ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಕರವೇ ಸ್ವಾಭಿಮಾನಿ ಬಳಗದ ವತಿಯಿಂದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅಬ್ದುಲ್ ನಬಿ ಅವರಿಗೆ ಮನವಿ ಸಲ್ಲಿಸಲಾಯಿತು. ಬಿ.ಎ. ಫ್ರಾನ್ಸಿಸ್ ಡಿಸೋಜ, ರಾಜಶೇಖರ್ ಗೌಡ, ಜಯಶ್ರೀ ಮುರುಗೇಶ್, ಶಿವು, ನಾಸಿರ್ ಮತ್ತಿತರರು ಇದ್ದರು. 
ಕೊಡಗು

ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಮಾಡಿ

ಮಡಿಕೇರಿ:
ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಣಿಜ್ಯ ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು, ಪ್ರವಾಸಿ ಉದ್ಯಮಗಳು, ರೆಸಾರ್ಟ್ಗಳು, ಹೋಂ ಸ್ಟೇಗಳು ಹಾಗೂ ರಸ್ತೆ ಬದಿಯ ಸಾರ್ವಜನಿಕ ನಾಮಫಲಕಗಳ ಮೇಲ್ಭಾಗದಲ್ಲಿ ಶೇ. 60 ರಷ್ಟು ಕನ್ನಡ ಭಾಷೆ ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರವೇ ಸ್ವಾಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬಿ.ಎ. ಫ್ರಾನ್ಸಿಸ್ ಡಿಸೋಜ ನೇತೃತ್ವದಲ್ಲಿ
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅಬ್ದುಲ್ ನಬಿ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು. ನಂತರ ಮಾತನಾಡಿದ ಬಿ.ಎ. ಫ್ರಾನ್ಸಿಸ್ ಡಿಸೋಜ ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ ಪ್ರತಿಯೊಂದು ಉದ್ಯಮದ ನಾಮಫಲಕದ ಮೇಲ್ಭಾಗದಲ್ಲಿ ಶೇ. 60 ರಷ್ಟು ಕನ್ನಡ ಬಳಸಬೇಕು. ಆದರೆ ಕೊಡಗಿನಲ್ಲಿ ಹೊರರಾಜ್ಯದ ಪ್ರವಾಸಿಗರನ್ನು ಆಕರ್ಷಿಸಲು ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಆದುದರಿಂದ ಸರ್ಕಾರದ ನಿಯಮವನ್ನು ಉಲ್ಲಂಘಿಸಿ, ಶೇ. 60 ರಷ್ಟು ಕನ್ನಡವಿರದ ನಾಮಫಲಕವನ್ನು ಅಳವಡಿಸದ ಎಲ್ಲಾ ಅಂಗಡಿ ಮುಂಗಟ್ಟುಗಳು ಹಾಗೂ ಜಿಲ್ಲಾದ್ಯಂತ ಇರುವ ಎಲ್ಲಾ ಹೋಂ ಸ್ಟೇಗಳ ವ್ಯಾಪಾರ ಪರವಾನಗಿಯನ್ನು ಯಾವುದೇ ಮುನ್ಸೂಚನೆ ನೀಡದೆ ತಕ್ಷಣವೇ ರದ್ದುಗೊಳಿಸಬೇಕು. ಹೊಸದಾಗಿ ಪರವಾನಗಿ ನೀಡುವಾಗ ಮತ್ತು ಹಳೆಯ ಪರವಾನಗಿಯನ್ನು ನವೀಕರಿಸುವ ಸಂದರ್ಭದಲ್ಲಿ ಪಂಚಾಯಿತಿ ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ಕನ್ನಡ ನಾಮಫಲಕ ಇರುವುದನ್ನು ನೋಡಿ ಅನುಮೋದನೆ ನೀಡಬೇಕು. ಕನ್ನಡ ನಾಮಫಲಕ ಇಲ್ಲದ ಸಂಸ್ಥೆಗಳಿಗೆ ಯಾವುದೇ ಕಾರಣಕ್ಕೂ ಲೈಸೆನ್ಸ್ ನೀಡಬಾರದು ಎಂದರು.
ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಗೌಡ ಮಾತನಾಡಿ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯ ನಿಯಮಗಳಿಗೆ ಕೆಲವು ವ್ಯಾಪಾರಸ್ಥರು ಗೌರವ ನೀಡುತ್ತಿಲ್ಲ.
ಜಿಲ್ಲಾ ಪಂಚಾಯಿತಿ ತಕ್ಷಣವೇ ಎಲ್ಲಾ ಪಂಚಾಯ್ತಿಗಳಿಗೂ ಕನ್ನಡ ಶೇ. 60 ಇರಬೇಕೆಂದು ಆದೇಶ ನೀಡಬೇಕು ಎಂದರು.
ಮನವಿ ಸ್ವೀಕರಿಸಿದ ನಂತರ ಮಾತನಾಡಿದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅಬ್ದುಲ್ ನಬಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಶೀಘ್ರದಲ್ಲೇ ಶೇ.60 ಕನ್ನಡ ಕಡ್ಡಾಯಗೊಳಿಸುವ ಬಗ್ಗೆ ಅಧಿಕೃತ ಸುತ್ತೋಲೆ ಕಳಿಸಿಕೊಡಲಾಗುವುದು. ಆದೇಶದ ಪ್ರತಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಾಧಿಕಾರಿಗಳಿಗೂ ತಲುಪಿಸಲಾಗುವುದು ಎಂದರು.
ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಜಯಶ್ರೀ ಮುರುಗೇಶ್, ಕುಶಾಲನಗರ ತಾಲೂಕು ಅಧ್ಯಕ್ಷ ಶಿವು, ತಾಲೂಕು ಉಪಾಧ್ಯಕ್ಷ ನಾಸಿರ್, ತಾಲೂಕು ಪ್ರಧಾನ ಕಾರ್ಯದರ್ಶಿ ರವಿಕಿರಣ್, ತಾಲೂಕು ಕಾರ್ಮಿಕ ಘಟಕದ ಉಪಾಧ್ಯಕ್ಷ ಮಣಿಕಂಠ, ಮಡಿಕೇರಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ, ಸುಂಟಿಕೊಪ್ಪ ಹೋಬಳಿ ಮಹಿಳಾ ಘಟಕದ ಅಧ್ಯಕ್ಷೆ ಭವ್ಯ, ಪದಾಧಿಕಾರಿಗಳಾದ ರವೀಂದ್ರ, ವಿಲ್ಸನ್, ನಂಜಪ್ಪ, ರಮೇಶ್, ಬಾಲಕೃಷ್ಣ ,ಕಾರ್ತಿಕ್ ಈ ಸಂದರ್ಭ ಇದ್ದರು.