ವಿರಾಜಪೇಟೆಯಲ್ಲಿ ಸದ್ಭಾವನಾ ಮಂಚ್ ಏರ್ಪಡಿಸಿದ್ದ ಇಫ್ತಾರ್ ಸೌಹಾರ್ದ ಕೂಟದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರಲಿ ಉಡುಪಿ ಮಾತನಾಡಿದರು. ಅಮ್ಮುಣಿಚಂಡ ರವಿ ಉತ್ತಪ್ಪ, ಕಾಣತಂಡ ಜಗದೀಶ್,ಕೆ.ಪಿ.ರಷೀದ್, ಎ.ಸಿ.ಚೋಪಿ ಜೋಸೆಫ್, ಪಿ.ಕೆ. ಮುಹಮ್ಮದ್ ಇದ್ದರು.
- ಜಮಾ ಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರಲಿ ಉಡುಪಿ ಸಲಹೆ
- ಇಫ್ತಾರ್ ಸೌಹಾರ್ದ ಕೂಟ
ವಿರಾಜಪೇಟೆ : ಧರ್ಮಗಳು ಕಲಿಸುವ ಪ್ರಾಮಾಣಿಕತೆ, ಕಾರುಣ್ಯ, ಸಹಾನುಭೂತಿ, ದಯೆ, ಪ್ರೀತಿ ಮುಂತಾದ ಒಳಿತುಗಳು ಸಾರ್ವತ್ರಿಕವಾಗಬೇಕು ಎಂದು ಜಮಾ ಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರಲಿ ಉಡುಪಿ ಹೇಳಿದರು.
ವಿರಾಜಪೇಟೆಯ ನಿಸರ್ಗ ಬಡಾವಣೆಯ ದೈವಜ್ಞ ಸಮಾಜ ಸಭಾಂಗಣದಲ್ಲಿ ಸದ್ಭಾವನಾ ಮಂಚ್ ವತಿಯಿಂದ ಭಾನುವಾರ ಆಯೋಜಿಸಿದ್ದ ಇಫ್ತಾರ್ ಸೌಹಾರ್ದ ಕೂಟದಲ್ಲಿ ಅವರು ಮಾತನಾಡಿದರು.
ಇಸ್ಲಾಮಿನ ಉಪವಾಸ ವ್ರತವು ಮನುಷ್ಯನನ್ನು ಕೆಡುಕಿನಿಂದ ತಡೆಯುತ್ತದೆ. ಆಹಾರ ಸೇವನೆಯೂ ಸೇರಿದಂತೆ ಮನುಷ್ಯನ ಮೂಲಭೂತ ಅಗತ್ಯಗಳನ್ನು ನಿಯಂತ್ರಣದಲ್ಲಿಡಲು ಅದು ಕಲಿಸುತ್ತದೆ. ಪವಿತ್ರ ಕುರ್‌ಆನ್ ಅವತರಿಸಿದ ತಿಂಗಳು ಎಂಬ ನೆಲೆಯಲ್ಲಿ ರಂಜಾನ್‌ಗೆ ಮಹತ್ವವಿದೆ. ಪವಿತ್ರ ಕುರ್‌ಆನ್ ಸಕಲ ಮಾನವರ ಮಾರ್ಗದರ್ಶನಕ್ಕಾಗಿ ಸೃಷ್ಟಿಕರ್ತನಾದ ದೇವನಿಂದ ಅವತೀರ್ಣಗೊಂಡ ಅಂತಿಮ ಧರ್ಮಗ್ರಂಥವಾಗಿದೆ ಎಂದು ಹೇಳಿದರು.
ವಿರಾಜಪೇಟೆ ಸೇಂಟ್ ಆನ್ಸ್ ಚರ್ಚ್ ಪ್ರಧಾನ ಧರ್ಮಗುರುಗಳಾದ ರೆ.ಫಾ.ಜೇಮ್ಸ್ ಡೊಮಿನಿಕ್ ಮಾತನಾಡಿ, ಜಗತ್ತಿನ ಎಲ್ಲ ಧರ್ಮಗಳಲ್ಲೂ ಉಪವಾಸ ವ್ರತವು ವಿವಿಧ ರೀತಿಗಳಲ್ಲಿ ಆಚರಣೆಯಲ್ಲಿದೆ. ಮನುಷ್ಯ ದೇವ ನಿಷ್ಠೆಯನ್ನು ಹೊಂದಬೇಕು ಎಂಬುದು ಉಪವಾಸದ ಉದ್ದೇಶವಾಗಿದೆ. ದೇವನ ಮಾರ್ಗದರ್ಶನದ ಮೇಲೆ ಯಾರಿಗೂ ಏಕಸ್ವಾಮ್ಯವಿಲ್ಲ. ಅದು ಯಾರದೇ ಖಾಸಗಿ ಸೊತ್ತು ಅಲ್ಲ ಎಂದು ಹೇಳಿದರು.
ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಅಮ್ಮುಣಿಚಂಡ ರವಿ ಉತ್ತಪ್ಪ, ಉಪಾಧ್ಯಕ್ಷ ಕಾಣತಂಡ ಜಗದೀಶ್, ಸದ್ಭಾವನಾ ಮಂಚ್ ಹಿರಿಯ ಸದಸ್ಯರಾದ ಕೆ.ಪಿ.ರಷೀದ್, ಎ.ಸಿ.ಚೋಪಿ ಜೋಸೆಫ್, ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಅಧ್ಯಕ್ಷ ಕೆ.ಪಿ.ಕೆ.ಮಹಮ್ಮದ್ ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಔತಣಕೂಟದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.