ಮೂರ್ನಾಡು ಗೌಡ ಮಹಿಳಾ ಒಕ್ಕೂಟ ವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಾಹಿತಿ ಪೂಜಾರಿರ ಕೃಪಾ ದೇವರಾಜ್, ತೆಕ್ಕಡೆ ಕುಮಾರಸ್ವಾಮಿ ಇತರರು ಇದ್ದರು. 
ಕೊಡಗು

ನಾರಿಯ ಒಗ್ಗಟ್ಟಿಗೆ ಮಹಿಳಾ ಒಕ್ಕೂಟ ಶಕ್ತಿ ತುಂಬಲಿ

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಪೂಜಾರಿರ ಕೃಪಾ ದೇವರಾಜ್ ಹೇಳಿಕೆ
  • ವಿಶ್ವ ಮಹಿಳಾ ದಿನಾಚರಣೆ
ನಾಪೋಕ್ಲು: ಮಹಿಳೆಯರ ನಡುವೆ ಒಗ್ಗಟ್ಟು, ಆತ್ಮವಿಶ್ವಾಸ ಮತ್ತು ನಾಯಕತ್ವ ಬೆಳೆಯಲು ಮಹಿಳಾ ಒಕ್ಕೂಟ ಶಕ್ತಿಯುತ ವೇದಿಕೆ ಆಗಬೇಕು ಎಂದು ಸಾಹಿತಿ ಪೂಜಾರಿರ ಕೃಪಾ ದೇವರಾಜ್ ಹೇಳಿದರು.
ಮೂರ್ನಾಡು ಪ್ರಕೃತಿ ಕಾಂಪ್ಲೆಕ್ಸ್‌ನಲ್ಲಿ ಮೂರ್ನಾಡು ಗೌಡ ಮಹಿಳಾ ಒಕ್ಕೂಟ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಮತ್ತು ಗೌಡ ಮಹಿಳಾ ಒಕ್ಕೂಟ ಮೂರ್ನಾಡು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತಿಹಾಸ ನೋಡಿದರೆ ಮಹಿಳೆಯರು ಯಾವಾಗಲೂ ಸಮಾಜ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಆದರೆ ಹಲವು ಸಂದರ್ಭಗಳಲ್ಲಿ ಅವರ ಪ್ರತಿಭೆ ಹಾಗೂ ಸಾಮರ್ಥ್ಯಕ್ಕೆ ಸರಿಯಾದ ವೇದಿಕೆ ದೊರೆತ್ತಿಲ್ಲ. ಅಂತಹ ಸಮಯದಲ್ಲಿ ಮಹಿಳಾ ಒಕ್ಕೂಟ ಒಂದು ಹೊಸ ದಾರಿ ತೋರಿಸುವ ವೇದಿಕೆಯಾಗಲಿದೆ. ಈ ಒಕ್ಕೂಟದ ಮೂಲಕ ಮಹಿಳೆಯರು ಶಿಕ್ಷಣ, ಸಮಾಜ ಸೇವೆ, ಕ್ರೀಡೆ, ಸಂಸ್ಕೃತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಹೊರಹಾಕಲು ವೇದಿಕೆಯಾಗಲಿದೆ ಎಂದರು.
ಹಾಕತ್ತೂರ್ ಮುಖ್ಯ ಶಿಕ್ಷಕ ತೆಕ್ಕಡೆ ಕುಮಾರಸ್ವಾಮಿ ಮಾತನಾಡಿ, ಮಹಿಳೆಯರು ಪ್ರತಿನಿತ್ಯ ಮನೆಯ ಕೆಲಸ, ಕುಟುಂಬದ ಜವಾಬ್ದಾರಿ ಮತ್ತು ಸಮಾಜದ ಕರ್ತವ್ಯಗಳಲ್ಲಿ ತುಂಬ ಬ್ಯುಸಿಯಾಗಿರುತ್ತಾರೆ. ಆದರೆ ಜೀವನದಲ್ಲಿ ಸಂತೋಷ ಮತ್ತು ಆರೋಗ್ಯವೂ ಅಷ್ಟೇ ಮುಖ್ಯ. ಅದಕ್ಕಾಗಿ ಇಂತಹ ಮನರಂಜನಾ ಕ್ರೀಡೆಗಳು ನಮ್ಮ ಜೀವನಕ್ಕೆ ಹೊಸ ಉತ್ಸಾಹ ನೀಡುತ್ತವೆ. ಕ್ರೀಡೆಗಳು ಕೇವಲ ಗೆಲುವಿಗಾಗಿ ಅಲ್ಲ, ಒಗ್ಗಟ್ಟು, ಸ್ನೇಹ ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ಸಹಾಯ ಮಾಡುತ್ತವೆ ಎಂದರು.
