ಕೊಡಗಿನಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹಾಗೂ ಅರಣ್ಯ ವಿಷಯಗಳ ಕುರಿತು ನಡೆದ ಸಮಾಲೋಚನಾ ಸಭೆಯಲ್ಲಿ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ತಮ್ಮ ಸಲಹೆಗಳನ್ನು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಹಸ್ತಾಂತರಿಸಿದರು. ಎ.ಎಸ್. ಪೊನ್ನನ್ಣ, ಅನಿತಾ ಪೂವಯ್ಯ, ಪಿ. ಕಲಾವತಿ, ಡಾ. ಮಂತರ್ ಗೌಡ ಇದ್ದರು. 
ಕೊಡಗು

ವನ್ಯಜೀವಿ-ಮಾನವ ಸಂಘರ್ಷ ತಡೆಗೆ ಕ್ರಮ

ಮಡಿಕೇರಿ:
ಕೊಡಗಿನಲ್ಲಿ ವನ್ಯಜೀವಿ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಸಂಬAಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸೋಮವಾರ (ಆ.31) ಉನ್ನತ ಮಟ್ಟದ ಸಭೆ ನಡೆಸಿ ರಚನಾತ್ಮಕ ತೀರ್ಮಾನಗಳನ್ನು ತೆಗೆದುಕೊಳ್ಳುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಕೊಡಗಿನಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹಾಗೂ ಅರಣ್ಯ ವಿಷಯಗಳ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಸಮಾಲೋಚನಾ ಸಭೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳ ಪ್ರಮುಖರ ಸಲಹೆಗಳನ್ನು ಸ್ವೀಕರಿಸಿದ ನಂತರ ಮಾತನಾಡಿದರು.
ಆನೆ ಸೇರಿದಂತೆ ವನ್ಯಜೀವಿಗಳು ನಾಗರಹೊಳೆ ಮತ್ತು ಕಾಡಂಚಿನ ಪ್ರದೇಶಗಳಿಂದ ನಾಡಿಗೆ ಬರದಂತೆ ತಡೆಯುವುದು ಅರಣ್ಯ ಇಲಾಖೆಯ ಪ್ರಾಥಮಿಕ ಜವಾಬ್ದಾರಿಯಾಗಿದೆ. ಆನೆ ಕಾರಿಡಾರ್ ಹಾಗೂ 3 ಲೈನ್ ಬ್ಯಾರಿಕೇಡ್ ನಿರ್ಮಾಣದ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲಾಗುವುದು. ಹಾರಂಗಿ ಸಂತ್ರಸ್ತರ ಭೂಮಿ ವಿಷಯವಾಗಿ ಶೀಘ್ರವೇ ಕಂದಾಯ ಸಚಿವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು. ಮರ ಕಡಿಯಲು ಅನಗತ್ಯವಾಗಿ ಪರವಾನಗಿ ತಡ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಈ ಎಲ್ಲಾ ವಿಷಯಗಳ ಕುರಿತು ಬೆಂಗಳೂರಿನಲ್ಲಿ ಮತ್ತೊಮ್ಮೆ ಉನ್ನತ ಮಟ್ಟದ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು. ಅಲ್ಲದೆ, ಕಸ್ತೂರಿ ರಂಗನ್ ವರದಿ ಜಾರಿ ಕುರಿತು ವಿಶೇಷ ಅಧಿವೇಶನ ಕರೆಯುವ ಬಗ್ಗೆ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದು, ಕೇಂದ್ರ ಸರ್ಕಾರದ ಹಂತದಲ್ಲೂ ಸೂಕ್ತ ಪ್ರಯತ್ನ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಭೆಯ ಮಧ್ಯೆ ಅಹವಾಲು ಸ್ವೀಕರಿಸುವ ವಿಚಾರವಾಗಿ ರಾಜಕೀಯ ಆರೋಪ-ಪ್ರತ್ಯಾರೋಪಗಳು ಕೇಳಿಬಂದಾಗ ಮಧ್ಯಪ್ರವೇಶಿಸಿದ ಸಚಿವರು, ನಾವು ಜನರ ಸಮಸ್ಯೆ ಆಲಿಸಲು ಬಂದಿದ್ದೇವೆ, ಸಭೆಯಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದರು.
ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾತನಾಡಿ, ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ, ಅದನ್ನು ಸಂಪೂರ್ಣವಾಗಿ ತಿರಸ್ಕಾರ ಮಾಡಬೇಕು. ಅರಣ್ಯವೂ ಉಳಿಬೇಕು, ಜನರ ಬದುಕೂ ಸಾಗಬೇಕು. ತಲಕಾವೇರಿ ಹಾಗೂ ಬ್ರಹ್ಮಗಿರಿ ಭಾಗದಲ್ಲಿ ಕೇರಳ ಗಡಿಯಲ್ಲಿ ಶೂನ್ಯ ವಲಯಕ್ಕೆ ಇಳಿಸಲಾಗಿದೆ. ಇಲ್ಲೂ ಅದೇ ಮಾದರಿ ಅನುಸರಿಸಬೇಕು. ಅಲ್ಲದೆ, ಮಡಿಕೇರಿ ನಗರದ ಕಸ ವಿಲೇವಾರಿಗೆ ನೀಡಿದ್ದ 10 ಎಕರೆ ಜಾಗಕ್ಕೆ ಈಗ ಅರಣ್ಯ ಇಲಾಖೆಯಿಂದ ಅಡಚಣೆ ಉಂಟಾಗುತ್ತಿರುವುದನ್ನು ಸಭೆಯ ಗಮನಕ್ಕೆ ತಂದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಕಸ್ತೂರಿ ರಂಗನ್ ಕರಡು ಅಧಿಸೂಚನೆಯನ್ನು ಈಗಿರುವ ರೀತಿಯಲ್ಲಿ ಒಪ್ಪಲು ಸಾಧ್ಯವೇ ಇಲ್ಲ ಎನ್ನುವುದು ಈ ಹಿಂದಿನ ಎಲ್ಲಾ ಸರ್ಕಾರಗಳ ಸ್ಪಷ್ಟ ತೀರ್ಮಾನವಾಗಿದೆ. ನಮ್ಮ ಸರ್ಕಾರದ ನಿರ್ಧಾರವೂ ಇದೇ ಆಗಿದೆ ಎಂದರಲ್ಲದೆ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆಡಿಪಿ ಸಭೆಗಳಿಗೆ ಬರುವುದಿಲ್ಲ, ಫೀಲ್ಡ್ಗೂ ಇಳಿಯುವುದಿಲ್ಲ, ಎಂದು ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಹಾರಂಗಿ ನೀರು ಕೆ.ಆರ್. ಪೇಟೆವರೆಗೂ ತಲುಪುತ್ತದೆ. ಹಾರಂಗಿ ಸಂತ್ರಸ್ತರಿಗೆ ನೀಡಿದ ಜಾಗಕ್ಕೆ ಬದಲಿ ಜಾಗ ಕೊಡಬೇಕಾದರೆ ಅಲ್ಲಿಯೂ ಅರಣ್ಯ ಇಲಾಖೆಗೆ ಕೊಡಬಹುದು. ಹಾರಂಗಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ತೊಂದರೆ ಕೊಡುವುದು ಸರಿಯಲ್ಲ. ಆನೆ ದಾಳಿಯಿಂದ ಮೃತಪಟ್ಟವರಿಗೆ ನೀಡುತ್ತಿರುವ 20 ಲಕ್ಷ ರೂ. ಪರಿಹಾರ ಧನ ಸಾಕಾಗುವುದಿಲ್ಲ. ಆನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಅರಣ್ಯ ಇಲಾಖೆಯ ವಲಯಗಳ ನಡುವೆ ಸಮನ್ವಯತೆಯೇ ಇಲ್ಲ. ದುಬಾರೆ ಘಟನೆಯ ನಂತರ ಪ್ರವಾಸೋದ್ಯಮ ಸಂಪೂರ್ಣ ಸ್ಥಗಿತಗೊಂಡಿದ್ದು, ಸೂಕ್ತ ಎಸ್‌ಒಪಿ ರಚನೆಯಾಗದ ಕಾರಣ ಪ್ರವಾಸಿಗರಿಗೆ ತೊಂದರೆಯಾಗಿದೆ ಎಂದು ಸಭೆಯ ಗಮನಕ್ಕೆ ತಂದರು.
ಇದೇ ವೇಳೆ ಅರಣ್ಯ ಇಲಾಖೆಯ ದಿನಗೂಲಿ ನೌಕರರು ಏಜೆನ್ಸಿ ಪದ್ಧತಿ ಕೈಬಿಟ್ಟು ನೇರವಾಗಿ ವೇತನ ನೀಡುವಂತೆ ಮನವಿ ಮಾಡಿದರು. ರೈತರು ಇಂತಹ ಜನಸಂಪರ್ಕ ಸಭೆಗಳು ನಿಯಮಿತವಾಗಿ ನಡೆಯಬೇಕು ಹಾಗೂ ಕಾಡುಕೋಣಗಳ ಹಾವಳಿಗೂ ತಕ್ಷಣ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಹಾರಂಗಿ ಯೋಜನೆಯ ಮುಳುಗಡೆ ಸಂತ್ರಸ್ತರಿಗೆ ಬದಲಿ ಜಾಗ ನೀಡಲು ಅರಣ್ಯ ಭೂಮಿ ಬಳಸಲಾಗಿತ್ತು. ಆದರೆ, ಈಗ ಮತ್ತೆ ಅರಣ್ಯ ಇಲಾಖೆ ನೊಟೀಫಿಕೇಶನ್ ಮಾಡಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದರು. ಇದೇ ವಿಷಯಕ್ಕೆ ಪ್ರತಿಕ್ರಿಯಿಸಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ ಈಗಿರುವ ಭೂಮಿಯನ್ನು ಡಿನೊಟೀಫಿಕೇಶನ್ ಮಾಡಲು ನ್ಯಾಯಾಲಯದ ಅನುಮತಿ ಅಗತ್ಯವಿದೆ. ಪ್ರಸ್ತುತ ಆನೆ ಹಾವಳಿ ಹೆಚ್ಚಿರುವ ಕಡೆ 28 ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆಗೆ ಇಳಿಸಲಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ತು ಸದಸ್ಯ ಸುಜಾ ಕುಶಾಲಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್, ಕೊಡಗು ವೃತ್ತದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಟಿ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.