ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಎಚ್.ವಿ.ಶಿವಪ್ಪ, ಡಾ.ಸೀನಪ್ಪ, ಡಾ.ರಮೇಶ್ ನಾಗರಾಜ್, ಕೆ.ಐ.ಪರಶಿವಮೂರ್ತಿ ಮತ್ತಿತರರು ಇದ್ದರು.
ಕುಶಾಲನಗರ: ಕುಶಾಲನಗರದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕೊಡಗಿನ ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಹೇಳಿದರು.
ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಖಾಸಗಿ ಕಾಲೇಜುಗಳಿಗೆ ಸಮಾನವಾಗಿ ಅಥವಾ ಅದಕ್ಕಿಂತ ಉತ್ತಮವಾದ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದೆ. ವಿಶೇಷವಾಗಿ ಕಾಲೇಜಿನಲ್ಲಿ ಹೆಣ್ಣು ಮಕ್ಕಳ ಹೆಚ್ಚಿನ ಭಾಗವಹಿಸುವಿಕೆ ಶ್ಲಾಘನೀಯವಾಗಿದೆ ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಎಚ್.ವಿ.ಶಿವಪ್ಪ ಮಾತನಾಡಿ, ಅಭಿವೃದ್ಧಿಯ ಹಾದಿಯಲ್ಲಿ ಕಾಲೇಜು ವೇಗವಾಗಿ ಸಾಗುತ್ತಿದೆ. ಕಾಲೇಜಿನಲ್ಲಿ 18 ಜನರು ಪಿಎಚ್.ಡಿ ಪದವೀಧರ ಪ್ರಾಧ್ಯಾಪಕರು ಕಾರ್ಯನಿರ್ವಹಿಸುತ್ತಿರುವುದು ಗ್ರಾಮೀಣ ವಿದ್ಯಾರ್ಥಿಗಳಿಗೆ ದೊಡ್ಡ ಉಪಯೋಗ ಆಗುತ್ತಿದೆ. ಎಲ್ಲ ವಿಭಾಗಗಳಲ್ಲೂ ಅಂತಿಮ ವರ್ಷದ ವಿದ್ಯಾರ್ಥಿಗಳು ಶೇ.100 ಫಲಿತಾಂಶ ಸಾಧಿಸಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ವಿಶೇಷವಾಗಿ ಸಿವಿಲ್ ವಿಭಾಗ ದ್ವಿತೀಯ ರ‌್ಯಾಂಕ್ ಪಡೆಯುವುದರ ಮೂಲಕ ಕಾಲೇಜಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದರು.
ಕರ್ನಾಟಕ ಸರ್ಕಾರದ ಐಟಿ-ಬಿಟಿ ಇಲಾಖೆಯಿಂದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಇನ್ನೋವೇಶನ್ ಲ್ಯಾಬ್ ಸ್ಥಾಪನೆಗೆ 1.25 ಕೋಟಿ ರೂ.ಅನುದಾನ ಮಂಜೂರಾಗಿರುವುದು ಕಾಲೇಜಿನ ಅಭಿವೃದ್ಧಿಗೆ ಮಹತ್ವದ ಮೈಲಿಗಲ್ಲಾಗಿದೆ ಎಂದರು.
ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಸೀನಪ್ಪ ಮಾತನಾಡಿ, ಇಂದಿನ ಯುಗದಲ್ಲಿ ತಾಂತ್ರಿಕ ಶಿಕ್ಷಣದ ಮಹತ್ವವನ್ನು ವಿವರಿಸಿ, ವಿದ್ಯಾರ್ಥಿಗಳು ಉದ್ಯೋಗಾನ್ವೇಷಕರಿಗಿಂತ ಉದ್ಯಮಿಗಳಾಗಬೇಕು ಎಂದು ಹೇಳಿದರು.
ಕ್ರೀಡಾ ವಿಭಾಗದ ಮುಖ್ಯಸ್ಥ ಡಾ.ರಮೇಶ್ ನಾಗರಾಜ್ ವಾರ್ಷಿಕ ಕ್ರೀಡಾ ವರದಿ ಮಂಡಿಸಿದರು. ಕಾಲೇಜಿನ ಪ್ರಾಚಾರ್ಯ ಕೆ.ಐ.ಪರಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಚೇರಿ ಅಧೀಕ್ಷಕಿ ರೂಪಾ, ಇಸಿ ವಿಭಾಗದ ಡಾ.ಅನಿಲ್ ಕುಮಾರ್, ಭೌತ ಶಾಸ್ತ್ರ ವಿಭಾಗದ ಹೇಮಲತಾ, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.