ಆಲೂರುಸಿದ್ದಾಪುರ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಮಕ್ಕಳ ಸಂತೆ. 
ಕೊಡಗು

ಸಂತೆಯಲ್ಲಿ ಮಕ್ಕಳ ವ್ಯಾಪಾರ-ವಹಿವಾಟು

ಶನಿವಾರಸಂತೆ: ಸಮೀಪದ ಆಲೂರುಸಿದ್ದಾಪುರದ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಸಂತೆಯನ್ನು ಏರ್ಪಡಿಸಲಾಗಿತ್ತು.
ಶಾಲಾ ಆಟದ ಮೈದಾನದಲ್ಲಿ ನಡೆದ ಸಂತೆಯಲ್ಲಿ ವಿದ್ಯಾಸಂಸ್ಥೆಯ ಪುಟಾಣಿಗಳು ಸೇರಿದಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಬೆಳೆದ ತರಕಾರಿ, ಸೊಪ್ಪು, ಹಣ್ಣು-ಹಂಪಲುಗಳನ್ನು ತಂದು ಮಾರಾಟ ಮಾಡಿದರು.
ಶಾಲಾ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆಯ ವಾತಾವರಣ ಪಟ್ಟಣದಲ್ಲಿ ನಡೆಸುವ ಸಂತೆ ಮಾರುಕಟ್ಟೆಯಂತೆ ಕಾಣಿಸುತ್ತಿತ್ತು. ಪಾಲಕರು ಮತ್ತು ಸಾರ್ವಜನಿಕರು ಮಕ್ಕಳ ಸಂತೆಗೆ ಬಂದು ತರಕಾರಿ ಇತರ ವಸ್ತುಗಳನ್ನು ಖರೀದಿಸುತ್ತಿದ್ದರು. ಮಕ್ಕಳು ಗ್ರಾಹಕರನ್ನು ತಾನು ತಂದಿರುವ ತರಕಾರಿ, ಸೊಪ್ಪನ್ನು ಖರೀದಿಸುವಂತೆ ಕೂಗಿ ಕರೆಯುತ್ತಿದ್ದರು.
ತರಕಾರಿ, ಇತರ ವಸ್ತುಗಳಿಗೆ ಬೆಲೆ ನಿಗದಿ ಮಾಡಿದ್ದ ಚಿಣ್ಣರು: ತೆಂಗಿನಕಾಯಿಗೆ 10 ರೂ., ಟೊಮ್ಯಾಟೊ 10 ರೂ., ಸೊಪ್ಪು ಕಟ್ಟಿಗೆ 5 ರೂ, ಎಲೆಕೋಸು 10 ರೂ., ಹಲಸಿನಕಾಯಿ ಕುಜ್ಜೆ 10 ರೂ., ಹುತ್ತರಿಗೆಣಸು 10 ರೂ., ಕ್ಯಾರೆಟ್ 10 ರೂ., ಹಲಸಂಡೆ ಕಟ್ಟಿಗೆ 5 ರೂ., ಮೆಣಸಿನಕಾಯಿ ಗುಡ್ಡೆಗೆ 5 ರೂ., ಜೋಳ 5 ರೂ.ಗೆ ಮಾರಾಟ ಮಾಡುತ್ತಿದ್ದರೆ ಚುರುಮುರಿಗೆ 5 ರೂ., ತಂಪುಪಾನಿ ಲೋಟಕ್ಕೆ 5 ರೂ.ಮತ್ತು ಮನೆಯಲ್ಲಿ ತಯಾರಿಸಿದ ವಿವಿಧ ತಿಂಡಿ ತಿನಿಸುಗಳಿಗೆ 5 ರೂ.ನಂತೆ ಮಾರಾಟ ಮಾಡುತ್ತಿದ್ದರು. ಮಕ್ಕಳ ಸಂತೆಗೆ ಬಂದ ಗ್ರಾಹಕರು ತರಕಾರಿ, ಸೊಪ್ಪು, ತೆಂಗಿನಕಾಯಿ ಮತ್ತಿತ್ತರ ವಸ್ತುಗಳನ್ನು ಖರಿದಿಸುತ್ತಿದ್ದರು.
ಮುಖ್ಯ ಶಿಕ್ಷಕಿ ಸರಿತಾ ಶಿವಪ್ರಕಾಶ್ ಮಾರ್ಗದರ್ಶನದಂತೆ ಮಕ್ಕಳ ಸಂತೆಯಲ್ಲಿ ಸಹ ಶಿಕ್ಷಕರಾದ ಪೂಜಾ, ಜಯಂತಿ, ರಕ್ಷಿತಾ, ಪ್ರಪುಲ್ಲಾ, ಚೈತ್ರಾ, ಮಲ್ಲಿಕಾ, ಶ್ವೇತಾ, ಕವನಾ, ಶಿಲ್ಪ, ಸ್ವಾತಿ, ಸ್ಮಿತಾ ಹಾಗೂ ಪಾಲಕರ ಸಮಿತಿಯವರು ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿದರು.