ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಎಸ್‌ಐಆರ್ ಪ್ರಗತಿ ಸಂಬಂಧ ನಡೆದ ಸಭೆಯಲ್ಲಿ ನೋಡಲ್ ಅಧಿಕಾರಿಗಳಿದ್ದರು. 
ಕೊಡಗು

ಎಸ್‌ಐಆರ್: ಡಿಜಟಲೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ

ಪ್ರಮುಖ ಮುಖ್ಯಾಂಶಗಳು

  • ಎಸ್‌ಐಆರ್: ಡಿಜಟಲೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ
  • ಎಸ್‌ಐಆರ್ ಪ್ರಗತಿ ಸಂಬಂಧ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಸೋಮಶೇಖರ್
ಮಡಿಕೇರಿ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಗಣತಿ ನಮೂನೆಯ ಡಿಜಿಟಲೀಕರಣವು ಶೇ.೮೦ ರಷ್ಟು ಪೂರ್ಣಗೊಂಡಿದ್ದು, ಇದೇ ಜು.೨೮ ರೊಳಗೆ ಶೇ.೧೦೦ ರಷ್ಟು ಪ್ರಗತಿ ಸಾಧಿಸುವಂತೆ ನೋಡಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಎಸ್‌ಐಆರ್ ಪ್ರಗತಿ ಸಂಬಂಧ ನೋಡಲ್ ಅಧಿಕಾರಿಗಳ ಜತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್‌ಐಆರ್ ಸಂಬಂಧ ಗಣತಿ ನಮೂನೆ ವಿತರಣಾ ಕಾರ್ಯ ಶೇ.೧೦೦ ರಷ್ಟು ಪೂರ್ಣಗೊಂಡಿದೆ. ಆದರೂ ಸಹ ಯಾರಾದರೂ ಬಿಟ್ಟು ಹೋಗಿದ್ದಲ್ಲಿ ಗಣತಿ ನಮೂನೆ ವಿತರಿಸಿ ಭರ್ತಿ ಮಾಡಿದ ನಮೂನೆ ಪಡೆದು, ಡಿಜಟಲೀಕರಣ ಗೊಳಿಸಬೇಕು. ಪ್ರತೀ ನೋಡಲ್ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಗಣತಿ ನಮೂನೆ ವಿತರಿಸಿ ಭರ್ತಿ ಮಾಡಿದ ನಮೂನೆಯನ್ನು ಪಡೆದು ಡಿಜಿಟಲೀಕರಣದ ಪ್ರಗತಿ ಸಾಧಿಸಬೇಕು. ಅರ್ಹ ಮತದಾರರು ಎಸ್‌ಐಆರ್ ಪ್ರಕ್ರಿಯೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ತಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಗಣತಿ ನಮೂನೆ ವಿತರಣೆ ಜೊತೆಗೆ ಡಿಜಿಟಲೀಕರಣ ಪ್ರಕ್ರಿಯೆಯು ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳು ಶ್ರದ್ಧೆಯಿಂದ ಕೆಲಸ ಮಾಡಬೇಕು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಡಿಜಿಟಲೀಕರಣ ಮಾಡುವುದರ ಜೊತೆಗೆ ಗುಣಮಟ್ಟ ಪರೀಕ್ಷೆ ಮಾಡಬೇಕು. ಮತದಾರರು ಶಾಶ್ವತ ಸ್ಥಳಾಂತರ, ಮರಣ ಹೊಂದಿದ್ದಲ್ಲಿ, ಎರಡು ಕಡೆ ಹೆಸರು ಹೊಂದಿರುವ, ಇತರೆ ಕಾರಣಗಳಿಂದ ಗಣತಿ ನಮೂನೆ ಸಲ್ಲಿಸದಿರುವ ಮತದಾರರ ಬಗ್ಗೆಯೂ ಸಹ ವಿಶೇಷ ಗಮನಹರಿಸಬೇಕು. ಈ ಸಂಬಂಧ ಜಿಲ್ಲೆಯಲ್ಲಿ ೪೫,೮೯೭ ಮಂದಿ ಮತದಾರರು ಇದ್ದು, ಈ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.
