ನದಿ ತಟದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸದಸ್ಯರು, ಕುಶಾಲನಗರ ಪುರಸಭೆ ಸಿಬ್ಬಂದಿ ಮತ್ತು ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ಎನ್‌ಎಸ್‌ಎಸ್ ಶಿಬಿರಾರ್ಥಿಗಳು. 
ಕೊಡಗು

ವಿವಿಧ ಸಂಘ-ಸಂಸ್ಥೆಗಳಿಂದ ದೇವಾಲಯಗಳು, ನದಿ ತಟಗಳಲ್ಲಿ ಸ್ವಚ್ಛತಾ ಕಾರ್ಯ

ಕುಶಾಲನಗರ: ಕಾವೇರಿ ನದಿ ಸ್ವಚ್ಛತಾ ಆಂದೋಲನದ ಹತ್ತನೇ ವರ್ಷದ ಸ್ವಚ್ಛತಾ ಅಭಿಯಾನ ಸಪ್ತಾಹ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಕುಶಾಲನಗರದ ವಿವಿಧೆಡೆ ದೇವಾಲಯಗಳು ಹಾಗೂ ಕಾವೇರಿ ನದಿ ತಟಗಳ ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕುಶಾಲನಗರದ ಮಾದಾಪಟ್ಟಣ ಬಳಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಎದುರು ವಿವಿಧ ಸಂಘ -ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಕುಶಾಲನಗರ ಪುರಸಭೆ ಮತ್ತು ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ಎನ್‌ಎಸ್‌ಎಸ್ ತಂಡದ ಸಹಯೋಗದೊಂದಿಗೆ ಕಾವೇರಿ ನದಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನದಿ ತಟದ ಸೋಪಾನ ಕಟ್ಟೆಯಲ್ಲಿ ತುಂಬಿದ್ದ ಮಣ್ಣು ತೆರವುಗೊಳಿಸಲಾಯಿತು. ನದಿ ತಟದ ಪೊದೆಗಳನ್ನು ಮತ್ತು ಎಲ್ಲೆಂದರಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.
ಕುಶಾಲನಗರ ಪುರಸಭೆಯ ಜೆಸಿಬಿ ಯಂತ್ರ ಸಹಕಾರದೊಂದಿಗೆ ನದಿ ತಟವನ್ನು ಶುಚಿಗೊಳಿಸಲಾಯಿತು.
ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್ ಮಾತನಾಡಿ, ನದಿ ತಟಗಳನ್ನು ಸ್ವಚ್ಛವಾಗಿ ಇಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಮಲಿನ ನೀರು, ತ್ಯಾಜ್ಯ ವಸ್ತುಗಳನ್ನು ನದಿಗೆ ನೇರವಾಗಿ ಸೇರದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಕ್ಷೇತ್ರದ ಮೂಲಕ ರಾಜ್ಯದ ಎಲ್ಲೆಡೆ ಒಂದು ವಾರಗಳ ಕಾಲ ನಡೆಯುತ್ತಿರುವ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಕೋರಿದರು.
ಯೋಜನೆಯ ಕುಶಾಲನಗರ ವಲಯ ಮೇಲ್ವಿಚಾರಕ ನಾಗರಾಜ್, ಸೇವಾ ಪ್ರತಿನಿಧಿ ಜಯಲಕ್ಷ್ಮೀ, ಉಪಾಧ್ಯಕ್ಷೆ ದಾಕ್ಷಾಯಿಣಿ, ಶೌರ್ಯ ತಂಡದ ಸ್ವಯಂಸೇವಕರು, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕರಾದ ಚಂದ್ರಮೋಹನ್, ಧರಣಿ, ಎನ್‌ಎಸ್‌ಎಸ್ ತಂಡದ ಸಹಸಂಚಾಲಕರಾದ ಕೆ.ಪಿ . ವಿನಯ್, ಪುರಸಭೆ ಪೌರಕಾರ್ಮಿಕರ ಮೇಲ್ವಿಚಾರಕರಾದ ಗಣೇಶ್ ಮತ್ತಿತರರಿದ್ದರು.
ಶ್ರದ್ಧಾಕೇಂದ್ರ ಸ್ವಚ್ಛತಾ ಅಭಿಯಾನದ ಅಂಗವಾಗಿ ಕೂಡಿಗೆ ವಿಜಯನಗರ ಶ್ರೀದುರ್ಗಾಪರಮೇಶ್ವರಿ ದೇವಾಲಯ ಕುಶಾಲನಗರ ಎಚ್‌ಆರ್‌ಪಿ ಕಾಲನಿಯ ಶ್ರೀಸುಬ್ರಹ್ಮಣ್ಯ ದೇವಾಲಯ, ಕುಶಾಲನಗರ ಕೂಡ್ಲೂರು ದೊಡ್ಡಮ್ಮ ದೇವಾಲಯ ಮತ್ತಿತರ ಕಡೆ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ನಾಗರಾಜ್ ನೇತೃತ್ವದಲ್ಲಿ ಸೇವಾ ಪ್ರತಿನಿಧಿ ನಿರ್ಮಲಾ ಮತ್ತು ಸದಸ್ಯರು ಹಾಗೂ ಶೌರ್ಯ ತಂಡದ ಕಾರ್ಯಕರ್ತರು ಇದ್ದರು.