ವಿರಾಜಪೇಟೆಯಲ್ಲಿ ಮಳಿಗೆಗಳ ಮುಚ್ಚುವಿಕೆ ಸಮಯ ವಿಸ್ತರಿಸುವಂತೆ ವಿರಾಜಪೇಟೆ ನಗರ ವರ್ತಕರ ಸಂಘದ ವತಿಯಿಂದ ವಿರಾಜಪೇಟೆಯ ಡಿವೈಎಸ್‌ಪಿ ಮಹೇಶ್ ಕುಮಾರ್‌ಗೆ ಮನವಿ ಸಲ್ಲಿಸಲಾಯಿತು. ಸುರೇಶ್, ರಾಜೇಶ್ ಆರ್.ಶೇಠ್, ಶಶಿ, ಎಂ.ಎಸ್.ಮೊಹಮ್ಮದ್ ಹನೀಫ್ ಇದ್ದರು 
ಕೊಡಗು

ವ್ಯಾಪಾರ ಅವಧಿ ವಿಸ್ತರಣೆಗೆ ಮನವಿ

ವಿರಾಜಪೇಟೆ: ವಿರಾಜಪೇಟೆಯಲ್ಲಿ ಹಬ್ಬದ ದಿನಗಳಂದು ರಾತ್ರಿ ವೇಳೆ ಅಂಗಡಿಗಳನ್ನು ಶೀಘ್ರ ಮುಚ್ಚುವುದರಿಂದ ಸಾರ್ವಜನಿಕರಿಗೆ ಹಾಗೂ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ. ವರ್ತಕರ ಹಿತದೃಷ್ಟಿಯಿಂದ ಕಾಲಾವಧಿ ವಿಸ್ತರಿಸಿಕೊಡಬೇಕೆಂದು ವಿರಾಜಪೇಟೆ ನಗರ ವರ್ತಕರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಪಿ.ಎ.ಮಂಜುನಾಥ್ ನೇತೃತ್ವದಲ್ಲಿ ವಿರಾಜಪೇಟೆಯ ಡಿವೈಎಸ್‌ಪಿ ಮಹೇಶ್‌ಕುಮಾರ್ ಹಾಗೂ ನಗರ ಠಾಣಾಧಿಕಾರಿ ಎಚ್.ಎಸ್.ಪ್ರಮೋದ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಅಧ್ಯಕ್ಷ ಪಿ.ಎ.ಮಂಜುನಾಥ್ ಮಾತನಾಡಿ, ರಾತ್ರಿ ವೇಳೆ ಸಾಮಾನುಗಳನ್ನು ಲಾರಿ ಅಥವಾ ಇನ್ನಿತರ ವಾಹನಗಳಲ್ಲಿ ತಂದು ಇಳಿಸಿ ಅದರ ನಿರ್ವಹಣೆ ಮಾಡುವ ಸಂದರ್ಭ ಕಾಲಾವಕಾಶ ಹೆಚ್ಚು ಬೇಕಾಗುತ್ತದೆ. ಅಲ್ಲದೆ ದೂರದಿಂದ ಬಂದವರಿಗೆ ಏನಾದರೂ ವಸ್ತುಗಳನ್ನು ತೆಗೆದುಕೊಳ್ಳಬೇಕೆಂದರೂ ಅಂಗಡಿಗಳು ಇರುವುದಿಲ್ಲ. ಇದರಿಂದ ಸಾರ್ವಜನಿಕರು, ವ್ಯಾಪಾರಿಗಳಿಗೂ ತೊಂದರೆಯಾಗಿದೆ. ಕನಿಷ್ಠ ಪಕ್ಷ ಹಬ್ಬಗಳ ದಿನದಂದು ಅಂಗಡಿಗಳನ್ನು ಮುಚ್ಚುವ ಸಮಯವನ್ನು ವಿಸ್ತರಿಸಿ ಕೊಡುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಡಿವೈಎಸ್‌ಪಿ ಮಹೇಶ್ ಕುಮಾರ್, ಸಮಯ ಸಂದರ್ಭ ನೋಡಿಕೊಂಡು ಸೂಕ್ತ ರೀತಿಯಲ್ಲಿ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಸಂಘದ ನಿರ್ದೇಶಕ ಕೆ.ಎಚ್.ಮೊಹಮ್ಮದ್ ರಾಫಿ, ನಿರ್ದೇಶಕರಾದ ಸುರೇಶ್, ರಾಜೇಶ್ ಆರ್ ಶೇಠ್, ಶಶಿ ಕೆ.ಆರ್., ಎಂ.ಎಸ್.ಮೊಹಮ್ಮದ್ ಹನೀಫ್ ಇದ್ದರು.