ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಖಂಡಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಮಡಿಕೇರಿ ಬಾರ್ ಅಸೋಸಿಯೇಷನ್ ಸದಸ್ಯರು ಬೆಂಬಲ ಸೂಚಿಸಿ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದರು. ಸಿ.ಟಿ. ಜೋಸೆಫ್, ಸಂಜಯ್ ರಾಜ್, ಕಾರ್ಯದರ್ಶಿ ಪವನ್ ಪೆಮ್ಮಯ್ಯ, ಜಂಟಿ ಕಾರ್ಯದರ್ಶಿ ರಾಜೇಶ್, ಪದಾಧಿಕಾರಿಗಳಾದ ಸುನಿಲ್ ಜೆ. ಪತ್ರಾವೋ, ದುಗ್ಗಳ ಕಪಿಲ್, ಭಾನುಪ್ರಕಾಶ್ ಮತ್ತಿತರರು ಇದ್ದರು 
ಕೊಡಗು

ಬಂದ್‌ಗೆ ಜಿಲ್ಲೆಯಲ್ಲಿ ನಿರಸ ಪ್ರತಿಕ್ರಿಯೆ

ಮಡಿಕೇರಿ:

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ನಿರಂತರ ಅನ್ಯಾಯ ಖಂಡಿಸಿ ಕನ್ನಡಪರ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಮಡಿಕೇರಿ ಬಾರ್ ಅಸೋಸಿಯೇಷನ್ ಬೆಂಬಲ ಸೂಚಿಸಿ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದರು. ಉಳಿದಂತೆ ಬಂದ್‌ಗೆ ಜಿಲ್ಲೆಯಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಜನಜೀವನ ಎಂದಿನಂತೆ ಇತ್ತು.

ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಸಿ.ಟಿ.ಜೋಸೆಫ್ ನೇತೃತ್ವದಲ್ಲಿ ನ್ಯಾಯಾಲಯದ ಎದುರು ಪ್ರತಿಭಟನೆ ನಡೆಸಿದ ವಕೀಲರು, ನಮಗೇ ಇಲ್ಲಿ ಕುಡಿಯಲು ಸರಿಯಾಗಿ ನೀರಿಲ್ಲ, ಹೀಗಿರುವಾಗ ತಮಿಳುನಾಡಿಗೆ ನೀರು ಹೇಗೆ ಬಿಡುವುದು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆ ಸರ್ಕಾರ ಮತ್ತು ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು. ನಾಡಿನ ಜೀವನದಿ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ನಿರಂತರ ಅನ್ಯಾಯವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ವಕೀಲರ ಸಂಘದ ಪ್ರಮುಖರು ಎಚ್ಚರಿಕೆ ನೀಡಿದರು.
ಮಡಿಕೇರಿ ವಕೀಲರ ಸಂಘದ ಉಪಾಧ್ಯಕ್ಷ ಸಂಜಯ್ ರಾಜ್, ಕಾರ್ಯದರ್ಶಿ ಪವನ್ ಪೆಮ್ಮಯ್ಯ, ಜಂಟಿ ಕಾರ್ಯದರ್ಶಿ ರಾಜೇಶ್, ಪದಾಧಿಕಾರಿಗಳಾದ ಸುನಿಲ್ ಜೆ. ಪತ್ರಾವೋ, ದುಗ್ಗಳ ಕಪಿಲ್, ಭಾನುಪ್ರಕಾಶ್ ಮತ್ತಿತರರು ಇದ್ದರು.