ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಪಿ. ಕಲಾವತಿ ಸಭೆಯ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್‌ನ ರಾಜೇಶ್ ಯಲ್ಲಪ್ಪ ಪಟ್ಟು ಹಿಡಿದರು. ಎಸ್‌ಡಿಪಿಐನ ಅಮೀನ್ ಮೊಹ್ಸಿನ್ ಇದಕ್ಕೆ ಬೆಂಬಲಿ ಮಾತನಾಡಿದರು.
ನನ್ನ ಅನುಮತಿ ಇಲ್ಲದೆ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ ಎಂದು ನಗರಸಭಾಧ್ಯಕ್ಷೆ ನಗರಸಭೆ ಪೌರಾಯುಕ್ತರಿಗೆ ಬರೆದಿದ್ದಾರೆ ಎನ್ನಲಾದ ಪತ್ರ ಶುಕ್ರವಾರ ನಡೆದ ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಭಾರಿ ಸದ್ದು ಮಾಡಿತು. ಇದರಿಂದ ನಗರಸಭೆ ಸದಸ್ಯರಿಗೆ ಅವಮಾನವಾಗಿದ್ದು ಅಧ್ಯಕ್ಷರು ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್‌ನ ರಾಜೇಶ್ ಯಲ್ಲಪ್ಪ ಪಟ್ಟು ಹಿಡಿದರು.
ಕೆಎಸ್‌ಆರ್‌ಟಿಸಿ ಬಸ್ ಡಿಪೋ ಬಳಿಯ ಅನಧಿಕೃತ ಕಟ್ಟಡವೊಂದಕ್ಕೆ ಸಂಬAಧಿಸಿದAತೆ ಈ ಹಿಂದಿನ ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯವೊಂದನ್ನು ತೆಗೆದುಕೊಳ್ಳಲಾಗಿತ್ತು. ಈ ಸಂಬAಧ ನಗರಸಭೆ ಪೌರಾಯುಕ್ತರು ಕಾರ್ಯೋನ್ಮುಖರಾಗುತ್ತಿದ್ದಂತೆಯೇ ನಿರ್ಣಯಕ್ಕೆ ವ್ಯತರ‍್ಯಿಕ್ತವಾಗಿ ನಗರಸಭಾ ಅಧ್ಯಕ್ಷೆ ಪಿ. ಕಲಾವತಿ, ನನ್ನ ಅನುಮತಿ ಇಲ್ಲದೆ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ ಎಂದು ಪೌರಾಯುಕ್ತ ರಮೇಶ್ ಅವರಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ನಗರಸಭೆಯ ಎಲ್ಲಾ ಸದಸ್ಯರಿಗೆ ಅಧ್ಯಕ್ಷರು ಅವಮಾನ ಮಾಡಿದ್ದಾರೆ. ಹಾಗಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಎಸ್‌ಡಿಪಿಐನ ಅಮೀನ್ ಮೊಹ್ಸಿನ್, ಎಂ.ಕೆ. ಮನ್ಸೂರ್ ಅಲಿ ಹಾಗೂ ನಾಮನಿರ್ದೇಶಿತ ಸದಸ್ಯರು ರಾಜೇಶ್ ಅವರಿಗೆ ಬೆಂಬಲವಾಗಿ ನಿಂತರು.
ಆದರೆ ಕ್ಷಮೆ ಕೇಳಲು ಅಧ್ಯಕ್ಷೆ ಪಿ. ಕಲಾವತಿ ನಿರಾಕರಿಸಿದರು. ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ಆಯುಕ್ತರಿಗೆ ಪತ್ರ ಬರೆಯಲಾಯಿತು. ಕಾನೂನು ಪ್ರಕಾರ ಏನು ಆಗಬೇಕೋ ಅದು ಆಗಿದೆ. ತಪ್ಪು ಮಾಡಿಲ್ಲ. ಕ್ಷಮೆ ಕೇಳೋದಿಲ್ಲ. ಅಭಿವೃದ್ಧಿ ಕೆಲಸ ಮಾಡಲು ಬಂದಿರುವುದು. ಅದನ್ನೇ ಮಾಡುವುದು ಎಂದು ಪ್ರತಿಕ್ರಿಯೆ ನೀಡಿದ್ದಲ್ಲದೆ ಕ್ಷಮೆ ಕೇಳುವುದಿಲ್ಲ ಎಂದು ಪಟ್ಟು ಹಿಡಿದರು. ಊಟದ ವಿರಾಮದ ನಂತರವೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಹಾಗಾಗಿ ರಾಜೇಶ್ ಯಲ್ಲಪ್ಪ ಮತ್ತು ನಾಮನಿರ್ದೇಶಿತ ಸದಸ್ಯರು ಅಧ್ಯಕ್ಷರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಭಾತ್ಯಾಗ ಮಾಡಿದರು.
