ಮಡಿಕೇರಿಯಲ್ಲಿರುವ ಸೈಬರ್ ಕ್ರೈಂ ಠಾಣೆಗೆ ಗುರುವಾರ (ಜ.15) ಭೇಟಿ ನೀಡಿದ ಎಸ್‌ಪಿ ಆರ್.ಎಸ್.ಬಿಂದುಮಣಿ ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿ ಅಧಿಕಾರಿ ಮತ್ತು ಸಿಬ್ಬಂದಿಗೆ ಸೈಬರ್ ಅಪರಾಧಗಳ ತನಿಖೆಯ ಕುರಿತು ನಿರ್ದೇಶನಗಳನ್ನು ನೀಡಿದರು. 
ಕೊಡಗು

ಸೈಬರ್ ಕ್ರೈಂ ಇರಲಿ ಎಚ್ಚರ!

ಮಡಿಕೇರಿ: ಜಾಗೃತಿ ಕಾರ್ಯಕ್ರಮಗಳು, ಪೊಲೀಸ್ ಕಾರ್ಯಾಚರಣೆಗಳು, ಅತ್ಯಾಧುನಿಕ ಸುರಕ್ಷತಾ ಕ್ರಮಗಳ ಮಧ್ಯೆಯೂ ಸೈಬರ್ ಅಪರಾಧಗಳ ಸಂಖ್ಯೆ ಏರುಗತಿಯಲ್ಲಿದೆ. ಸ್ವಲ್ಪ ಯಾಮಾರಿದರೂ ಕ್ಷಣ ಮಾತ್ರದಲ್ಲಿ ಲಕ್ಷಾಂತರ ರೂ. ಅನಾಮಧೇಯರ ಖಾತೆ ಸೇರುತ್ತಿದೆ. ವಿಶೇಷ ಎಂದರೆ ವಿದ್ಯಾವಂತರೇ ಈ ಜಾಲದಲ್ಲಿ ಸಿಲುಕಿ ಬಲಿಪಶುಗಳಾಗುತ್ತಿದ್ದಾರೆ. ಕೊಡಗಿನಲ್ಲಿ ಕಳೆದ 5 ವರ್ಷಗಳಲ್ಲಿ ವಿವಿಧ ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ 429 ಪ್ರಕರಣಗಳು ದಾಖಲಾಗಿವೆ.
ಇಂದಿನ ಆಧುನಿಕ ಯುಗದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್ ವಂಚಕರು ಜನಸಾಮಾನ್ಯರನ್ನು ಬಲೆಗೆ ಬೀಳಿಸಿಕೊಂಡು ದೋಚುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ.
ಹ್ಯಾಕರ್‌ಗಳು ಕೇವಲ ಹಣ ಗಳಿಸುವುದಕ್ಕಾಗಿ ಮಾಲ್‌ವೇರ್, ವೈರಸ್ ಅಥವಾ ಟ್ರೊಜರ್‌ಗಳ ಮೂಲಕ ಕಂಪ್ಯೂಟರ್, ಮೊಬೈಲ್‌ಗಳ ಮೇಲೆ ದಾಳಿ ನಡೆಸಿ ವೈಯಕ್ತಿಕ ಮತ್ತು ರಹಸ್ಯ ಮಾಹಿತಿ ಕದಿಯುತ್ತಿದ್ದಾರೆ. ನೇರವಾಗಿ ಬ್ಯಾಂಕ್ ಖಾತೆಗಳಿಗೂ ಕನ್ನ ಹಾಕುತ್ತಿದ್ದಾರೆ. ಈಗ ಎಐ ಬಳಸುವ ಮೂಲಕ ಮೋಸ ಮಾಡುವ ಸುಲಭ ದಾರಿಗಳನ್ನೂ ಸೈಬರ್ ವಂಚಕರು ರೂಢಿಸಿಕೊಂಡಿದ್ದಾರೆ.
ಸೈಬರ್ ವಂಚಕರ ಒಂದು ಕರೆ ಸ್ವೀಕರಿಸುವುದರಿಂದ, ಮೆಸೇಜ್ ತೆರೆಯುವುದರಿಂದ, ಅವರು ಕಳುಹಿಸುವ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದರಿಂದ ಜನಸಾಮಾನ್ಯರು ಅವರ ಬಲೆಯೊಳಗೆ ಬಿದ್ದುಬಿಡುತ್ತಾರೆ. ಹೆಣ್ಣಿನ ಆಕರ್ಷಕ ಚಿತ್ರ, ಮಾದಕ ಧ್ವನಿಗೆ ಮರುಳಾಗಿ ಅವರು ಹೇಳಿದಂತೆ ಮಾಡಲು ಹೋಗಿ ಲಕ್ಷ ಲಕ್ಷ ರೂ. ಕಳೆದು ಕೊಂಡವರೂ ಇದ್ದಾರೆ.
