ಬೇತು ಗ್ರಾಮದ ಮಕ್ಕಿ ಶ್ರೀ ಶಾಸ್ತಾವು ದೇವರ ವಾರ್ಷಿಕ ಎಡಮ್ಯಾರು ವಾರ್ಷಿಕ ಉತ್ಸವದಲ್ಲಿ ಎತ್ತೇರಾಟ.
ನಾಪೋಕ್ಲು: ಸಮೀಪದ ಬೇತು ಗ್ರಾಮದ ಮಕ್ಕಿ ಶ್ರೀ ಶಾಸ್ತಾವು ದೇವರ ವಾರ್ಷಿಕ ಎಡಮ್ಯಾರು ವಾರ್ಷಿಕ ಉತ್ಸವ ಎರಡು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಸೋಮವಾರ ದೇವಾಲಯದ ಆವರಣದಲ್ಲಿ ನಡೆದ ಎರಡು ಪ್ರಮುಖ ಕೋಲಗಳೊಂದಿಗೆ ಉತ್ಸವ ಸಂಪನ್ನಗೊಂಡಿತು. ಮಕ್ಕಿ ಶಾಸ್ತಾವು ಸನ್ನಿಧಿಯಲ್ಲಿ ಸೋಮವಾರ ಬೆಳಗ್ಗಿನಿಂದ ವಿವಿಧ ಕೋಲಗಳು ದೇವರಿಗೆ ಸೇವೆ ಸಲ್ಲಿಸಿದವು. ಬೆಳಗ್ಗೆ ಅಜ್ಜಪ್ಪ ಕೋಲ ಹಾಗೂ ಮಧ್ಯಾಹ್ನ ವಿಷ್ಣುಮೂರ್ತಿ ಕೋಲ ಮೇಲೇರಿ (ಕೆಂಡಸೇವೆ) ಗಳು ತಮ್ಮ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಗಮನ ಸೆಳೆದವು.
ಈ ಸಂದರ್ಭ ದೇವರನ್ನು ವಿವಿಧ ಹೂಗಳಿಂದ ಶೃಂಗರಿಸಿ ಅಲಂಕೃತಗೊಳಿಸಲಾಗಿತ್ತು. ಭಗವತ್ ಭಕ್ತರು ಅಧಿಕ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ವೀಕ್ಷಿಸಿದ ಭಕ್ತರಿಂದ ದೇವರಿಗೆ ವಿವಿಧ ರೀತಿಯ ಹರಕೆ, ಕಾಣಿಕೆ ಸಮರ್ಪಿಸಿ ಪ್ರಸಾದ ಸ್ವೀಕರಿಸುವುದರೊಂದಿಗೆ ಕೃತಾರ್ಥ ಭಾವ ಹೊಂದಿದರು.
ಉತ್ಸವಕ್ಕೆ ಆಗಮಿಸಿದ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಮಧ್ಯಾಹ್ನ ವಿಷ್ಣುಮೂರ್ತಿ ಕೋಲವನ್ನು ಭಕ್ತರು ಭಯಭಕ್ತಿಯಿಂದ ವೀಕ್ಷಿಸಿ ತನ್ಮಯರಾದರು. ಉತ್ಸವದ ಅಂಗವಾಗಿ ಭಾನುವಾರ ಮಧ್ಯಾಹ್ನ ಎತ್ತೇರಾಟ ಹಾಗೂ ತಡರಾತ್ರಿಯವರೆಗೆ ದೇವಾಲಯದಲ್ಲಿ ಕೇರಳದ ಚಂಡೆವಾದ್ಯದೊಂದಿಗೆ ದೀಪಾರಾಧನೆ ನಡೆಯಿತು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು, ತಕ್ಕ ಮುಖ್ಯಸ್ಥರು ಹಾಗೂ ಊರ ಪರ ಊರಿನ ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದ್ದರು.