ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕೈಕೇರಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಕಾಳೇಗೌಡ ಮಾತನಾಡಿದರು. ವೆಂಕಟೇಶ್, ಗಿರೀಶ್ ಪೂವಣ್ಣ ಇತರರಿದ್ದರು.
- ಪ್ರತಿಯೊಬ್ಬರಿಗೂ ಕಾನೂನು ಅರಿವು ಅಗತ್ಯ
ಗೋಣಿಕೊಪ್ಪ: ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಪ್ರತಿಯೊಬ್ಬ ನಾಗರಿಕರೂ ಕಾನೂನುಗಳ ಬಗ್ಗೆ ಕನಿಷ್ಠ ಮಟ್ಟದ ಅರಿವು ಹೊಂದಿರುವುದು ಅಗತ್ಯ ಎಂದು ಗೋಣಿಕೊಪ್ಪ ಪೊಲೀಸ್ ಠಾಣೆಯ ಠಾಣಾಧಿಕಾರಿ ಕಾಳೇಗೌಡ ಹೇಳಿದರು.
ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕೈಕೇರಿ ಗ್ರಾಮದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕಳ್ಳತನ, ಅಕ್ರಮ ಚಟುವಟಿಕೆಗಳು, ಸೈಬರ್ ಅಪರಾಧಗಳು, ಸಂಚಾರ ನಿಯಮಗಳ ಪಾಲನೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಯ ಪ್ರಮುಖ ಅಂಶಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಸಂದೇಹಾಸ್ಪದ ವ್ಯಕ್ತಿಗಳು ಅಥವಾ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹದಂತಹ ಪ್ರಕರಣಗಳನ್ನು ಮುಚ್ಚಿಡದೆ ಸಂಬಂಧಿತ ಇಲಾಖೆಗೆ ಅಥವಾ ಪೊಲೀಸರಿಗೆ ತಿಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು, ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳು ಮತ್ತು ಅಹವಾಲುಗಳನ್ನು ಆಲಿಸಿ, ಪೊಲೀಸ್ ಇಲಾಖೆ ಸದಾ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಸಮಸ್ಯೆ ಎದುರಾದರೂ ನಿರ್ಭಯವಾಗಿ ಪೊಲೀಸರನ್ನು ಸಂಪರ್ಕಿಸುವಂತೆ ಕಾಳೇಗೌಡ ಮನವಿ ಮಾಡಿದರು. ಈ ಸಂದರ್ಭದ ಅಪರಾಧ ವಿಭಾಗದ ಉಪನಿರೀಕ್ಷಕ ವೆಂಕಟೇಶ್, ಗ್ರಾಮದ ಪ್ರಮುಖರುಗಳಾದ ಕುಪ್ಪಂಡ ಗಿರೀಶ್ ಪೂವಣ್ಣ, ಚೀಯಕ್‌ಪೂವಂಡ ಸುಬ್ರಮಣಿ, ಸಾಬು, ಜಮ್ಮಡ ಹ್ಯಾರಿ, ಜಮ್ಮಡ ನಾಣಯ್ಯ, ಜಮ್ಮಡ ನಿಖಿಲ್ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.