ರಾಜ್ಯ ಕೃಷಿ ಪ್ರಶಸ್ತಿ ಪುರಸ್ಕೃತ ಕಟ್ಟೆಮನೆ ಪ್ರೇಮಾ ಗಣೇಶ್ ಮಾತನಾಡಿ, ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ನಾರಿಯರು ಒಗ್ಗಟ್ಟಾಗಿ ಸೇರಿರುವುದು ನೋಡಿದಾಗ ಹೆಮ್ಮೆ ಆಗುತ್ತದೆ. ನಾವು ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಬಹಳ ಮಹತ್ವದ್ದಾಗಿದೆ. ಹೊಲದಲ್ಲಿ ಕೆಲಸ ಮಾಡುವುದು, ಮನೆ ನೋಡಿಕೊಳ್ಳುವುದು, ಮಕ್ಕಳನ್ನು ಬೆಳೆಸುವುದು ಎಲ್ಲದರಲ್ಲೂ ಮಹಿಳೆಯರು ಶ್ರಮಿಸುತ್ತಿದ್ದಾರೆ. ಆದರೆ ಹಲವು ಬಾರಿ ಅವರ ಶ್ರಮಕ್ಕೆ ಸಿಗಬೇಕಾದ ಗೌರವ ಸಿಗುವುದಿಲ್ಲ. ಆದ್ದರಿಂದ ಇಂತಹ ಮಹಿಳಾ ಒಕ್ಕೂಟಗಳು ಮಹಿಳೆಯರಿಗೆ ಒಂದು ಶಕ್ತಿಯುತ ವೇದಿಕೆಯಾಗಿವೆ. ಇಲ್ಲಿ ಮಹಿಳೆಯರು ತಮ್ಮ ಸುಖ ದುಃಖಗಳನ್ನು ಹಂಚಿಕೊಳ್ಳಬಹುದು. ಹೊಸ ಆಲೋಚನೆಗಳನ್ನು ಕಲಿಯಬಹುದು ಮತ್ತು ತಮ್ಮ ಪ್ರತಿಭೆಯನ್ನು ತೋರಿಸಬಹುದು ಎಂದರು.
ಕೃಷಿ ಕ್ಷೇತ್ರದಲ್ಲೂ ಮಹಿಳೆಯರು ಹೊಸ ಹೊಸ ಸಾಧನೆಗಳನ್ನು ಮಾಡುತ್ತಿದ್ದಾರೆ. ತೋಟಗಾರಿಕೆ, ಹೈನುಗಾರಿಕೆ, ಸಣ್ಣ ಉದ್ಯಮಗಳು, ಸ್ವಯಂ ಉದ್ಯೋಗ ಇವುಗಳ ಮೂಲಕ ಮಹಿಳೆಯರು ಕುಟುಂಬದ ಆರ್ಥಿಕ ಶಕ್ತಿಯಾಗುತ್ತಿದ್ದಾರೆ ಎಂದು ಹೇಳಿದರು.
ಸಂಘದ ಅಭಿವೃದ್ಧಿಗೆ ಕಾರಣಕರ್ತರಾದ ಮೆರ್ಕಜ್ಜೆ ಲೋಹಿತ್ ಸೋಮಯ್ಯ ಹಾಗೂ ಮೆರ್ಕಜ್ಜೆ ಕೃತಿಕಾ ಪ್ರಮೋದ್ ಅವರನ್ನು ಸನ್ಮಾನಿಸಲಾಯಿತು.
ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷ ಕಲ್ಲುಮುಟ್ಲು ಜಶ್ಮಿ ಚಿಂತು ಮಾತನಾಡಿ, ಸಮಾಜದಲ್ಲಿ ಮಹಿಳೆಯರ ಪಾತ್ರ ತುಂಬ ಮುಖ್ಯ. ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂದರು.
ತೆಕ್ಕಡೆ ಭವ್ಯಾ, ಮೂರ್ನಾಡ್ ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಹರೀಶ್, ಕಾರ್ಯದರ್ಶಿ ಮೆರ್ಕಜ್ಜೆ ಲೋಹಿತ್ ಸೋಮಯ್ಯ, ತೆಕ್ಕಡೆ ಆಶಾ, ಕಲ್ಲುಮುಟ್ಲು ಲತಾ, ಜಯಮಾಲಾ, ಮುಕ್ಕಾಟಿ ಚುಷ್ಮಾ, ಅಂಚೆ ಮನೆ ದಮಯಂತಿ, ಮೇನಕಾ ಇತರರು ಇದ್ದರು.