ನಿಮ್ಮ ಪ್ರತಿಭೆ-ನಮ್ಮ ವೇದಿಕೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದಯಶಂಕರ್ ಉದ್ಘಾಟಿಸಿದರು. ಬಿ.ರಾಘವ, ಆನಂದ್ ದೆಗ್ಗನಹಳ್ಳಿ ಇತರರಿದ್ದರು.
- ಉತ್ತಮ ಮಾನವನನ್ನಾಗಿ ರೂಪಿಸುವ ಶಕ್ತಿ ಸಾಹಿತ್ಯಕ್ಕಿದೆ
- ನಿಮ್ಮ ಪ್ರತಿಭೆ-ನಮ್ಮ ವೇದಿಕೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉದಯಶಂಕರ್
ಮಡಿಕೇರಿ: ಸಾಹಿತ್ಯಕ್ಕೆ ಉತ್ತಮ ಮಾನವನನ್ನಾಗಿ ರೂಪಿಸುವ ಶಕ್ತಿಯಿದ್ದು ಸಾಹಿತ್ಯಾಭಿರುಚಿ ಇಲ್ಲದವನು ಪ್ರಾಣಿಗಳಿಗೆ ಸಮಾನ ಎಂದು ವೈದ್ಯ ಸಾಹಿತಿ ಡಾ.ನಡಿಬೈಲು ಉದಯಶಂಕರ್ ಅಭಿಪ್ರಾಯಪಟ್ಟರು.
ನಗರದ ಓಂಕಾರಸದನದಲ್ಲಿ ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಘಟಕದ ವತಿಯಿಂದ ಆಯೋಜಿತ ನಿಮ್ಮ ಪ್ರತಿಭೆ-ನಮ್ಮ ವೇದಿಕೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಸಾಹಿತ್ಯ ಪ್ರೀತಿಯಿಂದ ಉತ್ತಮ ಗುಣಗಳನ್ನು ಹೊಂದಲು ಸಾಧ್ಯವಿದೆ. ಹೀಗಾಗಿ ಸಾಹಿತ್ಯಾಸಕ್ತಿಯುಳ್ಳವನು ಸಮಾಜದಲ್ಲಿ ಉತ್ತಮ ಪ್ರಜೆಯಾಗುತ್ತಾನೆ. ಶ್ರೀಮಂತ ಸಂಸ್ಕೃತಿ, ಸಾಹಿತ್ಯವನ್ನು ಹೊಂದಿರುವ ಕನ್ನಡ ಭಾಷೆಯಲ್ಲಿ ಪರಿಣಿತಿ ಹೊಂದಿದ ಅನೇಕರು ವಿಶ್ವವ್ಯಾಪಿ ಗಣ್ಯ ಸ್ಥಾನ ಹೊಂದಿದ್ದಾರೆ. ಕನ್ನಡ ನಾಡಿನ ಸಮರ್ಥರು ಸಾಹಿತ್ಯ, ಕ್ರೀಡೆ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿಯೂ ಖ್ಯಾತಿ ಪಡೆದಿದ್ದಾರೆ ಎಂದು ಹೇಳಿದರು.
ಸಾಹಿತ್ಯದ ಗೊಡವೆ ಹೊಂದಿಲ್ಲದಿದ ಮುಂದಿನ ಪೀಳಿಗೆ ಬಗ್ಗೆ ಆತಂಕವಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಕರುನಾಡಿನ ಸಾಹಿತ್ಯ, ಸಾಂಸ್ಕತಿಕ ಮಹತ್ವ ತಿಳಿಸುವಲ್ಲಿ ಇಂಥ ಸಾಂಸ್ಕೃತಿಕ ಪ್ರತಿಭಾ ವೇದಿಕೆಗಳು ಅಗತ್ಯ ಎಂದು ಡಾ.ನಡಿಬೈಲು ಉದಯಶಂಕರ್ ಅಭಿಪ್ರಾಯಪಟ್ಟರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಬಿ.ರಾಘವ ಮಾತನಾಡಿ, ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಜನ ಬಳಕೆ ಮಾಡುವ ಭಾಷೆಯಾಗಿ ಕನ್ನಡಕ್ಕೆ ೨೯ನೇ ಸ್ಥಾನವಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ನಾವೆಲ್ಲಾ ಹೆಚ್ಚು ಬಳಕೆ ಮಾಡುವ ಮೂಲಕ ಕನ್ನಡದ ಸಂರಕ್ಷಣೆಗೆ ಮುಂದಾಗಬೇಕೆಂದು ಕರೆ ನೀಡಿದರು.
