ಯುಗಾದಿ ಹಿನ್ನೆಲೆಯಲ್ಲಿ ಹುಲುಸೆ ಗ್ರಾಮದಲ್ಲಿ ರೈತರು ಮೊದಲ ಉಳುಮೆಗೆ ಚಾಲನೆ ನೀಡಿ ಸಂಭ್ರಮಿಸಿದರು.
ಕುಶಾಲನಗರ: ತಾಲೂಕಿನ ಹುಲುಸೆ ಹಾಗೂ ಕಣಿವೆ ಗ್ರಾಮದಲ್ಲಿ ಯುಗಾದಿ ಅಂಗವಾಗಿ ಗ್ರಾಮದ ಕೃಷಿಕರು ಹೊಸ ವರ್ಷದ ಮೊದಲ ಉಳುಮೆಗೆ ಗುರುವಾರ ಚಾಲನೆ ನೀಡಿದರು.
ಉಳುವ ಎತ್ತು ಹಾಗೂ ಹಸುಗಳನ್ನು ಅಲಂಕರಿಸಿ ನೇಗಿಲು ನೊಗಗಳನ್ನು ತೊಳೆದು ಪೂಜಿಸಿ ಗ್ರಾಮದ ದೇವರ ಗದ್ದೆಯನ್ನು ಉಳುಮೆ ಮಾಡಿ ಸಂಭ್ರಮಿಸಿದರು.
ಇದಕ್ಕೂ ಮೊದಲು ಗ್ರಾಮದ ಬಸವೇಶ್ವರ ದೇವಾಲಯದ ಬಳಿ ಒಂದೆಡೆ ಸೇರಿದ ಕೃಷಿಕರು ಎತ್ತುಗಳನ್ನು ಪೂಜಿಸಿದರು. ಬಳಿಕ ಮಂಗಳ ವಾದ್ಯಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಈ ಸಂದರ್ಭ ಉಳುವ ಅಲಂಕೃತ ಎತ್ತುಗಳ ಸಾಲು ಬರುವಾಗ ದಾರಿಯಲ್ಲಿ ಕರ್ಪೂರ, ಗಂಧದ ಕಡ್ಡಿ ಹಚ್ಚಿ ಈ ವರ್ಷದ ಮಳೆ ಬೆಳೆ ಉತ್ತಮವಾಗಿ ಆಗಲಿ, ಜಾನುವಾರುಗಳನ್ನು ಯಾವುದೇ ರೋಗ ರುಜಿನಗಳು ಬಾಧಿಸದೆ ಇರಲಿ ಎಂದು ಪ್ರಾರ್ಥಿಸಿದರು.
ಗ್ರಾಮ ದೇವತಾ ಸಮಿತಿ ಅಧ್ಯಕ್ಷ ಗುರುನಂಜಪ್ಪ ಮಹೇಶ್ ಮಾತನಾಡಿ, ಗ್ರಾಮದಲ್ಲಿ 90 ಮನೆಗಳಿದ್ದು ಪ್ರತಿ ಮನೆಗಳಿಂದಲೂ ಈ ಹಿಂದೆ ಹೊನ್ನಾರು ಉತ್ಸವದಲ್ಲಿ ಕೃಷಿಕರು ಎತ್ತುಗಳೊಂದಿಗೆ ಸೇರುತ್ತಿದ್ದರು. ಆದರೆ ಇತ್ತೀಚಿನ ದಶಕಗಳಲ್ಲಿ ಟ್ರಾೃಕ್ಟರ್, ಟಿಲ್ಲರ್‌ನಂತಹ ಯಂತ್ರಗಳು ಕೃಷಿ ಭೂಮಿಯನ್ನು ಆಕ್ರಮಿಸಿದ ಬಳಿಕ ಗ್ರಾಮೀಣ ಸಂಸ್ಕೃತಿ ನಶಿಸುತ್ತಿದೆ ಎಂದರು.
ಕಾರ್ಯದರ್ಶಿ ಶಂಕರಾಚಾರಿ, ಪ್ರಮುಖರಾದ ಮಲ್ಲಿಕಾರ್ಜುನ, ನಂಜುಂಡ, ಚಂದ್ರಪ್ಪ, ಕುಮಾರ, ದಿನೇಶ, ರವಿ, ಸದಾಶಿವ, ಹೇಮಂತ್, ಬಸಪ್ಪ, ರಾಜು, ರಮೇಶ್ ಇದ್ದರು.