ಸುಂಟಿಕೊಪ್ಪ ಬಳಿಯ ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಚೇತನ್ ಉಪನ್ಯಾಸ ನೀಡಿದರು. ಸೋಮಯ್ಯ, ಟಿ.ಜಿ.ಪ್ರೇಮಕುಮಾರ್, ಅಬ್ದುಲ್ ರಜಾಕ್, ಕೆ.ಎಂ.ರಮೇಶ್, ರಾಧಾಕೃಷ್ಣ ಇದ್ದರು. 
ಕೊಡಗು

ನಶಾಮುಕ್ತ ಭಾರತಕ್ಕೆ ಯುವಸಮೂಹ ಕೈಜೋಡಿಸಲಿ

ಪ್ರಮುಖ ಮುಖ್ಯಾಂಶಗಳು

  • ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎನ್.ಪಿ.ಚೇತನ್ ಹೇಳಿಕೆ
ಸುಂಟಿಕೊಪ್ಪ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವುದರ ಜತೆಗೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವ ಮೂಲಕ ನಶಾಮುಕ್ತ ಭಾರತ ನಿರ್ಮಾಣಕ್ಕೆ ಪಣತೊಡಬೇಕೆಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮಡಿಕೇರಿ ಉಪ ನಿರೀಕ್ಷಕ ಎನ್.ಪಿ.ಚೇತನ್ ಸಲಹೆ ನೀಡಿದರು.

ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹೋಬಳಿಯ ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘ, ಇಕೋ ಕ್ಲಬ್ ಹಾಗೂ ಸಮಾಜ ವಿಜ್ಞಾನ ಸಂಘದ ಸಹಯೋಗದಲ್ಲಿ ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವಿಕೆ ಕುರಿತು ಆಯೋಜಿಸಿದ್ದ ಜಾಗೃತಿ ಆಂದೋಲನದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಮಾದಕ ವಸ್ತುಗಳು ವ್ಯಕ್ತಿಯ ದೈಹಿಕ, ಮಾನಸಿಕ ಆರೋಗ್ಯವನ್ನು ನಾಶಪಡಿಸುವುದಲ್ಲದೆ, ಕುಟುಂಬ ಮತ್ತು ಸಮಾಜದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಯುವ ಸಮೂಹವನ್ನು ಮಾದಕ ವಸ್ತುಗಳಿಂದ ರಕ್ಷಿಸುವುದು ಅವಶ್ಯಕ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಲೆ ಮುಖ್ಯ ಶಿಕ್ಷಕ ಸೋಮಯ್ಯ ಮಾತನಾಡಿ, ಯುವ ಪೀಳಿಗೆ ದಿನೇ ದಿನೆ ಮಾದಕ ವ್ಯಸನಿಗಳಾಗುತ್ತಿರುವುದು ಕಳವಳಕಾರಿ ಎಂದರು.

ನಶಾಮುಕ್ತ ಭಾರತ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಸಂಕಲ್ಪ ಕುರಿತು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷ ಅಬ್ದುಲ್ ರಜಾಕ್, ಪ್ರಧಾನ ಕಾರ್ಯದರ್ಶಿ ಕೆ.ಎಂ.ರಮೇಶ್ ಮಾತನಾಡಿದರು. ಸೋಮವಾರಪೇಟೆ ತಾಲೂಕು ಅಧ್ಯಕ್ಷ ಡೆನ್ಜಿಲ್ ವರ್ಗೀಸ್, ಎಸ್‌ಡಿಎಂಸಿ ಅಧ್ಯಕ್ಷ ಎಚ್.ಪಿ.ಸೈದಾಲವಿ, ಇಕೋ ಕ್ಲಬ್ನ ಉಸ್ತುವಾರಿ ಶಿಕ್ಷಕಿ ಡಿ.ಯು.ಬಿಂದುಕುಮಾರಿ, ಶಿಕ್ಷಕರಾದ ಕೆ.ಬಿ.ರಾಧಾಕೃಷ್ಣ, ಪಿ.ಎಚ್.ರಜಿಯಾ, ಆರ್.ಯಶೋರಾಣಿ, ಕೆ.ಎಚ್.ಗಾಯಿತ್ರಿ, ಅತಿಥಿ ಶಿಕ್ಷಕರಾದ ಎನ್.ಪಿ.ವಾಣಿಶ್ರೀ , ಪಿ ಆರ್.ವಿಮಲಾ ಇದ್ದರು.

ಮಕ್ಕಳಿಂದ ರೂಪಕ ಪ್ರದರ್ಶನ: ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳು ಕುರಿತು ಶಾಲೆ ಶಿಕ್ಷಕಿ ಆರ್. ಯಶೋರಾಣಿ ಅವರು ರೂಪಿಸಿದ ರೂಪಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ ಗಮನ ಸೆಳೆದರು.