ಮೈಸೂರಿನ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಆಟಿ ಗೌಜಿ ಕಾರ್ಯಕ್ರಮವನನ್ನು ಗಣ್ಯರು ಉದ್ಘಾಟಿಸಿದರು. ಕೆ.ವಿ.ಶ್ರೀಧರ್, ಕೊಂಬಾರನ ಬಸಪ್ಪ, ಕುಂಟಿಕಾನ ಗಣಪತಿ, ಕಂಡಿ ಲಲಿತಾ, ನಡುವಟ್ಟಿರ ಗೀತಾ ಲಕ್ಷ್ಮಣ, ಕುಂಟುಪುಣಿ ಶೀಲ ರಮೇಶ್ ಇತರರಿದ್ದರು. 
ಕೊಡಗು

ಯುವಜನರಲ್ಲಿ ರಾಜಕೀಯ ಪ್ರಜ್ಞೆ ಬೆಳೆಯಲಿ

ನಾಪೋಕ್ಲು:

ವಿವಿಧ ಸಮುದಾಯಗಳು ಸಂಸ್ಕೃತಿ, ಸಂಪ್ರದಾಯ ಉಳಿಸಲು ಪ್ರಯತ್ನಿಸುವ ಜತೆಗೆ ಯುವ ಪೀಳಿಗೆಗೆ ನೈತಿಕ ಮಾರ್ಗದರ್ಶನ ಹಾಗೂ ರಾಜಕೀಯ ಜಾಗೃತಿ ಮೂಡಿಸಬೇಕಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ರಾಜ್ಯ ಒಕ್ಕಲಿಗ ಸಂಘದ ಮುಖಂಡರೂ ಆದ ಕೆ.ವಿ ಶ್ರೀಧರ್ ಆಶಯ ವ್ಯಕ್ತಪಡಿಸಿದರು.

ಮೈಸೂರಿನ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಆಟಿ ಗೌಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಮಗೆ ರಾಜಕೀಯ ಜಾಗೃತಿ ಇಲ್ಲದಿದ್ದರೆ ದೇಶ ಮತ್ತು ರಾಜ್ಯ ಅವನತಿಯ ಹಾದಿ ಹಿಡಿಯಲಿದೆ. ಆದ್ದರಿಂದ ಪಾಲಕರು ಯುವಜನತೆಯಲ್ಲಿ ರಾಜಕೀಯ ಜಾಗೃತಿ ಮೂಡಿಸಿ, ಉತ್ತಮ ನಾಯಕತ್ವ ರೂಪಿಸಿ ದೇಶಕ್ಕೆ ಕೊಡುಗೆ ನೀಡಿದಾಗ ಸಮಾಜ, ದೇಶದ ಭವಿಷ್ಯ ಉತ್ತಮವಾಗುತ್ತದೆ. ಆದ್ದರಿಂದ ಪ್ರತಿಯೊಂದು ಸಮುದಾಯಗಳು ಸಂಸ್ಕಾರದ ಮೂಲಕ ತಮ್ಮ ಯುವ ಜನಾಂಗದ ವ್ಯಕ್ತಿತ್ವ ರೂಪಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

ಮೈಸೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ಕೊಂಬಾರನ ಬಸಪ್ಪ ಮಾತನಾಡಿ, ಆಟಿ ತಿಂಗಳು ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಸಮುದಾಯದವರಿಗೆ ಬಹಳ ಪ್ರಮುಖ ತಿಂಗಳಾಗಿದೆ. ಈ ಸಂದರ್ಭದಲ್ಲಿ ಪ್ರಕೃತಿಯಲ್ಲಿ ಸಿಗುವ ಆಹಾರ ಪದಾರ್ಥ ಆರೋಗ್ಯ ವರ್ಧನೆಗೆ ಸಹಕಾರಿ. ಇಂತಹ ಆಹಾರಗಳು ಮೈಸೂರಿನಲ್ಲಿ ನೆಲೆಸಿರುವ ಸಮುದಾಯ ಬಾಂಧವರಿಗೂ ದೊರೆಯುವಂತಾಗಬೇಕು ಎನ್ನುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹಿರಿಯರಾದ ಕುಂಟಿಕಾನ ಗಣಪತಿ, ಹಾಗೂ ಕೂಡ ಕಂಡಿ ಲಲಿತಾ ಉದ್ಘಾಟಿಸಿದರು. ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಗೌಡ ಮಹಿಳಾ ಸಮಾಜದ ಅಧ್ಯಕ್ಷೆ ನಡುವಟ್ಟಿರ ಗೀತಾ ಲಕ್ಷ್ಮಣ, ಕಾರ್ಯದರ್ಶಿ ಕುಂಟುಪುಣಿ ಶೀಲ ರಮೇಶ್, ಕೊಡಗು ಗೌಡ ಸಮಾಜದ ಕಾರ್ಯದರ್ಶಿ ಪೊನ್ನೆಟಿ ನಂದಾ, ನಿರ್ದೇಶಕರಾದ ಪಟ್ಟಡ ಶಿವಕುಮಾರ್ ಚಪ್ಪೇರ ಯಮುನಾ ಇತರರಿದ್ದರು.

ಆಟಿ 18ರ ಪ್ರಯುಕ್ತ 18 ಮಳಿಗೆಗಳಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಟಿ ತಿಂಗಳಲ್ಲಿ ಬಳಸುವ ತಿಂಡಿ ತಿನಿಸುಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು. ಪ್ರತಿ ಮಳಿಗೆಯ ಮುಂದೆ ಗೌಡ ಸಮುದಾಯದ ಮದುವೆಯ ವಿವಿಧ ಶಾಸ್ತ್ರಗಳ ಚಿತ್ರ ಪ್ರದರ್ಶನ ಗಮನ ಸೆಳೆಯಿತು. ಕೂಗಲೆ ಹಿಟ್ಟು, ಸೂಸ ಲಿಟ್ಟು, ಪಾಪಿಟ್ಟು, ಕಡುಬಿಟ್ಟು, ಬಟ್ಲಿಟ್ಟು,ನೀರುದೋಸೆ, ಆಟಿ ಹಲ್ವಾ, ಕಣಿಲೆ, ಅಣಬೆ, ಹಂದಿ ಗೈಪು, ಕೋಳಿ ಸಾರು, ಮೀನು ಖಾದ್ಯ ಜನರು ಖರೀದಿಸಿ, ಸೇವಿಸಿ ಸಂಭ್ರಮಿಸಿದರು.