ವಿರಾಜಪೇಟೆ ತಾಲೂಕು ಕಚೇರಿಯ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಪ್ರದೀಪ್ ಕುಮಾರ್, ಪ್ರವೀಣ್, ನಾಚಪ್ಪ, ಶಶಿ ಅಚ್ಚಪ್ಪ, ತೃಪ್ತಿ, ಶಾಂತಿ ಭೂಷಣ್, ಮಹೇಶ್ ಕುಮಾರ್, ಮದಲೈ ಮುತ್ತು ಇದ್ದರು.
- ತಹಸೀಲ್ದಾರ್ ಪ್ರವೀಣ್ ಕುಮಾರ್ ಕರೆ
- ವನಮಹೋತ್ಸವ ಕಾರ್ಯಕ್ರಮ
ವಿರಾಜಪೇಟೆ : ಪರಿಸರ ಸ್ವಚ್ಛತೆಯ ಪರಿಪಾಠ ಮನೆಯಿಂದಲೇ ಆರಂಭವಾಗಬೇಕು. ಮನೆಗಳಿಂದ ಜಾಗೃತಿ ಆರಂಭವಾದರೆ ಪರಿಸರ ಸಂರಕ್ಷಣೆ ಸಾಧ್ಯ ಎಂದು ವಿರಾಜಪೇಟೆ ತಹಸೀಲ್ದಾರ್ ಪ್ರವೀಣ್ ಕುಮಾರ್ ಅಭಿಪ್ರಾಯಪಟ್ಟರು.
ವಿರಾಜಪೇಟೆಯ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ, ವಿರಾಜಪೇಟೆ ಪತ್ರಕರ್ತರ ವೇದಿಕೆ, ಪಟ್ಟಣದ ಸೇಂಟ್ ಆನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕ, ಯುವ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲರೂ ಮನೆಗಳಲ್ಲಿ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಬೇಕು. ಮನೆ ಹಾಗೂ ಸುತ್ತ ಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಡಬೇಕು. ಮನೆಯಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿದಾಗ ಸಮಾಜದಲ್ಲಿಯೂ ಸ್ವಚ್ಛ ಪರಿಸರದ ನಿರ್ಮಾಣ ಸಾಧ್ಯ ಎಂದರು. ಜತೆಗೆ ಪರಿಸರ ಸಂರಕ್ಷಣೆಯಲ್ಲಿ ಗಿಡಗಳನ್ನು ನೆಟ್ಟು ಅದನ್ನು ಪೋಷಿಸುವ ಮಹತ್ವ ತಿಳಿಸಿದರು.
ವಿರಾಜಪೇಟೆ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್ ಮಾತನಾಡಿ, ಗಿಡಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸುವಲ್ಲಿ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳ ಪಾತ್ರ ಅಪಾರವಾಗಿದೆ. ಮರಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಪ್ರತಿಯೊಬ್ಬರೂ ಗಿಡಗಳನ್ನು ನೆಡಲು ಮನಸ್ಸು ಮಾಡಿದರೆ ಪರಿಸರ ಸ್ವಚ್ಛವಾಗಿರುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗಿಡ ನೆಡುವ ಕಾರ್ಯಕ್ರಮಕ್ಕೆ ಮುಂದಾಗಿರುವುದು ಪ್ರಶಂಸನೀಯ ಎಂದರು.
ಸೇಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ರೆ.ಫಾ.ಮದಲೈ ಮುತ್ತು ಮಾತನಾಡಿ, ನಾವು ಭೂಮಿಯನ್ನು ರಕ್ಷಿಸಿದರೆ ಭೂ ತಾಯಿ ನಮ್ಮನ್ನು ರಕ್ಷಿಸುತ್ತಾಳೆ. ಭೂಮಿ ಹಾಗೂ ಪರಿಸರವು ಕಲುಷಿತವಾಗದ ರೀತಿ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವನಮಹೋತ್ಸವದಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ಹೇಳಿದರು.
ವಿರಾಜಪೇಟೆ ಪುರಸಭೆಯ ಮುಖ್ಯಾಧಿಕಾರಿ ಪಿ.ಕೆ.ನಾಚಪ್ಪ ಮಾತನಾಡಿ, ವಿರಾಜಪೇಟೆ ನಗರಾದ್ಯಂತ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಹಲವಾರು ಕ್ರಮಗಳನ್ನು ಪುರಸಭೆಯು ಕೈಗೊಂಡಿದೆ. ಕಂಡ ಕಂಡಲ್ಲಿ ಕಸ ಹಾಗೂ ಪ್ಲಾಸ್ಟಿಕ್ ಎಸೆಯುವುದನ್ನು ಜನರು ನಿಲ್ಲಿಸಬೇಕು ಎಂದರು.
ಸೇಂಟ್ ಆನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಅಧಿಕಾರಿ ಬಿ.ಎನ್.ಶಾಂತಿಭೂಷಣ್, ಗ್ರೇಡ್ 2 ತಹಸೀಲ್ದಾರ್ ಪ್ರದೀಪ್ ಕುಮಾರ್, ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಚಾಲಕಿ ಹೇಮಾ, ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ವಿಲೀನ ಗೋನ್ಸಾಲ್ವೆಸ್, ಆಪ್ತಬ್, ಮಹಮದ್ ನಯಾಜ್, ಮಾಚಯ್ಯ ಸುಬ್ರಮಣಿ, ಮಂಜುನಾಥ್, ತಾಲೂಕು ಕಚೇರಿಯ ಅಧಿಕಾರಿಗಳು ಇತರರು ಇದ್ದರು.