ಕಿರು ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಪಿ.ಕಲಾವತಿ ಅವರು ಉದ್ಘಾಟಿಸಿದರು. ಟಿ.ಭಾಗ್ಯ ನಂದಮ್, ವಿ.ರಮೇಶ್ ಬಾಬು ಇತರರಿದ್ದರು. 
ಕೊಡಗು

ವೃತ್ತಿ ಕೌಶಲ್ಯ ಹೆಚ್ಚಿಸಿಕೊಂಡು ಸ್ವ ಉದ್ಯೋಗ ಪಡೆಯಿರಿ

ಆದರ್ಶ್. ಎಂ.ಕೆ.

ಪ್ರಮುಖ ಮುಖ್ಯಾಂಶಗಳು

  • ವೃತ್ತಿ ಕೌಶಲ್ಯ ಹೆಚ್ಚಿಸಿಕೊಂಡು ಸ್ವ ಉದ್ಯೋಗ ಪಡೆಯಿರಿ
  • ಕಿರು ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪಿ.ಕಲಾವತಿ ಸಲಹೆ
ಮಡಿಕೇರಿ: ಜೀವನದ ಉನ್ನತ ಹಂತಕ್ಕೇರಲು ಕಲಿಕೆ ಒಂದೇ ಗುರಿಯಾಗಬೇಕು. ಆ ನಿಟ್ಟಿನಲ್ಲಿ ಮಹಿಳೆಯರು ಹೊಸ ಕೌಶಲ್ಯ ಕಲಿಯುವ ಮೂಲಕ ವೃತ್ತಿ ಜೀವನದಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ಗೌರವ ಹಾಗೂ ಅವಕಾಶ ಗಿಟ್ಟಿಸಿಕೊಳ್ಳಬೇಕು ಎಂದು ಮಡಿಕೇರಿ ನಗರಸಭೆ ಅಧ್ಯಕ್ಷೆ ಪಿ.ಕಲಾವತಿ ಅವರು ಕರೆ ನೀಡಿದರು.
ಬೆಂಗಳೂರಿನ ನಬಾರ್ಡ್ ಸಂಸ್ಥೆ ವತಿಯಿಂದ ಮೈಸೂರಿನ ಓಡಿಪಿ ಸಂಸ್ಥೆಯ ಸಹಯೋಗದಲ್ಲಿ ನಗರದ ದಾಸವಾಳ ರಸ್ತೆಯಲ್ಲಿರುವ ಬಸಪ್ಪ ಶಿಶುವಿಹಾರ ಸಭಾಂಗಣದಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ಕಿರು ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಘ-ಸಂಸ್ಥೆಗಳು ಮಹಿಳೆಯರ ಕೌಶಲ್ಯವನ್ನು ವೃದ್ಧಿಪಡಿಸಲು ಸಹಕಾರಿಯಾಗಿದೆ. ಸಾಧನೆಯ ಹಾದಿಯಲ್ಲಿ ಒತ್ತಡ ಸಹಜ. ಆದರೆ ಶಾಂತ ಮತ್ತು ನಗುಮುಖದ ಮನಸ್ಥಿತಿಯು ಆತಂಕವನ್ನು ಕಡಿಮೆಮಾಡಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಕರಿಸುತ್ತದೆ. ಅಲ್ಲದೇ ಮುಖದಲ್ಲಿನ ನಗು ನಮ್ಮಲ್ಲಿರುವ ಧನಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿ ಸಮಾಜದಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಗೌರವವನ್ನು ತಂದುಕೊಡುತ್ತದೆ. ಕಷ್ಟಗಳನ್ನು ಮೆಟ್ಟಿ ನಿಲ್ಲುವ ದೊಡ್ಡ ಶಕ್ತಿಯಾಗಿ ನಮಗೆ ಸಹಾಯ ಮಾಡುತ್ತದೆ. ಆದ್ದರಿಂದ ಮಹಿಳೆಯರು ತಮಗೆ ಸಿಗುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನುಗ್ಗಬೇಕು ಎಂದು ಪಿ.ಕಲಾವತಿ ಸಲಹೆ ನೀಡಿದರು.
ಮಡಿಕೇರಿ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲೆ ಟಿ.ಭಾಗ್ಯ ನಂದಮ್ ಮಾತನಾಡಿ, ಕಲೆ ಮತ್ತು ಕೌಶಲ್ಯ ಎಂಬುದು ಮನುಷ್ಯನ ಸೃಜನಶೀಲತೆ ಮತ್ತು ಸಾಮರ್ಥ್ಯದ ಎರಡು ಪ್ರಮುಖ ಮುಖವಾಗಿದ್ದು, ಮಹಿಳೆಯರು ಕೌಶಲ್ಯಾಭಿವೃದ್ಧಿ ಹೆಚ್ಚಿಸಿಕೊಂಡು ಸ್ವಾವಲಂಭಿ ಬದುಕು ಸಾಧಿಸಬೇಕು ಎಂದರು.
ಜಗತ್ತು ವೇಗವಾಗಿ ಬದಲಾಗುತ್ತಿದೆ. ಹೊಸ ವಿಷಯ ಕಲಿಯುವ ಹಂಬಲವಿದ್ದರೆ ಮಾತ್ರ ನಾವು ಕಾಲಕ್ಕೆ ತಕ್ಕಂತೆ ಬದಲಾಗಲು ಮತ್ತು ಬೆಳೆಯಲು ಸಾಧ್ಯ. ಇಂದಿನ ಆಧುನಿಕ ತಂತ್ರಜ್ಞಾನ ಮತ್ತು ಆಲೋಚನೆಗಳಿಗೆ ಹೊಂದಿಕೊಳ್ಳಬೇಕು. ಯಾವುದೇ ಹಂತದಲ್ಲೂ ಹೊಸ ಕೌಶಲ್ಯ ಮೈಗೂಡಿಸಿಕೊಳ್ಳಬಹುದು ಎಂದು ವಿವರಿಸಿದರು.
ಪ್ರಸ್ತುತ ದಿನಗಳಲ್ಲಿ ಏನೇ ಮಾಡಿದರೂ ಅದು ಫ್ಯಾಷನ್ ಎಂಬ ಹೆಸರನ್ನು ಪಡೆದುಕೊಂಡಿದೆ. ಫ್ಯಾಷನ್ ಪ್ರಪಂಚವು ಸಾಂಪ್ರದಾಯಿಕ ಮತ್ತು ಆಧುನಿಕತೆಯ ಸಮ್ಮಿಲನವಾಗಿದ್ದು, ಹಿಂದಿನ ಸಾಂಪ್ರದಾಯಿಕ ಉಡುಪುಗಳಿಗೆ ಆಧುನಿಕ ಸ್ಪರ್ಶ ನೀಡುವುದು ಇಂದಿನ ದೊಡ್ಡ ಟ್ರೆಂಡ್ ಆಗಿದೆ. ಆದ್ದರಿಂದ ಮಹಿಳೆಯರು ಮನಸ್ಸಿನಲ್ಲಿ ಆಲೋಚಿಸಿದ್ದನ್ನು ಚಾಲ್ತಿಗೆ ತರಬೇಕು. ಜಗತ್ತಿನಲ್ಲಿ ಬದಲಾವಣೆ ಮುಖ್ಯ ಬದಲಾವಣೆಯಿಂದ ಅಭಿವೃದ್ಧಿ ಹೊಂದಲು ಸಾಧ್ಯ. ಆ ನಿಟ್ಟಿನಲ್ಲಿ ಕೌಶಲ್ಯ ಅಭಿವೃದ್ಧಿ ಪಡಿಸಲು ನಬಾರ್ಡ್ ಕಾರ್ಯ ನಿರ್ವಹಿಸುತ್ತಿದ್ದು, ಅದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಟಿ.ಭಾಗ್ಯ ನಂದಮ್ ಹೇಳಿದರು.
