ವಿಶೇಷ ಚೇತನರ ಕುಂದುಕೊರತೆ ಅಹವಾಲು ಆಲಿಸುವ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.
- ವಿಶೇಷಚೇತನರ ಕುಂದುಕೊರತೆ ಸಕಾಲದಲ್ಲಿ ಸ್ಪಂದಿಸಿ
- ವಿಶೇಷ ಚೇತನರ ಕುಂದುಕೊರತೆ ಅಹವಾಲು ಆಲಿಸುವ ಸಭೆಯಲ್ಲಿ ಸೋಮಶೇಖರ್
ಮಡಿಕೇರಿ; ವಿಶೇಷಚೇತನರ ಕುಂದುಕೊರತೆ ಸಕಾಲದಲ್ಲಿ ಅಧಿಕಾರಿಗಳು ಸ್ಪಂದಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶೇಷ ಚೇತನರ ಕುಂದುಕೊರತೆ ಅಹವಾಲು ಆಲಿಸುವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎರಡು ಗಂಟೆಗೂ ಹೆಚ್ಚು ಕಾಲ ವಿಶೇಷಚೇತನರ ಅಹವಾಲನ್ನು ಆಲಿಸಿ, ಸಮಸ್ಯೆಗಳನ್ನು ಪರಿಹರಿಸಲಾಗುವುದು. ವಿಶೇಷಚೇತನರ ಕುಂದುಕೊರತೆ ಆಲಿಸುವ ಸಭೆಯನ್ನು ಪ್ರತೀ ಮೂರು ತಿಂಗಳಿಗೊಮ್ಮೆ ನಡೆಸಬೇಕು. ತಮ್ಮ ಹಂತದಲ್ಲಿ ಪರಿಹಾರ ಆಗದಿರುವ ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ತಾಲ್ಲೂಕು ಮಟ್ಟದಲ್ಲಿಯೂ ಸಹ ವಿಶೇಷಚೇತನರ ಕುಂದುಕೊರತೆ ಆಲಿಸುವ ಸಭೆ ಏರ್ಪಡಿಸಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಜೊತೆಗೆ ಸೌಲಭ್ಯಗಳ ಬಗ್ಗೆಯೂ ಸಹ ಮಾಹಿತಿ ನೀಡಬೇಕು. ವಿವಿಧ ಇಲಾಖೆ ವ್ಯಾಪ್ತಿಯಲ್ಲಿ ವಿಶೇಷಚೇತನರಿಗಾಗಿ ನಿಗಧಿ ಮಾಡಿರುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ವಿವಿಧ ಇಲಾಖೆ ವ್ಯಾಪ್ತಿಯಲ್ಲಿ ಆಗಬೇಕಿರುವ ಕೆಲಸವನ್ನು ಆದ್ಯತೆ ಮೇಲೆ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ತಾಕೀತು ಮಾಡಿದರು.
ವಿಶೇಷಚೇತನರನ್ನು ಕಚೇರಿಗಳಲ್ಲಿ ಗೌರವಯುತವಾಗಿ ನಡೆಸಿಕೊಳ್ಳಬೇಕು. ಕಚೇರಿಗೆ ಸುತ್ತಾಡಿಸುವುದು ಅಥವಾ ಶತಾಯಿಸುವುದು ಸರಿಯಾದ ಬೆಳವಣಿಗೆಯಲ್ಲ. ವಿಶೇಷಚೇತನರಿಗೆ ಮಾನವೀಯ ದೃಷ್ಟಿಯಿಂದ ಕೆಲಸ ಮಾಡಿಕೊಡಬೇಕು. ಕಚೇರಿ ಹಾಗೂ ಶಾಲೆಗಳಲ್ಲಿ ವಿಶೇಷಚೇತನರಿಗೆ ರ‌್ಯಾಂಪ್ ವ್ಯವಸ್ಥೆ ಇರಬೇಕು. ವಿಶೇಷಚೇತನರು ಕಚೇರಿ ಒಳಭಾಗಕ್ಕೆ ಬರಲು ಕಷ್ಟಸಾಧ್ಯವಾದಲ್ಲಿ, ಅವರ ಬಳಿಗೆ ಭೇಟಿ ನೀಡಿ, ಆಗಬೇಕಿರುವ ಕೆಲಸಗಳಿಗೆ ಸ್ಪಂದಿಸಬೇಕು. ವಿಶೇಷಚೇತನರಿಗಾಗಿ ತಾಲ್ಲೂಕು ಮಟ್ಟದಲ್ಲಿಯೂ ಆಧಾರ್ ನೋಂದಣಿ ಶಿಬಿರ ಏರ್ಪಡಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ವಿಶೇಷಚೇತನರ ಅಧಿಕಾರಿ ವಿಮಲ ಮಾತನಾಡಿ, ಜಿಲ್ಲೆಯಲ್ಲಿ ಮಡಿಕೇರಿ, ಶನಿವಾರಸಂತೆ, ಸುಂಟಿಕೊಪ್ಪ, ಪಾಲಿಬೆಟ್ಟದಲ್ಲಿ ವಿಶೇಷ ಶಾಲೆಗಳು ನಡೆಯುತ್ತಿವೆ. ಹಾಗೆಯೇ ಮನೆಯಿಂದಲೂ ಸಹ ೨೭೬ ವಿಶೇಷಚೇತನ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿಶೇಷಚೇತನ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಲ್ಲಿ ಶಿಕ್ಷಣ ಇಲಾಖೆ ಜೊತೆ ಸಮನ್ವಯ ಸಾಧಿಸಲಾಗುವುದು ಎಂದರು.
