ಸಂತ ಅನ್ನಮ್ಮ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಪ್ರಾರಂಭೋತ್ಸವ ನಡೆಯಿತು. 
ಕೊಡಗು

ಸಂತ ಅನ್ನಮ್ಮ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭೋತ್ಸವ

ಸಿದ್ದಾಪುರ: ಸಿದ್ದಾಪುರದ ಸಂತ ಅನ್ನಮ್ಮ ಶಾಲೆ (ಸಿಬಿಎಸ್‌ಇ)ಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಎಲ್‌ಕೆಜಿ ಹಾಗೂ ಯುಕೆಜಿ ಪ್ರಾರಂಭೋತ್ಸವ ಮಂಗಳವಾರ ಸಂಭ್ರಮದಿಂದ ನಡೆಯಿತು.
ಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ಮಾರ್ಜರಿ ಮಾತನಾಡಿ, ಮಕ್ಕಳ ಶಿಕ್ಷಣದ ಅಡಿಪಾಯವು ಬಾಲ್ಯದಲ್ಲಿಯೇ ರೂಪುಗೊಳ್ಳುತ್ತದೆ. ಶಾಲೆಯ ಮೊದಲ ದಿನವು ಮಕ್ಕಳ ಜೀವನದಲ್ಲಿ ಮಹತ್ವದ ಘಟ್ಟವಾಗಿದೆ. ಆಟ, ಪಾಠ ಹಾಗೂ ಮೌಲ್ಯಾಧಾರಿತ ಶಿಕ್ಷಣದ ಮೂಲಕ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಾಲೆ ಒತ್ತು ನೀಡಲಿದೆ ಎಂದು ಹೇಳಿದರು.
ಹೊಸ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಶಾಲೆಯ ಶಿಕ್ಷಕ ವೃಂದವು ಮಕ್ಕಳಿಗೆ ವಿವಿಧ ಚಟುವಟಿಕೆ ಮೂಲಕ ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು. ಪಾಲಕರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನರ್ಸರಿ ವಿಭಾಗದ ಮುಖ್ಯಶಿಕ್ಷಕಿ ಸಿಸ್ಟರ್ ಕ್ರೆಸೆನ್ಸ್, ಸಂತ ಅನ್ನಮ್ಮ ಕಾನ್ವೆಂಟ್ ಶಾಲೆಯ ಪ್ರತಿನಿಧಿ ಸಿಸ್ಟರ್ ಗ್ರೇಸ್ ಲಿಮಾ, ಕನ್ನಡ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಅರ್ಪಿತಾ, ನಿರ್ವಹಣಾ ಸಮಿತಿಯ ಸಿಸ್ಟರ್ ಸಿಲ್ವಿಯಾ ರೊಡ್ರಿಗಸ್, ಕಲಾವಿದ ಭಾವ ಮಾಲ್ದಾರೆ, ಶಿಕ್ಷಕರಾದ ಲೆನಿ, ಸುನೀತಾ, ತೆರೇಸಾ ಇದ್ದರು.