ಕುಶಾಲನಗರ ಪುರಸಭೆ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಆರ್.ಗುಂಡೂರಾವ್ ಅವರ ಕಂಚಿನ ಪ್ರತಿಮೆ ಸ್ಥಾಪನೆ ಕಾಮಗಾರಿಗೆ ಡಾ.ಮಂತರ್ ಗೌಡ ಅವರು ಭೂಮಿಪೂಜೆ ನೆರವೇರಿಸಿದರು. ಶಶಿಧರ್, ನಾಗೇಂದ್ರಬಾಬು, ಗಿರೀಶ್ ಇತರರಿದ್ದರು. 
ಕೊಡಗು

ಸಾಧನೆಗಳ ಸ್ಮರಿಸಲು ಪ್ರತಿಮೆಗಳ ಸ್ಥಾಪನೆ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಸಾಧನೆಗಳ ಸ್ಮರಿಸಲು ಪ್ರತಿಮೆಗಳ ಸ್ಥಾಪನೆ ಅಗತ್ಯ
  • ದಿವಂಗತ ಆರ್.ಗುಂಡೂರಾಯರ ಪುತ್ತಳಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಂತರ್‌ಗೌಡ

ಕುಶಾಲನಗರ: ಸಮಾಜದಲ್ಲಿ ಅಧಿಕಾರಕ್ಕೆ ಅನೇಕರು ಬಂದು ಹೋಗುತ್ತಾರೆ. ಆದರೆ ಅವರು ಮಾಡಿದ ಸಾಧನೆಗಳನ್ನು ಶಾಶ್ವತವಾಗಿ ಉಳಿಸಲು ಪ್ರತಿಮೆ ಸ್ಥಾಪನೆ ಅವಶ್ಯಕ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಹೇಳಿದರು.

ಕುಶಾಲನಗರ ಪುರಸಭೆ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಆರ್.ಗುಂಡೂರಾವ್ ಅವರ ಕಂಚಿನ ಪ್ರತಿಮೆ ಸ್ಥಾಪನೆ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಹಾನ್ ವ್ಯಕ್ತಿಗಳ ಪ್ರತಿಮೆಗಳು ಮುಂದಿನ ತಲೆಮಾರಿನ ಯುವಜನತೆಗೆ ಪ್ರೇರಣೆಯಾಗುತ್ತವೆ. ಬಹಳ ವರ್ಷಗಳ ಬೇಡಿಕೆಯಾಗಿದ್ದ ಗುಂಡೂರಾವ್ ಅವರ ಪ್ರತಿಮೆ ಪ್ರತಿಷ್ಠಾಪಿಸುವ ಸುವರ್ಣಾವಕಾಶ ನನ್ನ ಅವಧಿಯಲ್ಲಿ ಸಿಕ್ಕಿದೆ. ಸಾರ್ವಜನಿಕರು, ಸಂಘ-ಸಂಸ್ಥೆಗಳು ಮತ್ತು ಅಭಿಮಾನಿಗಳ ಸಹಕಾರದಿಂದ ಮೊದಲ ಹಂತದಲ್ಲಿ ರೂ.೧೭.೫೦ ಲಕ್ಷ ವೆಚ್ಚದಲ್ಲಿ ಅಡಿಪಾಯ ಹಾಗೂ ವೇದಿಕೆ ನಿರ್ಮಾಣಕ್ಕೆ ಭೂಮಿಪೂಜೆ ನಡೆಸಲಾಗಿದೆ ಎಂದರು.
೧೯೬೦ರ ನಂತರ ಗ್ರಾಮ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿ ಮುಖ್ಯಮಂತ್ರಿ ಹುದ್ದೆಗೇರಿದ ಗುಂಡೂರಾವ್, ಕುಶಾಲನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರು. ಅವರ ಅವಧಿಯಲ್ಲಿ ಕುಶಾಲನಗರ ಸುತ್ತ ೨೫೦ ಎಕರೆ ಕೈಗಾರಿಕಾ ಪ್ರದೇಶದಲ್ಲಿ ೭೦ಕ್ಕೂ ಹೆಚ್ಚು ಕಾಫಿ ಉದ್ದಿಮೆಗಳು ಸೇರಿದಂತೆ ಹಲವು ಕಂಪನಿಗಳ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟು ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿದರು. ಅಂತಹ ಮಹಾನ್ ಚೇತನವನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದಲ್ಲಿ ಹುಟ್ಟಿ ಮುಖ್ಯಮಂತ್ರಿಯಾದ ಗುಂಡೂರಾವ್ ದೂರದೃಷ್ಟಿಯ ನಾಯಕರಾಗಿದ್ದರು. ಆರೋಗ್ಯ, ಶಿಕ್ಷಣ, ಕುಡಿಯುವ ನೀರಿನ ೨ನೇ ಹಂತದ ಯೋಜನೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಒಳಚರಂಡಿ, ಪ್ರಥಮ ದರ್ಜೆ ಕಾಲೇಜು ಸ್ಥಾಪನೆ ಮೂಲಕ ಕುಶಾಲನಗರ ಇಂದು ಪುರಸಭೆಯಾಗಿ, ವ್ಯಾಪಾರ ಮತ್ತು ಪ್ರವಾಸಿ ಕೇಂದ್ರವಾಗಿ ಬೆಳೆಯಲು ಕಾರಣರಾದರು. ಇಚ್ಛಾಶಕ್ತಿ ಕೊರತೆಯಿಂದ ಇಷ್ಟು ವರ್ಷ ಪ್ರತಿಮೆ ಸ್ಥಾಪನೆ ಸಾಧ್ಯವಾಗಿರಲಿಲ್ಲ. ಈಗ ಶಾಸಕರ ಇಚ್ಛಾಶಕ್ತಿಯಿಂದ ಸಾಧ್ಯವಾಗುತ್ತಿರುವುದು ಸಂತಸದ ಸಂಗತಿ ಎಂದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರಬಾಬು ಮಾತನಾಡಿ, ಆರ್.ಗುಂಡೂರಾಯರಿಗೆ ಪ್ರತಿಮೆ ಸ್ಥಾಪನೆ ಎಂಬುದು ಅವರ ಮೇಲಿನ ಅಭಿಮಾನ ಮತ್ತು ಅವರ ಸಾಧನೆಯ ದ್ಯೋತಕವಾಗಿ ಭವಿಷ್ಯದ ಜನಾಂಗಕ್ಕೆ ಪ್ರೇರಣೆಯಾಗಲಿದೆ. ಅವರ ಕಾಲದಲ್ಲಿ ಹಾಕಿಕೊಟ್ಟ ಅನೇಕ ಯೋಜನೆಗಳು ಕುಶಾಲನಗರ ಇಂದು ಭವ್ಯವಾಗಿ ಬೆಳೆಯಲು ಕಾರಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯರಾದ ವಿ.ಎನ್.ವಸಂತಕುಮಾರ್, ನಿವೃತ್ತ ಶಿಕ್ಷಕ ನಜೀರ್ ಅಹ್ಮದ್, ಪುರಸಭೆ ಮುಖ್ಯಾಧಿಕಾರಿ ಗಿರೀಶ್, ಫಜಲ್ ವುಲ್ಲಾ, ಮಂಜುನಾಥ ಗುಂಡೂರಾವ್, ವಿಕ್ಟರ್ ಸೋಹನ್, ಆರೋಗ್ಯಾಧಿಕಾರಿ ಉದಯಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.