ಮುಗುಟಗೇರಿಯಲ್ಲಿ ನಡೆದ ಕುಟ್ಟಿಚಾತ ದೇವರ ತೆರೆ ಮಹೋತ್ಸವ ದೃಶ್ಯ. 
ಕೊಡಗು

ಕುಟ್ಟಿಚಾತ ದೇವರ ತೆರೆ ಮಹೋತ್ಸವ ಸಂಭ್ರಮ

ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕುಟ್ಟಿಚಾತ ದೇವರ ತೆರೆ ಮಹೋತ್ಸವ ಇತ್ತೀಚೆಗೆ ವೈಭವದಿಂದ ನೆರವೇರಿತು.
ಉತ್ಸವದ ಅಂಗವಾಗಿ ಮೊದಲ ದಿನ ದೇವತೆರೆ, ಗುಳಿಗತೆರೆ ಹಾಗೂ ನುಚ್ಚುಟ್ಟೆ ತೆರೆಗಳು ಸಂಪ್ರದಾಯಬದ್ಧವಾಗಿ ನಡೆಯಿತು. ವಿಶೇಷ ವೇಷಭೂಷಣ, ಭಜನೆ, ತಾಳಮದ್ದಳೆ ಹಾಗೂ ವಿಧಿ ವಿಧಾನಗಳ ಮಧ್ಯೆ ನಡೆದ ತೆರೆ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆದವು. ರಾತ್ರಿ ದೇವರ ಆರಾಧನೆ, ಪೂಜಾ ಮತ್ತು ಸಂಸ್ಕೃತಿಕ ವೈಭವ ಕಾರ್ಯಗಳು ನಡೆದವು.
ಎರಡನೇ ದಿನ ಚಾಮುಂಡಿ ತೆರೆ ಹಾಗೂ ಕುಟ್ಟಿಚಾತ ತೆರೆಗಳು ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದವು. ತೆರೆ ಸಂದರ್ಭದಲ್ಲಿ ಕಲಾವಿದರು ಪ್ರದರ್ಶಿಸಿದ ಭಾವಭಿನಯ, ಸಂಪ್ರದಾಯದ ಶೈಲಿ ಮತ್ತು ದೈವಿಕ ವಾತಾವರಣ ಎಲ್ಲರ ಮನಸ್ಸಿನಲ್ಲಿ ಭಕ್ತಿ ಭಾವವನ್ನು ಮೂಡಿಸಿತು.
ಸಂಜೆ ದೇವರಿಗೆ ಹರಕೆ ಒಪ್ಪಿಸುವುದು, ಭಂಡಾರ ಹಾಕುವ ಸಂಪ್ರದಾಯಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು. ಮುಗುಟಗೇರಿ, ನಡಿಕೇರಿ ಸುತ್ತಲ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು. ದೇವಸ್ಥಾನ ಆಡಳಿತ ಮಂಡಳಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.