ಇದಕ್ಕೂ ಮೊದಲು ಅಮೃತ್ 2 ಯೋಜನೆ ಕಾಮಗಾರಿ ವಿಳಂಬ ಆಗುತ್ತಿರುವ ಬಗ್ಗೆ ಸದಸ್ಯರು ಸಭೆಯ ಗಮನ ಸೆಳೆದರು. ಏಪ್ರಿಲ್ ಅಂತ್ಯಕ್ಕೆ ಕಾಮಗಾರಿ ಮುಗಿಸುವುದಾಗಿ ಸಭೆಯಲ್ಲಿದ್ದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದರು. ಮನೆಗಳಿಗೆ ನೀರಿನ ಸಂಪರ್ಕ ಕೊಡಲು ಅನುಸರಿಸುತ್ತಿರುವ ಮಾನದಂಡಗಳ ಬಗ್ಗೆ ಚರ್ಚೆ ಆಯಿತು. ಎಲ್ಲಾ ಮನೆಗಳಿಗೂ ನೀರಿನ ಸಂಪರ್ಕ ಕೊಡುವಂತೆ ಕೆಲವು ಸದಸ್ಯರು ಆಗ್ರಹಿಸಿದರು. ಈ ಸಂದರ್ಭ ಮಧ್ಯಪ್ರವೇಶಿಸಿದ ಪೌರಾಯುಕ್ತ ರಮೇಶ್ ಅನಧಿಕೃತ ನೀರಿನ ಸಂಪರ್ಕ ಕೊಡುವುದು ಬೇಡ. ನಗರಸಭೆ ಪಟ್ಟಿಯಲ್ಲಿ ಇರುವವರಿಗೆ ಮಾತ್ರ ಸಂಪರ್ಕ ಕೊಡಬೇಕು. ಇದರಿಂದ ನಗರಸಭೆಗೆ ಆದಾಯ ತಪ್ಪುವುದಕ್ಕೆ ಕಡಿವಾಣ ಹಾಕಿದಂತಾಗುವುದು ಎಂದರು.
ಈ ಸಂದರ್ಭ ಮಾತನಾಡಿದ ಬಿಜೆಪಿಯ ಕೆ.ಎಂ. ಅಪ್ಪಣ್ಣ ಮನೆ ಮನೆಗೆ ನೀರಿನ ಸಂಪರ್ಕ ಕಲ್ಪಿಸಲು ಪರವಾನಗಿ ಇರುವ ಪ್ಲಂಬರ್ ಕೈಯಲ್ಲೇ ಕೆಲಸ ಮಾಡಿಸಬೇಕು ಎಂದಿದೆ. ಆದರೆ ಅವರು ದೊಡ್ಡ ಮೊತ್ತದ ಹಣ ಕೇಳ್ತಾರೆ. ಪ್ಲಂಬರ್‌ಗಳಿಗೆ ಒಂದು ದರವನ್ನು ಸಭೆಯಲ್ಲಿ ನಿಗದಿ ಮಾಡಬೇಕು ಎಂದು ಸಲಹೆ ಮಾಡಿದರು.
ಶಿಥಿಲಗೊಂಡಿರುವ ಕಾವೇರಿ ಕಲಾಕ್ಷೇತ್ರದ ವಿಷಯವನ್ನು ರಾಜೇಶ್ ಯಲ್ಲಪ್ಪ ಪ್ರಸ್ತಾಪ ಮಾಡಿದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತರು ಕಾವೇರಿ ಕಲಾಕ್ಷೇತ್ರ ಕೆಡವಿ ನೂತನ ಕಟ್ಟಡ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಎಲ್ಲಾ ತಾಂತ್ರಿಕ ಕೆಲಸ ಪೂರ್ಣಗೊಂಡಿದೆ. ಶಾಸಕರು ಸಮಯ ಕೊಟ್ಟರೆ ಮುಂದಿನ ಶುಕ್ರವಾರ ಭೂಮಿ ಪೂಜೆ ಮಾಡಲಾಗುವುದು ಎಂದರು. ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸುವಂತೆ ಸದಸ್ಯರು ಸಲಹೆ ನೀಡಿದರು.
ನಗರೋತ್ಥಾನ ಯೋಜನೆ ಮತ್ತು ಎನ್‌ಡಿಆರ್‌ಎಫ್ ಅಡಿಯಲ್ಲಿ ಕಾಮಗಾರಿಗಾರಿಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದ ರಾಜೇಶ್ ಯಲ್ಲಪ್ಪ ಹೀಗಾದರೆ ಮಳೆಗಾಲ ಮುಗಿದರೂ ಕಾಮಗಾರಿ ಮುಗಿಯುವುದಿಲ್ಲ. ಹಣ ವಾಪಸ್ ಹೋಗಲಿದೆ. ಈ ವಿಷಯ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಹಣ ವಾಪಸ್ ಹೋದರೆ ಅಧ್ಯಕ್ಷ, ಉಪಾಧ್ಯಕ್ಷ, ಆಯುಕ್ತರೇ ಹೊಣೆಗಾರ ಆಗುತ್ತಾರೆ ಎಂದರು. ಇದಕ್ಕೆ ಅಮೀನ್ ಮೊಹ್ಸಿನ್, ಮನ್ಸೂರ್ ಅಲಿ ಧ್ವನಿ ಸೇರಿಸಿದರು. ಈ ಸಂದರ್ಭ ಮಧ್ಯಪ್ರವೇಶಿಸಿದ ಪೌರಾಯುಕ್ತರು ನಗರೋತ್ಥಾನ 4ನೇ ಹಂತದ ಕಾಮಗಾರಿ ಸರಿಯಾಗಿ ನಡೆಸದಿದ್ದರೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಎನ್‌ಡಿಆರ್‌ಎಫ್ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಬೀದಿ ನಾಯಿಗಳಿಗೆ ಷೆಡ್ ಕಟ್ಟಲು ಗುರುತಿಸಿರುವ ಸ್ಥಳದ ಬಗ್ಗೆ ಅಪ್ಪಣ್ಣ ಆಕ್ಷೇಪ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಇದರಿಂದ ಸ್ಥಳೀಯರಿಗೆ ಸಮಸ್ಯೆ ಆಗಲಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಕೊಟ್ಟರಷ್ಟೇ ಈ ಜಾಗದಲ್ಲಿ ಬೀದಿ ನಾಯಿಗಳ ಷೆಡ್ ನಿರ್ಮಿಸಬೇಕು ಎಂದರು. ಸತೀಶ್ ಕೂಡ ಅಪ್ಪಣ್ಣ ಅವರನ್ನು ಬೆಂಬಲಿಸಿದರು.
ನಗರಸಭಾ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ನಗರಸಭೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಅಮೀನ್ ಮೊಹ್ಸಿನ್ ಒತ್ತಾಯಿಸಿದರು. ಆದರೆ ನಗರಸಭಾ ವ್ಯಾಪ್ತಿಯ ಸರ್ಕಾರಿ ಜಾಗ ಲಭ್ಯ ಇಲ್ಲ ಎಂದು ಮಹೇಶ್ ಜೈನಿ ಹೇಳಿದರು. ಸರ್ಕಾರಿ ದರಕ್ಕಿಂತ ನಾಲ್ಕು ಪಟ್ಟ ಹೆಚ್ಚಿನ ದರ ಕೊಟ್ಟು ಖರೀದಿಸಲು ಅವಕಾಶ ಇರುವುದರಿಂದ ಖಾಸಗಿ ಜಾಗ ಖರೀದಿಸಿ ನಿವೇಶನ ಒದಗಿಸುವಂತೆ ಅಮೀನ್ ಮೊಹ್ಸಿನ್ ಸಲಹೆ ನೀಡಿದರು.
ಬಜೆಟ್ ಮೇಲೆ ಚರ್ಚೆ ನಡೆಸದೇ ಅನುಮೋದನೆ ಪಡೆದುಕೊಂಡಿರುವುದಕ್ಕೆ ಎಸ್‌ಡಿಪಿಐನ ಸದಸ್ಯರು ಸಭೆಯ ಆರಂಭದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಜೆಂಡಾದಲ್ಲಿ ಈ ವಿಷಯ ಬಂದಾಗ ಚರ್ಚಿಸೋಣ ಎಂದು ಆಡಳಿತ ಪಕ್ಷದ ಸದಸ್ಯರು ಈ ವೇಳೆ ಸಮಜಾಯಿಷಿಕೆ ನೀಡಿದ ನಂತರ ಸಭೆ ಮುಂದುವರಿಯಿತು.
ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.