ತಮ್ಮ ಹಂತದಲ್ಲಿ ಬಿಎಲ್‌ಒ ಮತ್ತು ಬಿಎಲ್‌ಎಗಳ ಸಭೆಯನ್ನು ಜೊತೆಗೂಡಿ ನಡೆಸಿ ಎಸ್‌ಐಆರ್ ಪ್ರಕ್ರಿಯೆಯನ್ನು ಯಶಸ್ವಿಗೊಳಿಸುವಲ್ಲಿ ಶ್ರಮಿಸಬೇಕಿದೆ. ಎಲ್ಲರೂ ತಂಡವಾಗಿ ಕಾರ್ಯನಿರ್ವಹಿಸಬೇಕು. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂದರ್ಭದಲ್ಲಿ ಮೃತಪಟ್ಟ ಮತದಾರರ ಸಂಖ್ಯೆಯು ೧೨,೩೨೩, ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರ ಸಂಖ್ಯೆ ೨೪,೬೭೬, ಎರಡು ಕಡೆ ಹೆಸರು ಹೊಂದಿರುವ ಮತದಾರರ ಸಂಖ್ಯೆ ೩,೪೮೪, ಗೈರು ಮತದಾರರ ಸಂಖ್ಯೆ ೫,೩೩೯, ಹಾಗೆಯೇ ಇತರೆ ಕಾರಣಗಳಿಂದ ಗಣತಿ ನಮೂನೆ ಸಲ್ಲಿಸದಿರುವ ಮತದಾರರ ಸಂಖ್ಯೆ ೭೫ ಇದ್ದು, ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಜಿಲ್ಲೆಯಲ್ಲಿ ೪,೬೮,೬೫೭ ಮತದಾರರು ಇದ್ದು, ಇಷ್ಟು ಮಂದಿ ಮತದಾರರಿಗೆ ಗಣತಿ ನಮೂನೆ ವಿತರಿಸಲಾಗಿದ್ದು, ಇದರಲ್ಲಿ ೩,೬೮,೫೨೪ ನಮೂನೆ ಡಿಜಿಟಲೀಕರಣವಾಗಿದ್ದು, ಮತ್ತಷ್ಟು ಪ್ರಗತಿಗೆ ಸೂಚಿಸಿದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಮತಗಟ್ಟೆ ಅಧಿಕಾರಿಯು ಮನೆ ಮನೆಗೆ ಭೇಟಿ ನೀಡುವ ಕಾರ್ಯ ಆ.೮ ರವರೆಗೆ ನಡೆಯಲಿದೆ. ಮತಗಟ್ಟೆ ಪುನರ್ ವಿಂಗಡಣೆ ಕಾರ್ಯಕ್ರಮ ಆ.೮ ರಂದು ನಡೆಯಲಿದೆ. ಕರಡು ಮತದಾರರ ಪಟ್ಟಿಯು ಆ.೧೭ ರಂದು ಪ್ರಕಟವಾಗಲಿದೆ. ಮತದಾರರ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಆ.೧೭ ರಿಂದ ಸೆ.೧೬ ರವರೆಗೆ ಕಾಲಾವಕಾಶ ನೀಡಲಾಗಿದೆ. ಸೂಚನೆ ಹಂತ/ ಹಕ್ಕು ಮತ್ತು ಆಕ್ಷೇಪಣೆಗಳ ತೀರುವಳಿಯು ಆ.೧೭ ರಿಂದ ಅ.೧೫ ರವರೆಗೆ ನಡೆಯಲಿದೆ. ಅಂತಿಮ ಮತದಾರರ ಪಟ್ಟಿಯು ಅ.೧೯ ರಂದು ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಸಭೆಯಲ್ಲಿ ನೋಡಲ್ ಅಧಿಕಾರಿಗಳಾದ ಮಂಜುನಾಥ್, ಶೇಖರ್, ಭಾಸ್ಕರ್, ಎಚ್.ಆರ್.ರಮೇಶ್, ಮಿಲನ ಭರತ್, ಬಾಲಕೃಷ್ಣ ರೈ, ಆಶಾ, ಗೌರಿ, ಗಿರೀಶ, ಗೋಪಿ, ನಾಚಪ್ಪ, ವಿ.ಟಿ.ವಿಸ್ಮಯಿ, ಕೃಷ್ಣಪ್ರಸಾದ್, ಸಿದ್ದರಾಜು, ಚುನಾವಣಾ ಶಿರಸ್ತೆದಾರರಾದ ಮಹೇಶ್, ಅನಿಲ್ ಕುಮಾರ್ ಇತರರು ತಮ್ಮ ತಮ್ಮ ವ್ಯಾಪ್ತಿಯ ಡಿಜಿಟಲೀಕರಣ ಪ್ರಗತಿ ಸಂಬಂಧ ಮಾಹಿತಿ ನೀಡಿದರು.