ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಆರ್.ಐಶ್ವರ್ಯ, ಕೆ.ಪಿ.ಚಂದ್ರಕಲಾ, ಮುನೀರ್ ಅಹಮ್ಮದ್, ಅನಂತ ಶಯನ ಇತರರಿದ್ದರು.
- ಕುವೆಂಪು ಸಂದೇಶ ಮಾನವ ಜಗತ್ತಿಗೆ ಕನ್ನಡಿ
- ವಿಶ್ವ ಮಾನವ ದಿನಾಚರಣೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ
ಮಡಿಕೇರಿ: ರಾಷ್ಟ್ರಕವಿ ಕುವೆಂಪು ಅವರ ಸಂದೇಶ ಇಡೀ ಮಾನವ ಜಗತ್ತಿಗೆ ಕನ್ನಡಿ ಹಿಡಿದಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ರಾಷ್ಟ್ರಕವಿ ಕುವೆಂಪುರವರ ಜನ್ಮದಿನದ ಪ್ರಯುಕ್ತ ಸೋಮವಾರ ನಡೆದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಾತಿ, ಮತ, ಪಂಥದ ಗಡಿ ದಾಟಿರುವುದು ಅವರ ಕಾವ್ಯ, ಕವನ, ಕೃತಿಗಳಲ್ಲಿ ಕಾಣಬಹುದಾಗಿದೆ. ಪ್ರತಿಯೊಬ್ಬರೂ ಹುಟ್ಟುವಾಗ ವಿಶ್ವಮಾನವರಾಗಿ, ಬೆಳೆಯುತ್ತಾ ಅಲ್ಪಮಾನವರಾಗುತ್ತಾರೆ ಎಂಬುದನ್ನು ಕುವೆಂಪು ಅವರು ಸಾರಿದ್ದಾರೆ. ಕುವೆಂಪು ಅವರ ಕಾದಂಬರಿಗಳು, ಬರಹ, ಸಾಹಿತ್ಯ, ಕವನಗಳು ಇಡೀ ಮಾನವ ಕುಲದ ದೃಷ್ಟಿಕೋನವನ್ನು ಬದಲಾಯಿಸುವಲ್ಲಿ ಸಹಕಾರಿಯಾಗಿದೆ. ಅವರ ಶ್ರೇಷ್ಠ ಗ್ರಂಥ ರಾಮಾಯಣ ದರ್ಶನಂ ವಿವಿಧ ಆಯಾಮಗಳನ್ನು ಒಳಗೊಂಡಿದೆ ಎಂದು ನುಡಿದರು.
ಕುವೆಂಪು ಅವರು ಮೌಢ್ಯ, ಕಂದಾಚಾರ ಹೋಗಲಾಡಿಸಲು ಶ್ರಮಿಸಿದ್ದಾರೆ. ಕಾನೂರು ಹೆಗ್ಗಡತಿ ಕೃತಿಯಲ್ಲಿ ಮಲೆನಾಡಿನ ಚಿತ್ರಣವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಸಮಾಜದಲ್ಲಿ ಯಾರೂ ಮುಖ್ಯರಲ್ಲ. ಯಾರೂ ಅಮುಖ್ಯರಲ್ಲ ಎಂಬುದನ್ನು ಸಾರಿದ್ದಾರೆ ಎಂದರು.
