ನಾಪೋಕ್ಲುವಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರವೇ (ಪ್ರವೀಣ್ ಶೆಟ್ಟಿ ಬಣ)ಹೋಬಳಿ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
- ನಾಪೋಕ್ಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ ಆಶಯ
ನಾಪೋಕ್ಲು : ಸಮೀಪದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ನಾಪೋಕ್ಲು ಹೋಬಳಿ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕರವೇ ಮಡಿಕೇರಿ ತಾಲೂಕು ಅಧ್ಯಕ್ಷ ವಿನೋದ್ ಅಧ್ಯಕ್ಷತೆ ವಹಿಸಿದ್ದರು. ನಾಪೋಕ್ಲು ಹೋಬಳಿ ಘಟಕದ ನೂತನ ಅಧ್ಯಕ್ಷರಾಗಿ ಅನೀಫ್, ಉಪಾಧ್ಯಕ್ಷರಾಗಿ ಮಿಥುನ್, ಪ್ರಧಾನ ಕಾರ್ಯದರ್ಶಿಯಾಗಿ ರಜಾಕ್ ಅವರನ್ನು ಜಿಲ್ಲಾಧ್ಯಕ್ಷ ದೀಪಕ್ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.
ನಾಪೋಕ್ಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ ಮಾತನಾಡಿ, ಜನಸಾಮಾನ್ಯರು ಮತ್ತು ಸರ್ಕಾರದ ಕೊಂಡಿಯಾಗಿ ಸಂಘಟನೆಗಳು ಕಾರ್ಯ ನಿರ್ವಹಿಸಬೇಕು. ನಾಡು-ನುಡಿಯ ಪರವಾಗಿ ಮತ್ತು ಜನಸಾಮಾನ್ಯರ ಪರವಾಗಿ ಕೆಲಸ ಮಾಡಲು ಅಧಿಕಾರಿ ವರ್ಗವೂ ಸದಾ ಸಿದ್ಧವಿದ್ದು, ಶಾಂತಿಯಿಂದ ಎಲ್ಲವೂ ಸಾಧ್ಯ ಎಂದು ಕಿವಿಮಾತು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ್ ಮಾತನಾಡಿ, ಸಂಘಟನೆ ಮೂರು ದಶಕಗಳಿಂದ ನೊಂದವರ ಪರವಾಗಿ, ಶೋಷಿತರ ದನಿಯಾಗಿ ರಾಜ್ಯಾದ್ಯಂತ ಕಾರ್ಯ ನಿರ್ವಹಿಸುತ್ತಿದೆ. ಜವಾಬ್ದಾರಿ ಅರಿತು ಎಲ್ಲರೂ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಯುವ ಘಟಕದ ಅಧ್ಯಕ್ಷ ವಸಂತ ಆಚಾರ್ಯ ಮಾತನಾಡಿ, ಕೊಡಗು ಜಿಲ್ಲಾ ಯುವ ಘಟಕ ಸಾಮಾಜಿಕ ಹೋರಾಟಗಳಲ್ಲಿ ಸದಾ ಜತೆಯಾಗಿರಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್, ಮಡಿಕೇರಿ ತಾಲೂಕು ಗೌರವಾಧ್ಯಕ್ಷ ಪ್ರದೀಪ್ ಕರ್ಕೆರ, ಮೂರ್ನಾಡು ಅಧ್ಯಕ್ಷ ಅಭುಬಕ್ಕರ್, ಮಡಿಕೇರಿ ಉಪಾಧ್ಯಕ್ಷ ಚೇತೂ, ಸೋಮವಾರಪೇಟೆ ಯುವ ಘಟಕದ ಅಧ್ಯಕ್ಷ ಗಣೇಶ್‌ಗೌಡ , ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ವೆಂಕಟೇಶ್, ಮೂರ್ನಾಡು ಕಾರ್ಯದರ್ಶಿ ರಾಶಿಕ್ ಉತ್ತಪ್ಪ, ಗೌರವಾಧ್ಯಕ್ಷ ಭೀಮಯ್ಯ, ಉಪಾಧ್ಯಕ್ಷ ರಿಯಾಜ್, ಇತರರು ಭಾಗವಹಿಸಿದ್ದರು.