ಕೊಡಗು ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿ.ರಮೇಶ್ ಬಾಬು ಮಾತನಾಡಿ, ಕಲೆಯನ್ನು ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ. ಕಲೆ ಇದ್ದರೆ ಎಲ್ಲರೂ ನಮ್ಮ ಬಳಿ ಬರುತ್ತಾರೆ. ನಮ್ಮೊಂದಿಗೆ ಕಲೆ ಇದ್ದರೆ ಅದನ್ನು ಮುಂದಿನ ಪೀಳಿಗೆಗೂ ತಲುಪಿಸಲು ಸಾಧ್ಯವಾಗುತ್ತದೆ. ಸಾಮಾಜಿಕ ಜಾಲತಾಣ ಸದುಯೋಗಪಡಿಸಿಕೊಂಡು ತಾವು ತಯಾರಿಸಿದ ಉತ್ಪನ್ನಗಳನ್ನು ಪ್ರಚಾರಪಡಿಸಬಹುದು ಅಥವಾ ಮಾರಾಟ ಮಾಡಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೈಸೂರು ಓಡಿಪಿ ಸಂಸ್ಥೆಯ ಸಹಾಯಕ ನಿರ್ದೇಶಕ ಫಾದರ್ ಜಾನ್ ಪೆರ್ನಾಂಡಿಸ್, ಮೈಸೂರಿನ ಓಡಿಪಿ ಸಂಸ್ಥೆಯು ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಸಮಾಜದ ಹಿಂದುಳಿದ, ಬಡ ಜನರ ಸಮಗ್ರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಇದು ೧೯೮೪ರಲ್ಲಿ ಸ್ಥಾಪಿಸಲಾಗಿದ್ದು, ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ. ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿ ಮಾಡುತ್ತಿದೆ. ಕೌಶಲ್ಯ ತರಬೇತಿ ಆಯೋಜಿಸುವುದರಲ್ಲಿ ನಬಾರ್ಡ್ ಪಾತ್ರ ಪ್ರಮುಖ. ಮಹಿಳೆಯರು ಎಂದರೆ ಅಡುಗೆ ಮನೆಗೆ ಮಾತ್ರ ಸಿಮೀತರು ಎಂಬ ಭಾವನೆ ಇದೆ. ಅದರೆ ಮಹಿಳೆಯರಿಗೆ ಕೌಶಲ್ಯ ಇದ್ದರೆ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮೈಸೂರು ಓಡಿಪಿ ಸಂಸ್ಥೆಯ ಕೌಶಲ್ಯಾಭಿವೃದ್ಧಿ ಯೋಜನೆಯ ಸಂಯೋಜಕಿ ಲಲಿತಾ ಮಾತನಾಡಿ, ನಬಾರ್ಡ್ ಸಂಸ್ಥೆ ಕಳೆದ ಐದು ವ?ರ್ದಿಂದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಅಲ್ಲದೇ ಹಲವು ಮಹಿಳೆಯರನ್ನು ಸ್ವಾವಲಂಬಿಗಳಾಗಿ ಮಾಡಿದೆ. ಪ್ರತಿಯೊಬ್ಬರಲ್ಲಿ ಕಲೆ ಇರುತ್ತದೆ. ಕೌಶಲ್ಯದಿಂದ ಮಹಿಳೆಯರು ಮನೆಯಿಂದಲೇ ಆರ್ಥಿಕ ಸ್ವಾವಲಂಬಿಗಳಾಗಬಹುದು. ಆದ್ದರಿಂದ ಮಹಿಳೆಯರು ಉಚಿತವಾಗಿ ಸಿಗುವ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಓಡಿಪಿ ಸಂಸ್ಥೆಯ ಜಿಲ್ಲಾ ವಲಯ ಸಂಯೋಜಕಿ ಜಾಯ್ಸ ಮೆನೆಜೆಸ್ ನಿರೂಪಿಸಿದರೆ, ಕಾರ್ಯಕರ್ತೆ ವಿಜಯ ನಾರಾಯಣ ಸ್ವಾಗತಿಸಿ, ಸದಸ್ಯೆ ತಾರಾ ವಂದಿಸಿದರು. ಓಡಿಪಿ ಸಂಸ್ಥೆಯ ಸಂಯೋಜಕರಾದ ಮೇರಿ ಎಲಿಜಬೆತ್, ಸದಸ್ಯರಾದ ಮನೋರಮೆ, ಮೀನಕುಮಾರಿ, ದಮಯಂತಿ, ತರಬೇತುದಾರರಾದ ಹೀನಾ ಮತ್ತು ರಾಧ, ಶಿಬಿರಾರ್ಥಿಗಳು ಇತರರು ಇದ್ದರು.