ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಆವರಣದಲ್ಲಿ ಕುಶಾಲನಗರ ತಾಲೂಕು ಕಸಾಪ ವತಿಯಿಂದ ನಡೆದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಶತಮಾನೋತ್ಸವ ಸಮಾರಂಭದಲ್ಲಿ ಗೀತನಮನ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಉದ್ಘಾಟಿಸಿದರು. ದೇವರಾಜ್, ಚಂದ್ರಕಲಾ, ಕೇಶವ ಕಾಮತ್, ನಾಗೇಶ್, ಅಬ್ದುಲ್ ಸಲಾಂ ರಾವತರ್ ಇದ್ದರು. 
ಕೊಡಗು

ಹೃದಯದ ಭಾವನೆಗಳ ಸಾಹಿತ್ಯ, ಸಂಗೀತ ಭಾವಗೀತೆ

ಕುಶಾಲನಗರ:
ಹೃದಯದ ಭಾವನೆಗಳ ಸಾಹಿತ್ಯ, ಸಂಗೀತ ಸಮ್ಮಿಳಿತವಾದದ್ದು ಭಾವಗೀತೆಯಾಗುತ್ತದೆ. ಭಾವಗೀತೆ ಎಂದಿಗೂ ಜನಮಾನಸದಲ್ಲಿ ಚಿರಂತನವಾಗಿ ಇರುವಂಥದ್ದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಹೇಳಿದರು. ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಆವರಣದಲ್ಲಿ ಕುಶಾಲನಗರ ತಾಲೂಕು ಕಸಾಪ ವತಿಯಿಂದ ಈಚೆಗೆ ನಡೆದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಶತಮಾನೋತ್ಸವ ಸಮಾರಂಭದಲ್ಲಿ ಗೀತನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕವಿ ಜಿಎಸ್‌ಎಸ್ ಅವರ ನವೋದಯ ಕನ್ನಡದ ಭಾವಗೀತೆಗಳು ಸಮುದ್ರವಿದ್ದಂತೆ. ಅವರ ಭಾವಗೀತೆಗಳು ಬದುಕಿನ ಏರಿಳಿತಗಳನ್ನು ಒಳಗೊಂಡು, ಓದುಗರ ಮನಸ್ಸನ್ನು ಆಹ್ಲಾದಗೊಳಿಸುವುದಲ್ಲದೆ, ಸಹೃದಯರ ಮಾನಸಿಕ ಖಿನ್ನತೆಯನ್ನು ದೂರ ಮಾಡುವ, ಜನ ಮಾರ್ಗದಲ್ಲಿ ನಿಲ್ಲುವ ಕವಿತೆಗಳಾಗಿವೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಮಾತನಾಡಿ, ನಮ್ಮ ಮನದಲ್ಲಿ ಹುಟ್ಟುವ ಭಾವನೆಗಳ ಅಂತ್ಯವಿಲ್ಲದ ತಾಣವೇ ಭಾವಗೀತೆ. ನಮ್ಮ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ಭಾವಗೀತೆ ಸುಗಮ ಸಂಗೀತದ ಜತೆ ಜತೆಯಲ್ಲಿ ಸೇರಿ ಶಾಸ್ತ್ರೀಯ ಸಂಗೀತವನ್ನು ತನ್ನೊಂದಿಗೆ ಬೆಸೆದುಕೊಂಡು ಉತ್ತಮ ನೆಲೆಯನ್ನು ಕಂಡುಕೊAಡಿದೆ. ಮತ್ತೆ ಮತ್ತೆ ಹಾಡಲು ಮತ್ತೆ ಮತ್ತೆ ಕೇಳಲು ಹಿತವಾಗುವ ಭಾವ ಪ್ರಪಂಚಕ್ಕೆ ಕೊಂಡೊಯ್ಯುವುದು ಈ ಭಾವಗೀತೆ. ಭಾವನೆಗಳನ್ನು ಪರಿಮಿತವಾಗಿ ಇರಿಸಲು ಸಾಧ್ಯವಿಲ್ಲ. ಪಕ್ಕ ವಾದ್ಯಗಳ ಅನಿವಾರ್ಯತೆಯು ಉತ್ತಮ ಭಾವಗೀತೆಗೆ ಇದೆ. ಸುಗಮ ಸಂಗೀತಕ್ಕೆ ಸಮರ್ಪಣೆ ಮಾಡಿಕೊಂಡಿದೆ ಭಾವಗೀತೆ. ಭಾವಗೀತೆಯ ಹಿನ್ನೆಲೆಯಲ್ಲಿ ನೂತನ ಆವಿಷ್ಕಾರಗಳು ನಡೆಯುತ್ತಲೇ ಇವೆ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಕನ್ನಡದಲ್ಲಿ ಉತ್ತಮ ಭಾವಗೀತೆಗಳನ್ನು ಬರೆಯುವುದರ ಮೂಲಕ ಸಾಹಿತ್ಯ ಸಂಗೀತ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.
ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ನಾಗೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ನಿಸರ್ಗಧಾಮ ಟೂರಿಸ್ಟ್ ಸೆಂಟರ್‌ನ ಅಬ್ದುಲ್ ಸಲಾಂ ರಾವತರ್, ಕರ್ನಾಟಕ ರಾಜ್ಯ ಒಳಚರಂಡಿ ಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಕಸಾಪ ಸಂಘಟನಾ ಕಾರ್ಯದರ್ಶಿ ದೇವರಾಜ್, ಕಾರ್ಯದರ್ಶಿ ಟಿ. ವಿ. ಶೈಲಾ, ಕೋಶಾಧಿಕಾರಿ ಕೆ.ವಿ. ಉಮೇಶ್, ನಿರ್ದೇಶಕಿ ಬಿ. ಬಿ. ಹೇಮಾಲತಾ, ಪರಮೇಶ್ ಸಾಗರ್ ಮತ್ತಿತರರು ಇದ್ದರು.
ಜಿ.ಎಸ್.ಎಸ್ ಅವರ ಗೀತ ನಮನ ಕಾರ್ಯಕ್ರಮದಲ್ಲಿ, ಮಡಿಕೇರಿ ಆಕಾಶವಾಣಿ ಕೇಂದ್ರದ ನಾಗೇಶ್ ಭಟ್, ಜಿ. ಚಿದ್ವಿಲಾಸ್, ರವಿ, ವೈಭವಿ ಭಟ್, ಶೇಖರ್, ಸೇರಿದಂತೆ ಜಿಲ್ಲೆಯ ಪ್ರಮುಖ ಹಾಡುಗಾರರು ಭಾಗವಹಿಸಿದ್ದರು.