರದ ಈ ಯೋಜನೆಗಳು ಪರಿಣಾಮಕಾರಿಯಾಗಿದೆ ಎಂದು ಹೇಳಿದರು.
ಶಾಸಕರಾದ ಡಾ. ಮಂತರ್ ಗೌಡ ಅವರ ನೇತೃತ್ವದಲ್ಲಿ ಹಲವು ಮಹತ್ವದ ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ರಸ್ತೆ, ಕುಡಿಯುವ ನೀರು, ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳು ಜನರಿಗೆ ಅನುಕೂಲವಾಗುವಂತೆ ಕೈಗೊಳ್ಳಲಾಗುತ್ತಿದ್ದು, ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಶಾಸಕರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು.
ವಿಧಾನಸಭೆಯಲ್ಲಿ ವಿಶೇಷವಾಗಿ 94ಸಿ ಮತ್ತು 94ಸಿಸಿ ಅರ್ಜಿಗಳ ಸ್ವೀಕಾರ ವಿಷಯದಲ್ಲಿ ಸಮಗ್ರವಾದ ವಾದ ಮಂಡಿಸಿ, ಕ್ಷೇತ್ರದ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಪಕ್ಷದ ಕಾರ್ಯಕರ್ತರು ಇನ್ನಷ್ಟು ಸಂಘಟಿತರಾಗಿ ಕೆಲಸ ಮಾಡಬೇಕು. ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವುದು ಅತ್ಯಂತ ಮುಖ್ಯವಾಗಿದ್ದು, ಪ್ರತಿಯೊಬ್ಬ ಕಾರ್ಯಕರ್ತರೂ ಜನರ ಸಂಪರ್ಕವನ್ನು ವಿಸ್ತರಿಸಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಗರ್ವಾಲೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಓಂಕಾರಪ್ಪ, ಪಕ್ಷದ ಪ್ರಮುಖರಾದ ನಟೇಶ್, ಸೀತಮ್ಮ, ಗಣೇಶ್, ನಾಣಿಯಪ್ಪ, ರಫೀಕ್ ಸೇರಿದಂತೆ ಕಾರ್ಯಕರ್ತರು ಇದ್ದರು.