ಉತ್ತಮ ಆರೋಗ್ಯವಂತ ಹಸು ಕಾಲುಗಳು ಕೃಶಗೊಂಡು ರೋಗದಿಂದ ನರಳುತ್ತಿರುವುದು .
ನಾಪೋಕ್ಲು: ಆರೋಗ್ಯವಂತ ಹಸುಗಳ ಕಾಲುಗಳು ಕೃಶಗೊಂಡು ಕ್ರಮೇಣ ಸಾವಿಗೀಡಾಗುತ್ತಿದ್ದು, ರೋಗದಿಂದ ರೈತರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ ಎಂದು ಪಾಲುರು ಗ್ರಾಮದ ರೈತ ಸೂದನ ಎಸ್.ಈರಪ್ಪ ಅಳಲುತೋಡಿಕೊಂಡಿದ್ದಾರೆ.
ಪಾಲುರು ಗ್ರಾಮದ ಸುತ್ತಮುತ್ತಲ ಗ್ರಾಮಗಳಲ್ಲಿ ಹೈನುಗಾರಿಕೆ ಮಾಡುತ್ತಿರುವ ಹಲವರು ಈ ಸಮಸ್ಯೆಯಿಂದ ಕಂಗಾಲಾಗಿದ್ದಾರೆ. ಈ ಬಗ್ಗೆ ಪಶು ವೈದ್ಯ ಇಲಾಖೆಯವರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದು, ಸಮಸ್ಯೆಗೆ ಪರಿಹಾರ ನೀಡುವಂತೆ ವಿನಂತಿಸಿಕೊಂಡಿದ್ದಾರೆ. ಹಸುಗಳಿಗೆ ಕಾಲು ಬಾರದೆ ಕೃಶವಾಗಿ ನರಳಿ ಸಾಯುತ್ತಿರುವುದು ರೈತರಿಗೆ ಗಂಭೀರ ಸಮಸ್ಯೆಯಾಗಿದೆ. ಸಮಸ್ಯೆ ಪರಿಹಾರಕ್ಕೆ ತಜ್ಞರ ತಂಡವನ್ನು ರಚಿಸಿ ಪರಿಹಾರ ಕಂಡುಕೊಳ್ಳಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸ್ಪಂದಿಸಿ ಅತಂತ್ರ ಸ್ಥಿತಿಯಲ್ಲಿರುವ ರೈತರ ನೆರವಿಗೆ ಸಹಕರಿಸಬೇಕೆಂದು ಕೋರಿದ್ದಾರೆ.