ಆನ್‌ಲೈನ್ ವಂಚಕರು ಜನಸಾಮಾನ್ಯರ ವೈಯಕ್ತಿಕ ಮಾಹಿತಿ ಪಡೆದು, ಬ್ಯಾಂಕ್ ವಿವರ ಸಂಗ್ರಹಿಸಿ ಕೊಟ್ಯಂತರ ರೂ. ಮೋಸ ಮಾಡುತ್ತಾರೆ. ಆನ್‌ಲೈನ್ ಬೆದರಿಕೆ, ಅಪರಾಧ, ಸೈಬರ್ ಪೀಡನೆ, ಆನ್‌ಲೈನ್ ಆಟಗಳು, ಇ-ಮೇಲ್ ವಂಚನೆ, ಡೇಟಾ ಹ್ಯಾಕ್, ಸಾಮಾಜಿಕ ಜಾಲತಾಣಗಳ ಖಾತೆಗಳ ಅಸುರಕ್ಷತೆ, ಹಣ ಕದಿಯುವುದು, ವೈಯಕ್ತಿಕ ಮಾಹಿತಿ ಕದ್ದು ಕಿರುಕುಳ ನೀಡುವುದು ಎಲ್ಲವೂ ಸೈಬರ್ ಅಪರಾಧವೇ ಆಗಿದ್ದು ಇಂಥ 429 ಪ್ರಕರಣಗಳು ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ದಾಖಲಾಗಿದ್ದು, ಕೋಟ್ಯಂತರ ರೂ. ವಂಚಕರ ಪಾಲಾಗಿದೆ.
ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕುವುದಕ್ಕಾಗಿಯೇ ರಾಜ್ಯದಲ್ಲಿ ಒಟ್ಟು 43 ಸೈಬರ್ ಅಪರಾಧ ಪೊಲೀಸ್ ಠಾಣೆಗಳು ಕಾರ್ಯ ನಿರ್ವಹಿಸುತ್ತಿವೆ. ಇಂಥ ಒಂದು ಠಾಣೆ ಜಿಲ್ಲೆಯಲ್ಲಿಯೂ ಇದ್ದು, ಮಡಿಕೇರಿ ಕೇಂದ್ರೀಕೃತವಾಗಿ ಕೆಲಸ ಮಾಡುತ್ತಿದೆ. ಕೊಡಗಿನಲ್ಲಿ 2020ರಲ್ಲಿ 76 ವಿವಿಧ ಮಾದರಿಯ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. 2021ರಲ್ಲಿ 47, 2022ರಲ್ಲಿ 30, 2023ರಲ್ಲಿ 114, 2024ರಲ್ಲಿ 90 ಹಾಗೂ 2025ರಲ್ಲಿ ನವೆಂಬರ್ 15ರ ತನಕ 72 ಬೇರೆ ಬೇರೆ ಸ್ವರೂಪದ ಸೈಬರ್ ಅಪರಾಧ ಪ್ರಕರಣಗಳು ನಡೆದಿರುವುದು ಜಿಲ್ಲೆಯಲ್ಲಿ ವರದಿಯಾಗಿದೆ. ಪೊಲೀಸ್‌ಗೆ ದೂರು ಬಂದಿರುವ ಪ್ರಕರಣಗಳ ಸಂಖ್ಯೆ ಇದಾಗಿದ್ದು, ದೂರು ಕೊಡದೇ ದೂರ ಉಳಿದವರೂ ಇದ್ದಾರೆ.
ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಕೂಡ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ.
