ಮಾಂದಲಪಟ್ಟಿ ಪ್ರವಾಸಿತಾಣಕ್ಕೆ ಪ್ರವಾಸಿಗರನ್ನು ಕರೆದೊಯ್ಯಲು ನಿಗದಿಗಿಂತ ಹೆಚ್ಚಿನ ಹಣ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶವಿನ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 
ಕೊಡಗು

ಪ್ರವಾಸಿಗರಿಂದ ಹೆಚ್ಚಿನ ಹಣ ವಸೂಲಿ ಮಾಡಿದ್ದವನ ಬಂಧನ

ಕೆಂಡಗಣ್ಣ ಎನ್

ಪ್ರಮುಖ ಮುಖ್ಯಾಂಶಗಳು

  • money from tourists
ಮಡಿಕೇರಿ; ಪ್ರಸಿದ್ಧ ಪ್ರವಾಸಿ ತಾಣ ಮಾಂದಲಪಟ್ಟಿಗೆ ತೆರಳಲು ಪ್ರವಾಸಿಗರಿಂದ ನಿಗದಿಗಿಂತ ಹೆಚ್ಚು ಹಣ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ ಎಂದು ಎಸ್‌ಪಿ ಆರ್.ಎನ್. ಬಿಂದುಮಣಿ ತಿಳಿಸಿದ್ದಾರೆ.
ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ಕುಟುಂಬವೊಂದನ್ನು ಮಾಂದಲಪಟ್ಟಿಗೆ ಕರೆದುಕೊಂಡು ಹೋಗಲು ನಿಗದಿತ ಬಾಡಿಗೆ ದರ 2500 ರೂ. ಬದಲು 4 ಸಾವಿರ ರೂ. ತೆಗೆದುಕೊಂಡಿದ್ದಲ್ಲದೆ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ಗೆ 500 ರೂ. ನೀಡಬೇಕೆಂದು ಹಣ ಪಡೆದು 50ರೂ. ಮಾತ್ರ ಅಲ್ಲಿ ನೀಡಿರುತ್ತಾನೆ. ನಂತರ ಮಾಂದಲಪಟ್ಟಿಯಲ್ಲಿ ಪ್ರವಾಸ ಮುಗಿಸಿ ಬಂದಾಗ ಹೆಚ್ಚುವರಿಯಾಗಿ 500 ರೂ. ನೀಡಬೇಕು ಎಂದು ಜೋರು ಮಾಡಿ ಗದರಿಸಿ ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿರುವ ಬಗ್ಗೆ ಪ್ರವಾಸಿ ಕುಟುಂಬ ಸಾಮಾಜಿಕ ಜಾಲತಾಣದಲ್ಲಿ ಸೋಮವಾರ (ಜ.26) ವಿಡಿಯೋ ಹಂಚಿಕೊಂಡಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಕೂಡಲೇ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಚಂದ್ರಶೇಖರ್ ಮತ್ತು ಮಡಿಕೇರಿ ಸಂಚಾರಿ ಠಾಣಾ ಪೊಲೀಸ್ ಉಪ ನಿರೀಕ್ಷಕ ಶ್ರೀಧರ್ ಮತ್ತು ತಂಡ ಮಡಿಕೇರಿ ನಗರ, ನಂದಿಮೊಟ್ಟೆ, ಮಾಂದಲಪಟ್ಟಿಯಲ್ಲಿ ಜೀಪಿನ ಬಗ್ಗೆ ವಿಚಾರಣೆ ಮಾಡಿ ಜೀಪು ಚಾಲಕ ಶವಿನ್ ಕುಮಾರ್‌ನನ್ನು ಬಂಧಿಸಿದ್ದಾರೆ.
ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ವಾಹನ ವೈಟ್ ಬೋರ್ಡ್ ವಾಹನವಾಗಿದ್ದು, ನಂಬರ್ ಪ್ಲೇಟ್ ಮೇಲೆ ಹಳದಿ ಬಣ್ಣದ ಬೋರ್ಡ್ ಹಾಕಿ ಬಾಡಿಗೆ ಮಾಡುತ್ತಿರುವುದು ಕೂಡ ಕಂಡು ಬಂದಿದೆ. ವಾಹನ ವಶಪಡಿಸಿಕೊಳ್ಳಲಾಗಿದೆ.