ವಿಶೇಷಚೇತನರ ಅಧಿಕಾರಿ ವಿಮಲ ಮಾತನಾಡಿ, ವಿಶೇಷಚೇತನರಿಗೆ ಹಲವು ಸೌಲಭ್ಯಗಳಿದ್ದು, ಸರ್ಕಾರದಿಂದ ಗುರುತಿನ ಚೀಟಿ, ತ್ರಿಚಕ್ರ ವಾಹನ, ಆರೋಗ್ಯ ಸೇವೆ ಸೇರಿದಂತೆ ವಿವಿಧ ಸೌಲಭ್ಯ ನೀಡಲಾಗುತ್ತಿದೆ. ದೇಹದ ಯಾವುದೇ ಭಾಗದಲ್ಲಿ ಶೇ.೪೦ ಕ್ಕಿಂತ ಹೆಚ್ಚು ವಿಕಲತೆ ಹೊಂದಿದ್ದರೆ, ಅಂತವರನ್ನು ವಿಶೇಷಚೇತನರೆಂದು ಪರಿಗಣಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ವಿಶೇಷಚೇತನರ ಜಿಲ್ಲಾಧ್ಯಕ್ಷ ಬಿ.ಎಂ.ತಿರುಮಲೇಶ್ ಮಾತನಾಡಿ, ಕಳೆದ ನಾಲ್ಕು ತಿಂಗಳಿನಿಂದ ಪಿಂಚಣಿ ತಲುಪದೆ ತೊಂದರೆ ಆಗಿದೆ. ಜೊತೆಗೆ ವಿಶೇಷಚೇತನರಿಗೆ ೩೨ ಸಾವಿರ ಆದಾಯ ಮಿತಿ ನಿಗದಿ ಮಾಡಿದ ಹಿನ್ನೆಲೆ ಕಳೆದ ನಾಲ್ಕು ತಿಂಗಳಿನಿಂದ ಪಿಂಚಣಿ ಸ್ಥಗಿತಗೊಂಡಿದೆ ಎಂದು ಜಿಲ್ಲಾಧಿಕಾರಿ ಅವರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಆದಾಯ ಮಿತಿ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆಗಳು ಪರಿಹಾರ ಆಗಲಿದೆ ಎಂದರು.
ಸುಂಟಿಕೊಪ್ಪ ಸ್ವಸ್ಥ ಸಂಸ್ಥೆಯ ಆರತಿ ಸೋಮಯ್ಯ ಮಾತನಾಡಿ, ಎಸ್‌ಎಸ್‌ಎಲ್‌ಸಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಆಂತರಿಕ ಅಂಕ ನೀಡುವಂತಾಗಬೇಕು. ಇದರಿಂದ ವಿಶೇಷಚೇತನ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಸಹಕಾರಿಯಾಗಲಿದೆ ಎಂದರು.
ವಿಶೇಷಚೇತನರೊಬ್ಬರು ಮಾತನಾಡಿ, ವಿಶೇಷಚೇತನರಿಗೆ ಬಸ್‌ಗಳಲ್ಲಿ ಪ್ರತ್ಯೇಕ ಆಸನ ಇದ್ದರೂ ಸಹ, ಯಾರೂ ಆಸನ ಬಿಟ್ಟುಕೊಡುವುದಿಲ್ಲ. ಮಾನವೀಯತೆ ಇಲ್ಲದ ವರ್ತನೆ ಕಾಣುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ವಾಮಿ ವಿವೇಕಾನಂದ ಯುವ ಸಂಸ್ಥೆಯ ಅಂಕಾಚಾರಿ ಮಾತನಾಡಿ, ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಮುದಾಯ ಪುನರ್ವಸತಿ ಕೇಂದ್ರ ಹಾಗೂ ಮಡಿಕೇರಿಯ ತಾಲ್ಲೂಕು ಪಂಚಾಯತ್ ಕಚೇರಿಯ ಹತ್ತಿರದ ಪುನರ್ವಸತಿ ಸಂಪನ್ಮೂಲ ಕೇಂದ್ರದಲ್ಲಿ ವಿಶೇಷಚೇತನರಿಗೆ ಫಿಸಿಯೋಥೆರಪಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಹಲವು ವಿಶೇಷಚೇತನರು ಸಭೆಯಲ್ಲಿ ಪಾಲ್ಗೊಂಡು ವಿವಿಧ ವಿಷಯಗಳ ಕುರಿತು ಪ್ರಸ್ತಾಪಿಸಿ ಜಿಲ್ಲಾಧಿಕಾರಿ ಅವರ ಗಮನ ಸೆಳೆದರು.
ಸಭೆಯಲ್ಲಿ ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಹೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣಪತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸುಮಂಗಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಅವರು ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ವಿಶೇಷಚೇತನರಿಗೆ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.