ಪಾಲಿಬೆಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಮಾದಕ ವಸ್ತು ದುರುಪಯೋಗ ತಡೆಗಟ್ಟುವ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅರಿವು ಮೂಡಿಸಲಾಯಿತು.
ಸಿದ್ದಾಪುರ: ಯುವ ಸಮೂಹವು ಮಾದಕ ವಸ್ತುಗಳ ದುಷ್ಪರಿಣಾಮಗಳನ್ನು ಅರಿತು, ಅವುಗಳಿಂದ ಸಂಪೂರ್ಣ ದೂರವಿರಬೇಕು ಎಂದು ಪಾಲಿಬೆಟ್ಟ ಪೊಲೀಸ್ ಉಪಠಾಣೆಯ ಎಎಸ್‌ಐ ಶ್ರೀನಿವಾಸ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪಾಲಿಬೆಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಮಾದಕ ವಸ್ತು ದುರುಪಯೋಗ ತಡೆಗಟ್ಟುವ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳ ಸೇವನೆಯಿಂದ ದೈಹಿಕ ಆರೋಗ್ಯ ಹದಗೆಡುವುದರ ಜತೆಗೆ ವಿವಿಧ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಕುಟುಂಬದಲ್ಲಿ ಕಲಹ, ಮಾನಸಿಕ ನೆಮ್ಮದಿ ಕಳೆದುಕೊಳ್ಳುವುದು ಹಾಗೂ ಭವಿಷ್ಯ ಹಾಳಾಗುವಂತಹ ದುಷ್ಪರಿಣಾಮಗಳು ಎದುರಾಗುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ರೀತಿಯ ಮಾದಕ ವಸ್ತುಗಳ ಆಮಿಷಕ್ಕೆ ಒಳಗಾಗಬಾರದು ಎಂದು ಸಲಹೆ ನೀಡಿದರು.
ಪೊಲೀಸ್ ಸಿಬ್ಬಂದಿ ಅಲೀಬ್ ಹಾಗೂ ಸಜಿತ್ ಮಾದಕ ವಸ್ತುಗಳ ದುಷ್ಪರಿಣಾಮಗಳು ಮತ್ತು ಅವುಗಳಿಂದ ದೂರವಿರುವ ಅಗತ್ಯದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಮುಖ್ಯ ಶಿಕ್ಷಕ ಅಶ್ರಫ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಪಿರಿಯಾಪಟ್ಟಣದ ಶಾಲೆಯ ಶಿಕ್ಷಕರಾಗಿರುವ ಮಂಜುನಾಥ್ ಅವರು ಶಾಲೆಯ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿದ ಕ್ರೀಡಾ ಸಮವಸ್ತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಮತಾ ಕಾಮತ್, ನಯನಕುಮಾರಿ, ಮದನ್ ಕುಮಾರ್, ಆಶಾ ಮೋಹನ್, ಆರತಿ ಎಸ್.ಪಿ., ಆರತಿ ಬಿ.ಎಸ್., ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.