ಸೈಬರ್ ಠಾಣಾ ಸರಹದ್ದಿನಲ್ಲಿ ಬರುವ ಕಂಪನಿಗಳು, ಶಾಲಾ ಕಾಲೇಜುಗಳು, ಅಪಾರ್ಟ್‌ಮೆಂಟ್, ಪಾರ್ಕ್ ಮುಂತಾದ ಸ್ಥಳಗಳಲ್ಲಿ ಸೈಬರ್ ಕ್ರೈಂ ಬಗ್ಗೆ ಜಾಗೃತಿ ಕಾರ್ಯ ಕ್ರಮಗಳನ್ನು ನಡೆಸಲಾಗುತ್ತಿದೆ. ಟಿವಿ ಮಾಧ್ಯಮ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಡಿಜಿಟಲ್ ಅರೆಸ್ಟ್ ಬಗ್ಗೆ ಆಗಾಗ್ಗೆ ಜಾಹೀರಾತು ಕೊಡಲಾಗುತ್ತಿದೆ. ಡಿಜಿಟಲ್ ಅರೆಸ್ಟ್ ಮತ್ತು ಸೈಬರ್ ಅಪರಾಧ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಪತ್ತೆಹಚ್ಚುವ ಸಂಬಂಧ ಸೈಬರ್ ಕಮಾಂಡರ್ ಯೂನಿಟ್ ರಚಿಸಲಾಗಿದೆ. ಬ್ಯಾಂಕ್‌ಗಳ ನೋಡಲ್ ಅಧಿಕಾರಿಗಳೊಂದಿಗೆ ಮಾಸಿಕ ಸಭೆಗಳನ್ನು ಕರೆಯುವ ಮೂಲಕ ಸೈಬರ್ ಪ್ರಕರಣಗಳಲ್ಲಿ ಭಾಗಿಯಾಗುವ ಖಾತೆಗಳ ಮೇಲೆ ನಿಗಾ ವಹಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ರವಾನಿಸಲಾಗಿದೆ.
ಎಲ್ಲ ರೀತಿಯ ಜಾಗೃತಿ ಕಾರ್ಯಕ್ರಮಗಳ ಮಧ್ಯೆಯೂ ವಿದ್ಯಾವಂತರೇ ಹೆಚ್ಚಿನ ಸಂಖ್ಯೆಯಲ್ಲಿ ಸೈಬರ್ ವಂಚನೆಯ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ವಾಟ್ಸ್‌ಆ್ಯಪ್ ಅಥವಾ ಇ-ಮೇಲ್‌ಗಳಿಗೆ ಪ್ರತಿದಿನ ಬರುವ ವಿಶ್ವಾಸಾರ್ಹವಲ್ಲದ ವಿವಿಧ ಲಿಂಕ್‌ಗಳನ್ನು ಓಪನ್ ಮಾಡದಿರುವುದರಿಂದಲೇ ಬಹುತೇಕ ಸೈಬರ್ ವಂಚನೆಗಳಿಂದ ಪಾರಾಗಬಹುದು ಎನ್ನುವುದು ಪೊಲೀಸರ ಸಲಹೆ. ಅಪರಿಚಿತ ವ್ಯಕ್ತಿಗಳು ಕಳುಹಿಸುವ ಮೆಸೇಜ್‌ಗಳ ತಂಟೆಗೆ ಹೋಗದಿರುವುದೇ ಉತ್ತಮ. ಆನ್‌ಲೈನ್‌ನಲ್ಲಿ ಹಣಕಾಸಿನ ವ್ಯವಹಾರ ಮಾಡುವಾಗ ಎಷ್ಟು ಎಚ್ಚರ ವಹಿಸಿದರೂ ಸಾಲದು.
ಸಾರ್ವಜನಿಕರು ಆನ್‌ಲೈನ್ ಹಣಕಾಸು ವ್ಯವಹಾರಕ್ಕಾಗಿ ತಮ್ಮ ಬ್ಯಾಂಕ್‌ನ ಅಧಿಕೃತ ಅಪ್ಲಿಕೇಶನ್‌ಗಳನ್ನು ಬಳಸಬೇಕು. ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಸಾರ್ವಜನಿಕರೊಂದಿಗೆ ಫೋನ್ ಮೂಲಕ ವ್ಯವಹರಿಸುವುದಿಲ್ಲ. ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆ, ಆನ್‌ಲೈನ್ ಹಣ ವರ್ಗಾವಣೆ, ಎಟಿಎಂ, ಮ್ಯೂಚುವಲ್ ಫಂಡ್, ಉಳಿತಾಯ ಪತ್ರಗಳು ಹಾಗೂ ಇತರ ಯಾವುದೇ ರೀತಿಯ ಹಣಕಾಸು ವಹಿವಾಟಿನ ಪ್ರಕ್ರಿಯೆಗಳಲ್ಲಿ ಸಮಸ್ಯೆ ಆದಾಗ ನೇರವಾಗಿ ಸಂಬಂಧಪಟ್ಟ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗೆ ತೆರಳಿ ಪರಿಹರಿಸಿಕೊಳ್ಳುವುದನ್ನು ರೂಢಿಸಿಕೊಳ್ಳುವ ಮೂಲಕ ಸೈಬರ್ ಅಪರಾಧಗಳಿಗೆ ಸಿಲುಕುವುದರಿಂದ ಪಾರಾಗಬಹುದು.
