ಸೋಮವಾರಪೇಟೆಯಲ್ಲಿ ಹಿಂದೂಸ್ಥಾನ್ ಫುಟ್ಬಾಲ್ ಸಂಸ್ಥೆ ಆಯೋಜಿಸಿದ್ದ ಲೆಜೆಂಡ್ ಫುಟ್ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಪಡೆದ ಹೊಯ್ಸಳ ತಂಡ.
ಸೋಮವಾರಪೇಟೆ: ಹಿಂದೂಸ್ಥಾನ್ ಫುಟ್ಬಾಲ್ ಕ್ಲಬ್ ಸಹಯೋಗದಲ್ಲಿ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇತ್ತೀಚೆಗೆ ನಡೆದ ಲೆಜೆಂಡ್ ಫುಟ್ಬಾಲ್ ಟೂರ್ನಿಯಲ್ಲಿ ಹಾಸನದ ಹೊಯ್ಸಳ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಹೊಯ್ಸಳ ತಂಡ ಪ್ರಶಸ್ತಿ ಜತೆಗೆ 50 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ಪಡೆಯಿತು. ಸೋಮವಾರಪೇಟೆ ಹಿಂದೂಸ್ಥಾನ್ ಫುಟ್ಬಾಲ್ ಕ್ಲಬ್ ದ್ವಿತೀಯ ಸ್ಥಾನದೊಂದಿಗೆ 30 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ಪಡೆಯಿತು. ಬೆಸ್ಟ್ ಗೋಲ್ ಕೀಪರ್ ಸುಂಟಿಕೊಪ್ಪ ತಂಡದ ಜಬ್ಬರ್, ಬೆಸ್ಟ್ ಸ್ಕೋರರ್ ಹೊಯ್ಸಳ ತಂಡದ ಹರೀಶ್, ಸರಣಿ ಪುರುಷೋತ್ತಮರಾಗಿ ವೇಣುಗೋಪಾಲ್ ಹಾಗೂ ಹಿರಿಯ ಆಟಗಾರ ಬಿ.ಎಸ್.ಯತೀಶ್ ಪ್ರಶಸ್ತಿ ಪಡೆದರು.
ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಬಹುಮಾನ ವಿತರಿಸಿದರು. ರಾಷ್ಟ್ರೀಯ ಫುಟ್ಬಾಲ್ ತಂಡದ ಮಾಜಿ ಆಟಗಾರ್ತಿ ಪದ್ಮಾಪ್ರಿಯಾ, ಉದ್ಯಮಿಗಳಾದ ಹರಪಳ್ಳಿ ರವೀಂದ್ರ, ಬಾಲಕೃಷ್ಣ ನಂಬಿಯಾರ್, ಕಿರಗಂದೂರು ಪದ್ಮನಾಭ, ಚಕ್ರವರ್ತಿ ಸುರೇಶ್, ಕ್ರಿಯೇಟಿವ್ ಅಕಾಡೆಮಿ ಮಹೇಶ್, ಪ್ರದೀಪ್ ನೇಗಳ್ಳೆ, ಯಡೂರು ಚಂದ್ರ, ಪಿಡಿಒ ತಮ್ಮಯ್ಯ, ಗುತ್ತಿಗೆದಾರ ಸತೀಶ್, ಗಿರಿಧರ್ ಆಚಾರ್ಯ ಇದ್ದರು.