ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಶ್ರೀ ಭಗವಾನ್ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎಚ್.ಬಿ.ಲಿಂಗಮೂರ್ತಿ, ಕೆ.ಎಸ್.ಚಂದ್ರಶೇಖರ್, ಬಿ.ಬಿ.ನಾಗರಾಜು, ಎಸ್.ಜೆ.ದೇವದಾಸ್ ಇತರರಿದ್ದರು. 
ಕೊಡಗು

ವಿಶ್ವಕರ್ಮರ ಆರಾಧನೆಗೆ ಆದ್ಯತೆ ನೀಡಿ

ಪ್ರಮುಖ ಮುಖ್ಯಾಂಶಗಳು

  • ವಿಶ್ವಕರ್ಮರ ಆರಾಧನೆಗೆ ಆದ್ಯತೆ ನೀಡಿ
  • ಭಗವಾನ್ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಎಚ್.ಬಿ.ಲಿಂಗಮೂರ್ತಿ
ಮಡಿಕೇರಿ: ವಿಶ್ವಕರ್ಮರು ಕೇವಲ ಒಂದು ವ್ಯಕ್ತಿಯಲ್ಲ, ಇಡೀ ಬ್ರಹ್ಮಾಂಡದ ಸೃಷ್ಟಿಗೆ ರೂಪ ನೀಡಿದ ಶಕ್ತಿ. ಆದ್ದರಿಂದ ವಿಶ್ವಕರ್ಮ ಜಯಂತಿಯನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ, ವಿಶ್ವಕರ್ಮರ ಆರಾಧನೆಯನ್ನು ಸಾರ್ವತ್ರಿಕವಾಗಿ ಪೂಜಾ ಮಹೋತ್ಸವದ ರೂಪದಲ್ಲಿ ಆಚರಿಸಬೇಕು ಎಂದು ಕುಶಾಲನಗರದ ನಿವೃತ್ತ ಪ್ರಾಂಶುಪಾಲ ಎಚ್.ಬಿ.ಲಿಂಗಮೂರ್ತಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಶ್ರೀ ಭಗವಾನ್ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಶ್ವಕರ್ಮರು ಇಡೀ ಜಗತ್ತಿನ ಹಾಗೂ ಬ್ರಹ್ಮಾಂಡದ ಸೃಷ್ಟಿಕರ್ತರೆಂದು ಭಾರತೀಯ ಪರಂಪರೆಯಲ್ಲಿ ನಂಬಲಾಗಿದೆ. ಜಗತ್ತಿನಲ್ಲಿ ಏನೂ ಇಲ್ಲದ ಶೂನ್ಯ ಸ್ಥಿತಿಯಿಂದ ಸೃಷ್ಟಿ ಕಾರ್ಯವನ್ನು ಆರಂಭಿಸಿ, ರಸತತ್ವದಿಂದ ಜಲತತ್ವವನ್ನು ರೂಪಿಸಿ, ಅದನ್ನು ಪೃಥ್ವಿ ತತ್ವಕ್ಕೆ ತಂದವರು ವಿಶ್ವಕರ್ಮ ಎಂಬ ನಂಬಿಕೆಯಿದೆ ಎಂದು ಹೇಳಿದರು.
ವಿಶ್ವಕರ್ಮರು ನಿರ್ದಿಷ್ಟ ವ್ಯಕ್ತಿಗೆ ಅಥವಾ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದವರಲ್ಲ. ಇಡೀ ಜಗತ್ತಿನ ಸೃಷ್ಟಿಶಕ್ತಿಯ ಪ್ರತೀಕವಾಗಿರುವುದರಿಂದ ಎಲ್ಲರೂ ಅವರನ್ನು ಗೌರವಿಸಿ ಆರಾಧಿಸಬೇಕು. ವಿಶ್ವಕರ್ಮರು ಪ್ರಳಯದ ನಂತರವೂ ಹೊಸ ಸೃಷ್ಟಿಯ ಕಾರ್ಯಕ್ಕೆ ಕಾರಣವಾಗುವ ಶಕ್ತಿಯಾಗಿದ್ದಾರೆ ಎಂಬ ಪೌರಾಣಿಕ ನಂಬಿಕೆಯಿದೆ. ಸೂರ್ಯ, ಚಂದ್ರ, ನಕ್ಷತ್ರಗಳೂ ಇಲ್ಲದ ಶೂನ್ಯ ಸ್ಥಿತಿಯಿಂದ ಹೊಸ ಜಗತ್ತಿನ ನಿರ್ಮಾಣ ಆರಂಭವಾಗುತ್ತದೆ ಎಂಬ ಕಲ್ಪನೆಯಲ್ಲಿ ವಿಶ್ವಕರ್ಮರ ಸೃಷ್ಟಿಶಕ್ತಿಯನ್ನು ಗುರುತಿಸಲಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ವಿಶ್ವಕರ್ಮ ಜಯಂತಿಯ ಆಚರಣೆಯು ಕೇವಲ ಒಂದು ದಿನದ ಕಾರ್ಯಕ್ರಮವಾಗದೆ, ಕಾಯಕದ ಗೌರವ, ಕೌಶಲ್ಯದ ಮಹತ್ವ, ಸೃಜನಶೀಲತೆ ಹಾಗೂ ಸಮಾಜ ನಿರ್ಮಾಣದಲ್ಲಿ ವಿವಿಧ ವೃತ್ತಿಗಳ ಕೊಡುಗೆಯನ್ನು ಗೌರವಿಸುವ ಸಂದರ್ಭವಾಗಬೇಕು. ವಿಶ್ವಕರ್ಮ ತತ್ವವನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಸಾರ್ವತ್ರಿಕ ಸೃಷ್ಟಿಶಕ್ತಿಯ ರೂಪದಲ್ಲಿ ಅರ್ಥೈಸಿಕೊಂಡು ಆರಾಧಿಸಬೇಕು ಎಂದು ಹೇಳಿದರು.