ಹಣಕಾಸು ಸಂಸ್ಥೆಗಳ ಅಥವಾ ಯುಪಿಐ ಆಧಾರಿತ ಆನ್‌ಲೈನ್ ಸೇವಾ ಸಂಸ್ಥೆಗಳ ಹೆಸರಿನಲ್ಲಿ ಕರೆಮಾಡುವ ವ್ಯಕ್ತಿಗಳು ಬ್ಯಾಂಕ್ ಅಕೌಂಟ್ ನಂಬರ್, ಎಟಿಎಂ ನಂಬರ್, ಸಿವಿವಿ ನಂಬರ್, ಒಟಿಪಿ, ಎಟಿಎಂ ಪಿನ್ ನಂಬರ್, ಗೂಗಲ್ ಪೇ, ಫೋನ್‌ಪೇ ಇತರ ಯುಪಿಐ ಆಧಾರಿತ ಆನ್‌ಲೈನ್ ಹಣಕಾಸು ವರ್ಗಾವಣೆ ಅಪ್ಲಿಕೇಶನ್‌ಗಳ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಲು ಹೇಳಿ ಹಾಗೂ ಕೋಡ್‌ಗಳನ್ನು ಕೇಳಿ ಪಡೆದು ವಂಚನೆ ಮಾಡುತ್ತಿದ್ದು, ಇಂತಹ ಗೌಪ್ಯ ಸಂಖ್ಯೆಗಳನ್ನು ಯಾರಿಗೂ ನೀಡಬಾರದು.
ಅಪರಿಚಿತ ವ್ಯಕ್ತಿಗಳು ಕರೆಮಾಡಿ ವಿವಿಧ ರೀತಿಯಲ್ಲಿ ರಿಯಾಯಿತಿ, ಬಹುಮಾನ, ಉಡುಗೊರೆಗಳ ಬಗ್ಗೆ ಸುಳ್ಳು ಮಾಹಿತಿಗಳನ್ನು ನೀಡಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದಾರೆ. ಈ ರೀತಿ ಅಪರಿಚಿತ ವ್ಯಕ್ತಿಗಳಿಗೆ ಹಣ ನೀಡಬಾರದು ಎನ್ನುವ ಕಿವಿಮಾತನ್ನು ಹೇಳುತ್ತಾರೆ ಪೊಲೀಸರು.
ಯಾವುದೇ ಅನಾಮಧೇಯ ಮೂಲಗಳು, ಸಂಶಯಾಸ್ಪದ ವ್ಯಕ್ತಿಗಳು, ಸಾಮಾಜಿಕ ಜಾಲತಾಣಗಳಮೂಲಕ ಬರುವ ಲಿಂಕ್‌ಗಳ ಬಗ್ಗೆ ಜಾಗರೂಕರಾಗಿ ಇರಬೇಕು. ಇಂಥ ಅಪ್ಲಿಕೇಷನ್ ಲಿಂಕ್‌ಗಳು ಶೇರ್ ಆದಲ್ಲಿ ಕೂಡಲೇ ಸೈಬರ್ ಕ್ರೈಂ ಸ್ಟೇಷನ್‌ಗೆ ಮಾಹಿತಿ ಕೊಡಬೇಕು. ಹೀಗೆ ಮಾಡುವುದರಿಂದ ಮೋಸಕ್ಕೆ ಒಳಗಾಗುವುದು ತಪ್ಪುತ್ತದೆ. ಬೇರೆಯವರೂ ಇದಕ್ಕೆ ಬಲಿಯಾಗದಂತೆ ಎಚ್ಚೆತ್ತುಕೊಳ್ಳಲು ಸಹಕಾರಿಯಾಗುತ್ತದೆ. ಒಂದು ವೇಳೆ ಸೈಬರ್ ಅಪರಾಧ ಜಾಲಕ್ಕೆ ಸಿಲುಕಿದರೆ, ಮೋಸಕ್ಕೆ ಒಳಗಾದರೆ 1930 ಸೈಬರ್ ಕ್ರೈಂ ಹೆಲ್ಪ್‌ಲೈನ್ ಸಂಪರ್ಕಿಸಬೇಕು. ಗೋಲ್ಡನ್ ಅವರ್‌ನಲ್ಲಿ ಮಾಹಿತಿ ಕೊಡುವುದರಿಂದ ಹೆಚ್ಚಿನ ನಷ್ಟ ಆಗುವುದರಿಂದ ಪಾರಾಗಬಹುದು.
ಆರ್.ಎಸ್.ಬಿಂದುಮಣಿ, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