ಮದ್ಯ, ಮಾದಕ ವಸ್ತುಗಳ ಕುರಿತ ಜಾಗೃತಿ ಅಭಿಯಾನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಚಾಲನೆ ನೀಡಿದರು. 
ಕೊಡಗು

ಸ್ವಸ್ಥ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ

ಪ್ರಮುಖ ಮುಖ್ಯಾಂಶಗಳು

  • ಸ್ವಸ್ಥ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ
  • ಮದ್ಯ, ಮಾದಕ ವಸ್ತುಗಳ ಕುರಿತ ಜಾಗೃತಿ ಅಭಿಯಾನದಲ್ಲಿ ಬಿಂದುಮಣಿ
ಮಡಿಕೇರಿ: ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಘಟಕ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಮದ್ಯಪಾನ ಸಂಯಮ ಮಂಡಳಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ವತಿಯಿಂದ ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳ ಸೇವೆನೆಯಿಂದ ಉಂಟಾಗುವ ದುಷ್ಪರಿಣಾಮ ಕುರಿತು ಬುಧವಾರ ನಡೆದ ಬೀದಿ ನಾಟಕ ಮೂಲಕ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜನ್ಮ ಪಡೆದ ಮಕ್ಕಳೇ ತಂದೆ-ತಾಯಿ, ಸೋದರ-ಸೋದರಿಯನ್ನು ಹತ್ಯೆ ಮಾಡುವುದು ವರದಿಯಾಗಿದ್ದು, ಸಮಾಜ ಎತ್ತ ಸಾಗುತ್ತಿದೆ ಎಂಬ ಬಗ್ಗೆ ಅವಲೋಕನ ಮಾಡಬೇಕಿದೆ. ಯುವ ಜನರು ಗಾಂಜಾ, ಹೆರಾಯಿನಿ, ಅಫೀಮು ಮತ್ತಿತರ ಮಾದಕ ವಸ್ತುಗಳಿಗೆ ಒಳಗಾಗಿ, ಮಾನಸಿಕ ಒತ್ತಡಕ್ಕೆ ತುತ್ತಾಗಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ಯುವ ಜನರು ಮಾನಸಿಕ ಚಂಚಲತೆಗೆ ಒಳಗಾಗದೆ, ನೆಮ್ಮದಿಯಾಗಿ ಉತ್ತಮ ಬದುಕು ನಡೆಸಲು ಕುಟುಂಬದಲ್ಲಿ ನಿರ್ಮಲ ವಾತಾವರಣ ಇರಬೇಕು. ಕುಟುಂಬದಿಂದಲೇ ಒಳ್ಳೆಯ ವಾತಾವರಣ ಇದ್ದಲ್ಲಿ ಯುವಜನರು ಸರಿದಾರಿಯತ್ತ ಸಾಗಲು ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಚಿಸಬೇಕು ಎಂದು ಬಿಂದುಮಣಿ ಅವರು ಸಲಹೆ ಮಾಡಿದರು.
ಮಾದಕ ವಸ್ತುಗಳ ಉತ್ಪಾದನೆ ಮತ್ತು ಸೇವನೆ ಮಾಡುವುದು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು, ಮಾದಕ ವಸ್ತುಗಳ ಉತ್ಪಾದನೆ ಮತ್ತು ಸೇವನೆ ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತಾಗಬೇಕು ಅಥವಾ ೧೧೨ಗೆ ಕರೆ ಮಾಡುವಂತಾಗಬೇಕು. ಮಾಹಿತಿ ನೀಡಿರುವವರ ಹೆಸರು ಗೌಪ್ಯತೆ ಕಾಪಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಎ.ಜೆ.ಲೋಕೇಶ್ ಮಾತನಾಡಿ, ಆರೋಗ್ಯಯುತ ಸಮಾಜ ನಿರ್ಮಾಣದಿಂದ ಉತ್ತಮ ಬದುಕು ನಡೆಸಲು ಸಾಧ್ಯ. ಆ ದಿಸೆಯಲ್ಲಿ ಒಳ್ಳೆಯ ಚಿಂತನೆ, ಭವಿಷ್ಯದ ಗುರಿ ಮತ್ತು ಉದ್ದೇಶ ಇರಬೇಕು. ಮಾದಕ ವಸ್ತುಗಳ ಸೇವನೆಯಂತಹ ಕೆಟ್ಟ ಚಟಕ್ಕೆ ಬಲಿಯಾಗದೆ, ಸಮಾಜದಲ್ಲಿ ಇತರರಂತೆ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು. ನಶಾ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು ಕೋರಿದರು.
ಕಲಾವಿದ ಈ.ರಾಜು ಮತ್ತು ತಂಡದವರು ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ಕುರಿತು ಅರ್ಧ ಗಂಟೆ ಕಾಲ ಬೀದಿನಾಟಕ ಪ್ರದರ್ಶಿಸಿ ಗಮನ ಸೆಳೆದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎನ್ಪೋರ್ಸ್‌ಮೆಂಟ್ ಅಧಿಕಾರಿ ಡಾ.ಆನಂದ್, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಕಲಾ, ಡಿವೈಎಸ್‌ಪಿ ಐ.ಪಿ.ಮೇದಪ್ಪ, ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಚಂದ್ರಶೇಖರ್, ನಗರ ಇನ್ಸ್‌ಪೆಕ್ಟರ್ ಅನ್ನಪೂರ್ಣ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ಪ್ರೌಢಶಾಲೆಯ ಶಿಕ್ಷಕರು ಇತರರು ಇದ್ದರು.