ಕಂಪ್ಯೂಟರ್ ಕೊಠಡಿ ಶಾಸಕ ಡಾ.ಮಂತರ್‌ಗೌಡ ಉದ್ಘಾಟಿಸಿದರು. ಕೈಗಾರಿಕೋದ್ಯಮಿಗಳ ಸಹಕಾರ ಸಂಘದ ಅಧ್ಯಕ್ಷರಾದ ಟಿ.ಆರ್. ಶರವಣಕುಮಾರ್, ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಸ್.ಎನ್. ರಾಜೇಂದ್ರ ಮತ್ತಿತರರಿದ್ದರು. 
ಕೊಡಗು

ಸಹಕಾರ ಸಂಘಗಳಿಂದ ಸಮಾಜದ ಅಭಿವೃದ್ಧಿ

ಕುಶಾಲನಗರ: ಸಹಕಾರ ಸಂಘಗಳು ತಾವು ಬೆಳೆದು ಸಮಾಜವನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.
ಕುಶಾಲನಗರದ ಸರ್ಕಾರಿ ಪಿಯು ಕಾಲೇಜಿಗೆ ಸ್ಥಳೀಯ ಕೈಗಾರಿಕೋದ್ಯಮಿಗಳು ಹಾಗೂ ವೃತ್ತಿ ನಿರತರ ಸಹಕಾರ ಸಂಘದ ವತಿಯಿಂದ 12 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ಆಧುನಿಕ ಶೈಲಿಯ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘ ಆರಂಭವಾದ ಕೇವಲ 20 ವರ್ಷಗಳಲ್ಲಿ 500 ಕೋಟಿ ರೂ.ವಹಿವಾಟು ನಡೆಸುವ ಮೂಲಕ ಪ್ರತೀ ವರ್ಷವೂ ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವುದು ಇತರ ಸಹಕಾರ ಸಂಸ್ಥೆಗಳಿಗೆ ಆದರ್ಶ ಎಂದು ಅವರು ಶ್ಲಾಘಿಸಿದರು.
ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಬಡ ಪಾಲಕರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುವ ಪಿ.ಯು.ಕಾಲೇಜಿಗೆ ಶರವಣಕುಮಾರ್ ನೇತೃತ್ವದ ಸಹಕಾರಿ ಮಂಡಳಿ ನೀಡಿರುವ ಸೇವೆ ಅರ್ಥಪೂರ್ಣ. ಇದರಿಂದಾಗಿ ಬಡ ವಿದ್ಯಾರ್ಥಿಗಳ ಕಂಪ್ಯೂಟರ್ ಶಿಕ್ಷಣದ ಕನಸು ನನಸಾಗಲಿ ಎಂದು ಹಾರೈಸಿದರು.
ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಮಾತನಾಡಿ, ಅನೇಕ ವರ್ಷಗಳಿಂದ ಸರ್ಕಾರ ಮಾಡಬೇಕಿದ್ದ ಮೂಲ ಸೌಕರ್ಯಗಳನ್ನು ಕೈಗಾರಿಕೋದ್ಯಮಿಗಳ ಸಹಕಾರ ಸಂಘ ಮಾಡಿರುವುದು ಬಹಳ ಉಪಯುಕ್ತ ಸಾಮಾಜಿಕ ಸೇವೆ ಎಂದು ಬಣ್ಣಿಸಿದರು.
ಸಹಕಾರ ಸಂಘದ ಉಪಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ನಿರ್ದೇಶಕರಾದ ರಾಮಕೃಷ್ಣ, ನಾಗೇಂದ್ರಬಾಬು, ಎಲ್.ನವೀನ್, ವಿ.ಸಿ.ಅಮೃತ್, ಎಂ.ವಿ. ನಾರಾಯಣ, ಫ್ರಾನ್ಸಿಸ್ ಡಿಸೋಜಾ, ಕೃತಿಕಾ, ಕೀರ್ತಿ ಲಕ್ಷ್ಮೀ, ಕವಿತಾ, ಸಹಕಾರ ಸಂಘದ ಸಿಇಒ ಶ್ರೀಜೇಶ್, ವ್ಯವಸ್ಥಾಪಕ ಆರ್.ರಾಜು, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಸ್.ಎನ್.ರಾಜೇಂದ್ರ, ಪಿಯು ವಿಭಾಗದ ಪ್ರಾಂಶುಪಾಲೆ ಪಿ.ಜಿ. ಶಾಂತಿ, ಗಂಥಾಲಯ ಅಧಿಕಾರಿ ಎಸ್.ನಂದೀಶ್ ಮತ್ತಿತರರಿದ್ದರು.