ಇತ್ತೀಚಿನ ಸಿನಿಮಾಗಳಲ್ಲಿ ಕನ್ನಡ ಭಾಷೆಯ ಬಳಕೆ ಸಮರ್ಪಕವಾಗಿ ಆಗದೇ ಕನ್ನಡದ ಕಗ್ಗೊಲೆಯಾಗುತ್ತಿದೆ. ಇದನ್ನು ತಡೆಗಟ್ಟಬೇಕಾಗಿದೆ. ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿಯೂ ಕನ್ನಡ ಭಾಷೆಯ ಬಳಕೆ ಹೆಚ್ಚಾಗುವ ಮೂಲಕ ಮಕ್ಕಳಲ್ಲಿ ಕನ್ನಡದ ಮಹತ್ವದ ಅರಿವಾಗಬೇಕೆಂದೂ ರಾಘವ ಸಲಹೆ ನೀಡಿದರು.
ಸಮರ್ಥ ಕನ್ನಡಿಗರು ಸಂಸ್ಥೆಯ ರಾಜ್ಯ ಪ್ರಧಾನ ಸಂಚಾಲಕ ಆನಂದ್ ದೆಗ್ಗನಹಳ್ಳಿ ಮಾತನಾಡಿ, ೨೦೧೭ರಲ್ಲಿ ಸ್ಥಾಪಿಸಲ್ಪಟ್ಟ ಸಮರ್ಥ ಕನ್ನಡಿಗರು ಸಂಸ್ಥೆ ರಾಜ್ಯವ್ಯಾಪಿ ನೂರಾರು ಕಾರ್ಯಕ್ರಮಗಳ ಮೂಲಕ ಸಾಂಸ್ಕತಿಕ ಮತ್ತು ಸಾಹಿತ್ಯ ಪ್ರೀತಿಯನ್ನು ಜನರಲ್ಲಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಘಟಕದ ಸಂಚಾಲಕಿ ಕೆ.ಜಯಲಕ್ಷ್ಮಿ ಮಾತನಾಡಿ, ಕಳೆದ ೮ ವರ್ಷಗಳಿಂದ ಕೊಡಗಿನಲ್ಲಿ ೧೪ ಪ್ರಮುಖ ಕಾರ್ಯಕ್ರಮಗಳನ್ನು ಸಂಸ್ಥೆಯಿಂದ ಆಯೋಜಿಸಲಾಗಿದೆ. ನೂರಾರು ಪ್ರತಿಭೆಗಳಿಗೆ ವೇದಿಕೆ ನೀಡಲಾಗಿದೆ. ಹೀಗಿದ್ದರೂ ಸಾರ್ವಜನಿಕವಾಗಿ ಇಂಥ ಪ್ರತಿಭಾ ಪ್ರದರ್ಶನ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಂದ ಮತ್ತಷ್ಟು ಪ್ರೋತ್ಸಾಹ ಅಗತ್ಯ ಎಂದು ಮನವಿ ಮಾಡಿದರು.
ಸಮರ್ಥ ಕನ್ನಡಿಗರು ಸಂಸ್ಥೆಯ ಸದಸ್ಯರಾದ ಸವಿತಾ ರಾಕೇಶ್, ಶಾಂತಿ ಅಚ್ಚಯ್ಯ ವಂದಿಸಿದರು. ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳಿಂದ ಛದ್ಮವೇಷ ಸ್ಪರ್ಧೆ, ಚಿತ್ರಕಲೆ, ಗೀತೆ, ಸಮೂಹ ನತ್ಯ ಮುಂತಾದ ಸ್ಪರ್ಧೆಗಳು ಆಕರ್ಷಿಸಿದವು.