ವಿರಾಜಪೇಟೆಯ ಹೆಗ್ಗಳ ಗ್ರಾಮದ ಬೂದಿಮಾಳದ ಶ್ರೀ ಕಿರಾತೇಶ್ವರ ದೇವರ ಮಹಾಪೂಜೆ ನಡೆಯಿತು.  
ಕೊಡಗು

ಶ್ರೀ ಕಿರಾತೇಶ್ವರ ದೇವರ ಮಹಾಪೂಜೆ ವಿಜೃಂಭಣೆ

ವಿರಾಜಪೇಟೆ: ಸಮೀಪದ ಹೆಗ್ಗಳ ಗ್ರಾಮದ ಬೂದಿಮಾಳ ಶ್ರೀ ಕಿರಾತೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ಹಾಗೂ ಮಹಾಪೂಜೆಯು ಶ್ರದ್ಧಾ ಭಕ್ತಿಯಿಂದ ಇತ್ತೀಚೆಗೆ ನಡೆಯಿತು.
ಹಬ್ಬದ ಪ್ರಯುಕ್ತ ಬೆಳಗ್ಗಿನಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು. ಅರ್ಚಕರು ಮೊದಲಿಗೆ ಕ್ಷೇತ್ರದ ಶ್ರೀ ಮಹಾಗಣಪತಿಗೆ ಹಾಗೂ ವನದುರ್ಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಶ್ರೀ ಕಿರಾತೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಅರ್ಚಕರು ಸಂಕಲ್ಪ ಪೂಜೆ, ಪ್ರಾರ್ಥನೆ ಹಾಗೂ ಪಂಚಾಮೃತ ಅಭಿಷೇಕ ನೆರವೇರಿಸಿದರು.
ಎಳನೀರು ಅಭಿಷೇಕ, ಅಲಂಕಾರ ಪೂಜೆಯನ್ನು ಮಾಡಿದರು. ತದನಂತರ ವಿಶೇಷ ಅರ್ಚನೆಯನ್ನು ಮಾಡಿ ವಿವಿಧ ಸೇವೆಗಳನ್ನು ನೆರವೇರಿಸಲಾಯಿತು. ಬಳಿಕ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಜರುಗಿತು. ಕೇರಳದ ಚಂಡೆ ಬಳಗದವರಿಂದ ಚಂಡೆ ಸೇವೆ ನಡೆಯಿತು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯು ಜರುಗಿತು. ಧಾರ್ಮಿಕ ಕಾರ್ಯಕ್ರಮಗಳು ಅರ್ಚಕರಾದ ವಿಶ್ವನಾಥ್ ಭಟ್ ಹಾಗೂ ವಾಮನಮೂರ್ತಿ ಭಟ್ ಅವರ ನೇತೃತ್ವದಲ್ಲಿ ನಡೆಯಿತು.