ವಿಶ್ವಕರ್ಮ ಸಮಾಜದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಎಸ್.ಚಂದ್ರಶೇಖರ್ ಮಾತನಾಡಿ, ವಿಶ್ವಕರ್ಮ ಸಮುದಾಯವು ಉನ್ನತ ಮಟ್ಟಕ್ಕೆ ಬೆಳೆಯಬೇಕಾದರೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ರಾಜಕೀಯವಾಗಿಯೂ ಪ್ರಬಲವಾಗಬೇಕು ಎಂದ ಅವರು, ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಪ್ರಮುಖ ಸಾಧನವಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆಯಬೇಕು ಎಂದು ಅವರು ಹೇಳಿದರು.
ಕೊಡಗು ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಬಿ.ನಾಗರಾಜು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ವಿಶ್ವಕರ್ಮ ಸಮಾಜದ ಸಂಘಟನೆಯನ್ನು ಮತ್ತ?್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಂದು ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ನಡೆಸಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಸೇರ್ಪಡೆಗೊಳಿಸಬೇಕು. ವಿಶ್ವಕರ್ಮ ಸಮಾಜದ ಮುಖಂಡರು, ಜಿಲ್ಲೆಯಲ್ಲಿ ವಿಶ್ವಕರ್ಮ ಸಮಾಜದ ಸಂಘಟನೆ ಹಲವು ವರ್ಷಗಳಿಂದ ವಿವಿಧ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ. ಆದರೆ ಸಂಘಟನೆಯ ಚಟುವಟಿಕೆಗಳಿಗೆ ಮತ್ತಷ್ಟ ವೇಗ ನೀಡುವ ಅಗತ್ಯವಿದೆ ಎಂದು ಹೇಳಿದರು.
ವಿರಾಜಪೇಟೆ ಹಾಗೂ ಮಡಿಕೇರಿ ತಾಲೂಕುಗಳಲ್ಲಿ ವಿಶ್ವಕರ್ಮ ಸಮಾಜದ ಸದಸ್ಯತ್ವವನ್ನು ಹೆಚ್ಚಿಸುವ ಅಗತ್ಯವಿದ್ದು, ಪ್ರತಿಯೊಂದು ತಾಲೂಕಿನಲ್ಲಿ ಕನಿಷ್ಠ ೧೦೦ ಮಂದಿ ಸದಸ್ಯರನ್ನು ಸೇರ್ಪಡೆಗೊಳಿಸುವ ಗುರಿ ಹೊಂದಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು. ವಿಶ್ವಕರ್ಮ ಸಮಾಜದ ಮುಖಂಡರು ಸಂಘಟನೆಗಾಗಿ ತಳಮಟ್ಟಕ್ಕೆ ಇಳಿದು ಕೆಲಸ ಮಾಡಬೇಕು. ಮುಖಂಡರು ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸಮಾಜದ ಇತರರು ಸಂಘಟನೆಯೊಂದಿಗೆ ಕೈಜೋಡಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಎಸ್.ಜೆ.ದೇವದಾಸ್ ಅವರು ವಿಶ್ವಕರ್ಮರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿಗಳಾಗುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್, ಸಾಹಿತಿ ಮಣಜೂರು ಮಂಜುನಾಥ್, ಸಮಾಜದ ಪ್ರಮುಖರಾದ ಬಿ.ಸಿ.ಅಶೋಕ್, ಪ್ರಕಾಶ್ ಆಚಾರ್ಯ, ವಿದ್ಯಾಲತ, ದಿವಾಕರ್, ಬ್ಲಾಸಂ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಇಲಾಖಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.