ಜಿ.ಪಂ.ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಮಾತನಾಡಿ, ಕನ್ನಡ ಭಾಷೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕವಿ ಕುವೆಂಪು ಅವರ ದೊಡ್ಡ ಕಂಚಿನ ಪ್ರತಿಮೆಯನ್ನು ನಿರ್ಮಿಸಬೇಕು ಎಂದು ಮನವಿ ಮಾಡಿದ ಅವರು, ಕುವೆಂಪು ಅವರ ಮಂತ್ರ ಮಾಂಗಲ್ಯ ಸರಳ ವಿವಾಹವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಇದರಿಂದ ಉತ್ತಮ ಬದುಕು ಕಾಣಬಹುದು. ಕುವೆಂಪು ಅವರ ರಾಮಾಯಣ ದರ್ಶನಂ, ಮಲೆಗಳಲ್ಲಿ ಮದುಮಗಳು ಸೇರಿದಂತೆ ಹಲವು ಕೃತಿಗಳನ್ನು ಅಧ್ಯಯನ ಮಾಡಬೇಕು. ಮುಂದಿನ ಬಾರಿ ಕುಶಾಲನಗರದಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರು ಯುಗದ ಕವಿ, ಜಗದ ಕವಿ, ರಸ ಋಷಿಗಳ ಕವಿಯಾಗಿದ್ದು, ಕನ್ನಡ ಸಾಹಿತ್ಯ ಲೋಕದ ವಿಸ್ಮಯ. ನವೀಲು, ಪಕ್ಷಿಕಾಶಿ, ಶೂದ್ರ ತಪಸ್ವಿ, ಹಲವು ಸಾಹಿತ್ಯ ಕೃತಿಗಳನ್ನು ರಚಿಸಿದ್ದು, ಕುವೆಂಪು ಅವರಿಗೆ ಪ್ರಶಸ್ತಿಗಳು ಮನೆ ಬಾಗಿಲಿಗೆ ಹುಡುಕಿಕೊಂಡು ಬಂದಿವೆ. ಬೊಮ್ಮನಹಳ್ಳಿಯ ಕಿಂದರಿಜೋಗಿ ಮಕ್ಕಳ ಮನಸ್ಸಿನಲ್ಲಿ ಉಳಿದಿವೆ. ಈ ಕೃತಿಯಲ್ಲಿ ವ್ಯಕ್ತಿತ್ವವನ್ನು ಕತೆಯಲ್ಲಿ ರೂಪಿಸಿದ್ದಾರೆ. ಮಲೆನಾಡಿನ ಚಿತ್ರಣ, ನಿಸರ್ಗದ ಪ್ರೇಮ ಸಾರಿದ್ದಾರೆ. ಕುವೆಂಪು ಅವರ ಒಂದೊಂದು ಕೃತಿಯು ಕೂಡ ಒಂದೊಂದು ಅನುಭವವಾಗಿದೆ ಎಂದು ವಿವರಿಸಿದ ಅವರು, ಕುವೆಂಪು ಅವರ ವಿಚಾರಧಾರೆಗಳನ್ನು ತಿಳಿದುಕೊಂಡಲ್ಲಿ ವೈಜ್ಞಾನಿಕತೆಯನ್ನು ಬೆಳೆಸಿಕೊಳ್ಳಬಹುದು ಎಂದು ಹೇಳಿದರು.
ಜಾನಪದ ಪರಿಷತು ಜಿಲ್ಲಾ ಅಧ್ಯಕ್ಷ ಬಿ.ಜಿ.ಅನಂತ ಶಯನ ಮಾತನಾಡಿ, ಕುವೆಂಪು ಅವರ ಬರಹಗಳಲ್ಲಿ ಹೊಸ ಹೊಸ ಆಲೋಚನೆಗಳು ಹಾಗೂ ವೈಚಾರಿಕತೆಯನ್ನು ಕಾಣಬಹುದಾಗಿದೆ ಎಂದರು.
ಪ್ರಮುಖರಾದ ಎಚ್.ಎಲ್.ದಿವಾಕರ ಮಾತನಾಡಿ, ಕುವೆಂಪು ಅವರ ಪ್ರತಿಮೆ ಇರುವ ಜಾಗವನ್ನು ಉದ್ಯಾನವನ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂದು ಸಲಹೆ ಮಾಡಿದರು.
ಕುವೆಂಪು ಅವರ ರಾಮಾಯಣ ದರ್ಶನಂ ಕುರಿತು ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರವನ್ನು ಗಣ್ಯರು ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ, ಸಾಹಿತಿ ಉ.ರಾ.ನಾಗೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಇತರರು ಇದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಡಿಸಿಸಿ ಬ್ಯಾಂಕ್ ಬಳಿಯಿರುವ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆಗೆ ನಗರಸಭೆ ಅಧ್ಯಕ್ಷೆ ಪಿ.ಕಲಾವತಿ, ತಹಶೀಲ್ದಾರ್ ಶ್ರೀಧರ, ಕೆ.ಪಿ.ಚಂದ್ರಕಲಾ, ತಹಶೀಲ್ದಾರ್ ಶ್ರೀಧರ, ಟಿ.ಪಿ.ರಮೇಶ್, ಕೇಶವ ಕಾಮತ್, ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮದನ್, ಅಂಬೆಕಲ್ಲು ನವೀನ್, ಪೌರಾಯುಕ್ತರಾದ ಎಚ್.ಆರ್.ರಮೇಶ್,
ಆರ್.ಪಿ.ಚಂದ್ರಶೇಖರ್, ಮೋಹನ್ ಕುಮಾರ್ ಇತರರು ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕುಮಾರ್, ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕಿಯರು, ವಿವಿಧ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಇತರರು ಇದ್ದರು.