ಮಾರ್ನಿಂಗ್ ಗುಡ್‌ಮಿಂಟನ್ ತಂಡದ ವತಿಯಿಂದ ನಡೆದ ಮಾನ್ಸೂನ್ ಧಮಾಕಾ ಪುರುಷರ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಆಟಗಾರರು. 
ಕೊಡಗು

ಉತ್ತಮ ಜೀವನ ಶೈಲಿಗೆ ಕ್ರೀಡೆಗಳು ಸಹಕಾರಿ

ಪ್ರಮುಖ ಮುಖ್ಯಾಂಶಗಳು

  • ಉತ್ತಮ ಜೀವನ ಶೈಲಿಗೆ ಕ್ರೀಡೆಗಳು ಸಹಕಾರಿ
  • ಪುರುಷರ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಸ್ಮಯಿ ಚಕ್ರವರ್ತಿ ಅಭಿಮತ
ಮಡಿಕೇರಿ: ಕ್ರೀಡೆಯು ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿ, ಶಿಸ್ತು ಹಾಗೂ ಉತ್ತಮ ಜೀವನ ಶೈಲಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೊಡಗು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ ಚಕ್ರವರ್ತಿ ಹೇಳಿದರು.
ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ಮಡಿಕೇರಿಯ ಮಾರ್ನಿಂಗ್ ಗುಡ್‌ಮಿಂಟನ್ ತಂಡದ ವತಿಯಿಂದ ನಡೆದ ಮಾನ್ಸೂನ್ ಧಮಾಕಾ ಪುರುಷರ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿನಿತ್ಯ ನಿಯಮಿತವಾಗಿ ಬ್ಯಾಡ್ಮಿಂಟನ್ ಆಡುತ್ತಿರುವ ಮಾರ್ನಿಂಗ್ ಗುಡ್‌ಮಿಂಟನ್ ತಂಡದ ಸದಸ್ಯರನ್ನು ಅಭಿನಂದಿಸಿದ ಅವರು, ಸಮಾಜದಲ್ಲಿ ಆರೋಗ್ಯಕರ ಕ್ರೀಡಾ ಸಂಸ್ಕೃತಿಯನ್ನು ಬೆಳೆಸುತ್ತಿರುವ ತಂಡದ ಕಾರ್ಯವನ್ನು ಶ್ಲಾಘಿಸಿದರು.
ಮಡಿಕೇರಿಯ ಮಾರ್ನಿಂಗ್ ಗುಡ್‌ಮಿಂಟನ್ ತಂಡದ ವತಿಯಿಂದ ತಂಡದ ಸ್ಥಾಪಕಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನಿರ್ಂಗ್ ಗುಡ್‌ಮಿಂಟನ್ ತಂಡದ ಉದ್ದೇಶ ಕೇವಲ ಕ್ರೀಡಾ ಚಟುವಟಿಕೆಗಳಿಗೆ ಸೀಮಿತವಾಗಿಲ್ಲ. ಆರೋಗ್ಯಕರ ಜೀವನ ಶೈಲಿ, ಸ್ನೇಹ, ಸೌಹಾರ್ಧತೆ ಹಾಗೂ ಉತ್ತಮ ಬಾಂಧವ್ಯವನ್ನು ಬೆಳೆಸುವುದು ಕೂಡ ಪ್ರಮುಖ ಧ್ಯೇಯವಾಗಿದೆ ಎಂದು ತಿಳಿಸಿದರು.
ನೂತನ ಅಧ್ಯಕ್ಷ ಶಮ್ಮಿ ಸುಬ್ಬಯ್ಯ ಮಾತನಾಡಿ, ಮಾನಿರ್ಂಗ್ ಗುಡ್‌ಮಿಂಟನ್ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸುವುದರ ಜೊತೆಗೆ ಯುವ ಪ್ರತಿಭೆಗಳನ್ನು ಉತ್ತೇಜಿಸಲಾಗುವುದು. ಭವಿಷ್ಯದಲ್ಲಿ ಮತ್ತಷ್ಟು ಕ್ರೀಡಾಕೂಟಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಂಟಿ ಕಾರ್ಯದರ್ಶಿ ಸತ್ಯ ಚೆಯ್ಯಂಡ ಹಾಗೂ ಪದಾಧಿಕಾರಿಗಳು ಇದ್ದರು.
ಪಂದ್ಯಾವಳಿ ಯಶಸ್ವಿ: ಮಡಿಕೇರಿಯ ಮಾರ್ನಿಂಗ್ ಗುಡ್‌ಮಿಂಟನ್ ತಂಡದ ವತಿಯಿಂದ ತಂಡದ ಸ್ಥಾಪಕಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಅವರ ನೇತೃತ್ವದಲ್ಲಿ ಮಾನ್ಸೂನ್ ಧಮಾಕಾ ಪುರುಷರ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು. ಪಂದ್ಯಾವಳಿಯಲ್ಲಿ ೧೪ ಡಬಲ್ಸ್ ತಂಡಗಳು ಭಾಗವಹಿಸಿ ಕ್ರೀಡಾಸ್ಫೂರ್ತಿ ಮತ್ತು ಸ್ಪರ್ಧಾತ್ಮಕ ಮನೋಭಾವದೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದವು. ರೋಚಕ ಅಂತಿಮ ಪಂದ್ಯದಲ್ಲಿ ಡಾ.ಕರುಣಾಕರ್ ಹಾಗೂ ಹುಸೇನ್ ಜೋಡಿ ಚಾಂಪಿಯನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು. ಚೇತನ್ ಹಾಗೂ ಅಯ್ಯನ್ ಗೌಡ ಜೋಡಿ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿತು. ವಿಜೇತರಿಗೆ ಟ್ರೋಫಿ ಹಾಗೂ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು. ಪಂದ್ಯಾವಳಿಗೆ ಕ್ರೀಡಾಭಿಮಾನಿಗಳಿಂದ ಉತ್ತಮ ಸ್ಪಂದನೆ ದೊರೆಯಿತು.
ನೂತನ ಪದಾಧಿಕಾರಿಗಳ ಆಯ್ಕೆ: ಇದೇ ಸಂದರ್ಭ ಮಾನಿರ್ಂಗ್ ಗುಡ್‌ಮಿಂಟನ್ ತಂಡದ ನೂತನ ಪದಾಧಿಕಾರಿಗಳನ್ನು ಘೋಷಿಸಲಾಯಿತು. ಕುಕ್ಕೇರ ಜಯ ಚಿಣ್ಣಪ್ಪ ಅವರು ಸ್ಥಾಪಕ ಅಧ್ಯಕ್ಷರಾಗಿರುವ ತಂಡದ ನೂತನ ಅಧ್ಯಕ್ಷರಾಗಿ ಶಮ್ಮಿ ಸುಬ್ಬಯ್ಯ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಡಾ.ಕರುಣಾಕರ್, ಕ್ಯಾಪ್ಟನ್ ಶೆಟ್ಟಿ, ಗೌರವ ಕಾರ್ಯದರ್ಶಿಯಾಗಿ ಕವಿ ಪ್ರಸಾದ್, ಜಂಟಿ ಕಾರ್ಯದರ್ಶಿಯಾಗಿ ಸತ್ಯ ಚೆಯ್ಯಂಡ, ಖಜಾಂಚಿಯಾಗಿ ಹುಸೇನ್ ಹಾಗೂ ಜಂಟಿ ಖಜಾಂಚಿಯಾಗಿ ರಜಿನಿಕಾಂತ್ ಅವರನ್ನು ಆಯ್ಕೆ ಮಾಡಲಾಯಿತು.