ಕುಶಾಲನಗರ ಪಿ.ಎಂ.ಶ್ರೀ. ಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ವಿಶ್ವ ಪ್ರಕೃತಿ ಸಂರಕ್ಷಣಾ ದಿನಾಚರಣೆ ನಡೆಯಿತು. ಚಂದನ್ ಕುಮಾರ್, ಕೆ.ಎಸ್.ಸಣ್ಣಸ್ವಾಮಿ, ಟಿ.ಜಿ. ಪ್ರೇಮಕುಮಾರ್, ಕೆ.ಆರ್. ಶಿಲ್ಪ ಮತ್ತಿತರರು ಇದ್ದರು.
ನಮ್ಮ ಭವಿಷ್ಯದ ಪೀಳಿಗೆಗೆ ಅಮೂಲ್ಯ ಕೊಡುಗೆ ನೀಡುವ ನೈಸರ್ಗಿಕ ಸಂಪನ್ಮೂಲಗಳನ್ನು ಜವಾಬ್ದಾರಿಯಿಂದ ಬಳಸುವ ಮೂಲಕ ಮಾಲಿನ್ಯ ತಡೆಗಟ್ಟಿ ಸ್ವಚ್ಛ, ಸುಂದರ ಹಸಿರು ಭೂಮಿಯನ್ನು ನಿರ್ಮಾಣ ಮಾಡಲು ನಾವು ಸಂಕಲ್ಪ ತೊಡಬೇಕು ಎಂದು ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ ಟಿ.ಜಿ. ಪ್ರೇಮಕುಮಾರ್ ಹೇಳಿದರು. ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಕುಶಾಲನಗರ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ವಿಶ್ವ ಪ್ರಕೃತಿ ಸಂರಕ್ಷಣಾ ದಿನ 2026 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಂದಿನ ಉತ್ತಮ ಭವಿಷ್ಯಕ್ಕಾಗಿ ಪ್ರಕೃತಿಯನ್ನು ಉಳಿಸುವ ಮೂಲಕ ನಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬೇಕು. ಮಣ್ಣು, ನೀರು, ಅರಣ್ಯ, ವನ್ಯಜೀವಿಗಳು ಹಾಗೂ ಜೀವ- ವೈವಿಧ್ಯವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕ ಕೆ.ಎಸ್. ಸಣ್ಣಸ್ವಾಮಿ ಮಾತನಾಡಿ, ನಾವು ನಮ್ಮ ಸುತ್ತಲಿನ ಪರಿಸರದಲ್ಲಿ ಹೆಚ್ಚೆಚ್ಚು ಗಿಡ- ಮರಗಳನ್ನು ಬೆಳೆಸುವ ಮೂಲಕ ಪ್ರಕೃತಿಯನ್ನು ಸಂರಕ್ಷಿಸಲು ಪಣ ತೊಡಬೇಕು. ಮಾನವನ ಚಟುವಟಿಕೆಗಳಿಂದ ಪರಿಸರದಲ್ಲಿ ಉಂಟಾಗುವ ವಾಯು ಹಾಗೂ ಜಲ ಮಾಲಿನ್ಯವನ್ನು ತಡೆಗಟ್ಟುವ ಮೂಲಕ ಉತ್ತಮ ಹಾಗೂ ಸುಂದರ ಪರಿಸರ ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿ.ಎಸ್. ಚಂದನ್ ಕುಮಾರ್ ಮಾತನಾಡಿ, ನಾವು ನಮ್ಮ ನಿತ್ಯ ಜೀವನದಲ್ಲಿ ಉತ್ತಮ ಹಾಗೂ ಪರಿಸರ ಸ್ನೇಹಿ
ಜೀವನಶೈಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಪರಿಸರ ಸಂರಕ್ಷಣೆಗೆ ಕಟಿಬದ್ಧರಾಗಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಕೆ.ಆರ್. ಶಿಲ್ಪ, ವಿದ್ಯಾರ್ಥಿಗಳು ತಮ್ಮನ್ನು ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಗೈಡ್ಸ್ ಕ್ಯಾಪ್ಟನ್ ಪಿ.ಪಿ. ಭವ್ಯ, ಶಿಕ್ಷಕಿಯರಾದ ಎಂ.ಎA. ಭಾರತಿ, ಕೆ.ಭಾಗ್ಯಮ್ಮ, ಎಸ್.ಡಿ.ಎಂ.ಸಿ. ಸದಸ್ಯರಾದ ನಂಜಪ್ಪ, ಬಸವರಾಜು, ರೇಣುಕಾ ಮಂಜುನಾಥ್, ರಾಜು, ಮುಶೀರ್, ರೀನಾ, ಪೋಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಇದೇ ವೇಳೆಯಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಶಾಲಾ ವಿದ್ಯಾರ್ಥಿಗಳಾದ ಎ. ಇಶಾನ್ ಮತ್ತು ಆರ್. ಅನಿತಾ ಶಾಲಾವರಣದಲ್ಲಿ ಗಿಡನೆಟ್ಟು ಸಂಭ್ರಮಿಸಿದರು. ಮಕ್ಕಳು ಪರಿಸರ ಸಂರಕ್ಷಣೆಗೆ ಸಂಬAಧಿಸಿದ ವಿವಿಧ ಪರಿಸರ ಘೋಷಣೆಗಳುಳ್ಳ ಭಿತ್ತಿಫಲಕಗಳನ್ನು ಹಿಡಿದು ಪರಿಸರ ಜಾಗೃತಿ ಮೂಡಿಸಿದರು. ಪರಿಸರ ಸಂರಕ್ಷಣೆ, ನೆಲ- ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ, ನೈಸರ್ಗಿಕ ಸಂಪನ್ಮೂಲ ಸಂರಕ್ಷಿಸಿ , ಭೂಮಿಯನ್ನು ಉಳಿಸಿ, ಪರಿಸರ- ಪ್ರಕೃತಿ ಸಂರಕ್ಷಿಸಿ ಉತ್ತಮ ಜೀವನ ಕಂಡುಕೊಳ್ಳಿ, ಜಲವೇ ಜೀವಜಲ ಎಂಬಿತ್ಯಾದಿ ಘೋಷಣೆಗಳನ್ನು ಪ್ರಚುರಪಡಿಸಿದ ವಿದ್ಯಾರ್ಥಿಗಳು ಪರಿಸರ ಜಾಗೃತಿ ಮೂಡಿಸಿದರು.