ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನಿವೃತ್ತ ಕಲಾ ಶಿಕ್ಷಕ ಉ.ರಾ.ನಾಗೇಶ್, ಸಂಘದ ಮಾಜಿ ಅಧ್ಯಕ್ಷ ವಿಜಯೇಂದ್ರ ಹಾಗೂ ಸಂಘದ ಕಾನೂನು ಸಲಹೆಗಾರ ಕೆ.ಎಸ್.ವೆಂಕಟರಮಣರಾವ್ ದಂಪತಿಯನ್ನು ಸನ್ಮಾನಿಸಲಾಯಿತು.
ಕುಶಾಲನಗರ: ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆಯನ್ನು ಶನಿವಾರ ಸಂಘದ ಕಟ್ಟಡದಲ್ಲಿ ಏರ್ಪಡಿಸಲಾಗಿತ್ತು.
ಸಂಘದ ಅಧ್ಯಕ್ಷ ಕೆ.ಎಸ್.ರಾಜಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಆರಂಭದಲ್ಲಿ ಸಂಘದ ನಿರ್ದೇಶಕ ಶ್ರೀಹರ್ಷ ಕಳೆದ ವಾರ್ಷಿಕ ಸಾಲಿನ ವರದಿಯನ್ನು ಓದಿದರೆ, ಖಜಾಂಚಿ ಶ್ರೀದೇವಿ ವೆಂಕಟರಮಣರಾವ್ ಲೆಕ್ಕಪತ್ರ ವರದಿ ಮಂಡಿಸಿದರು.
ಕಳೆದ ಮೂರು ದಶಕಗಳಿಂದ ನನೆಗುದಿಗೆ ಬಿದ್ದಿರುವ ಮಾಜಿ ಮುಖ್ಯಮಂತ್ರಿ ದಿ. ಆರ್.ಗುಂಡೂರಾವ್ ಅವರಿಂದ ಸಂಘಕ್ಕೆ ದಾನವಾಗಿ ನೀಡಿದ್ದ ಕಟ್ಟಡದ ಸ್ವಾಯತ್ತತೆ ಹಾಗೂ ಮರು ನಿರ್ಮಾಣದ ಬಗ್ಗೆ ಸಾಕಷ್ಟು ಚರ್ಚೆ ನಡೆದು ವಕೀಲ ನಾಗೇಂದ್ರ ಬಾಬು ಮತ್ತು ಮಂಜುನಾಥ ಗುಂಡೂರಾವ್ ಅವರ ಜಂಟಿ ಪ್ರಯತ್ನದಿಂದ ಹೊಸ ಕಟ್ಟಡಕ್ಕೆ ಅನುಮತಿ ದೊರಕಿಸುವಂತೆಯೂ, ಆ ನಂತರ ಶಾಸಕರ ವಾಗ್ದಾನದ ಮೊತ್ತವನ್ನು ಒಳಗೊಂಡಂತೆ ಉಳಿದ ಹಣವನ್ನು ಕ್ರೋಢೀಕರಿಸಿ ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳುವುದೆಂದು ತೀರ್ಮಾನಿಸಲಾಯಿತು.
ದಿ.ಗುಂಡೂರಾವ್ ಅವರ ಪುತ್ರ ಮಹೇಶ್ ಗುಂಡೂರಾವ್‌ರ ಆಶಯದಂತೆ ಕಟ್ಟಡ ನಿರ್ಮಾಣದ ಪ್ರತಿಯೊಂದು ಹಂತದಲ್ಲೂ ಕಾನೂನು ಬದ್ಧತೆಯನ್ನು ಕಾಯ್ದುಕೊಳ್ಳುವಂತೆ ಅಭಿಪ್ರಾಯಿಸಲಾಯಿತು.
ನಿವೃತ್ತ ಕಲಾ ಶಿಕ್ಷಕ ಉ.ರಾ.ನಾಗೇಶ್, ಸಂಘದ ಮಾಜಿ ಅಧ್ಯಕ್ಷ ವಿಜಯೇಂದ್ರ, ಸಂಘದ ಕಾನೂನು ಸಲಹೆಗಾರ ಕೆ.ಎಸ್.ವೆಂಕಟರಮಣ ರಾವ್ ದಂಪತಿ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಎಂಟನೇ ತರಗತಿ, ಪಿಯುಸಿ ಎರಡನೇ ವರ್ಷ ಮತ್ತು ನಂತರದ ಉನ್ನತ ಶಿಕ್ಷಣ ಪಡೆಯುವ ಅರ್ಹ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಯಿತು.
ಉಪಾಧ್ಯಕ್ಷ ಕೆ.ಕೆ.ಸುಬ್ಬರಾಮು, ಕಾರ್ಯದರ್ಶಿ ಅನಿಲ್ ಕೆದಿರಾಯ, ನಿರ್ದೇಶಕರಾದ ರಜನಿ ಪ್ರದೀಪ್, ಶರ್ಮಿಳಾ ಮಂಜುನಾಥ, ಗುಂಡೂರಾವ್, ನಿರ್ದೇಶಕರಾದ ಎಂ.ವಿ.ನಾರಾಯಣ, ಬಿ.ಆರ್.ರಾಜೀವ, ಶಶಿಧರ್, ಸತೀಶ್, ಮಾಜಿ ಅಧ್ಯಕ್ಷ ಬಿ.ಎಸ್.ರಾಧಾಕೃಷ್ಣ ಹಾಜರಿದ್ದರು.